Friday, 22nd November 2024

Maryade Prashne Movie: ಆಟೋ ಚಾಲಕರೊಂದಿಗೆ ಶಂಕರ್‌ ನಾಗ್‌ ಜನ್ಮದಿನ ಆಚರಿಸಿದ ‘ಮರ್ಯಾದೆ ಪ್ರಶ್ನೆ’ ಚಿತ್ರತಂಡ

Maryade prashne Movie

ಬೆಂಗಳೂರು: ಕರ್ನಾಟಕದಲ್ಲಿ ಶಂಕರ್ ನಾಗ್ ಜನ್ಮದಿನ ‘ಚಾಲಕರ ದಿನಾಚರಣೆ’ ಎಂದೇ ಪ್ರಸಿದ್ಧ.‌ ನ. 9 ಶಂಕರ್‌ ನಾಗ್‌ ಅವರ ಜನ್ಮದಿನ. ಆ ಪ್ರಯುಕ್ತ ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು ‘ಮರ್ಯಾದೆ ಪ್ರಶ್ನೆ’ (Maryade Prashne Movie) ಚಿತ್ರತಂಡದೊಂದಿಗೆ ಚಾಲಕರ ದಿನವನ್ನು ಆಚರಿಸಿದರು. ‘ಮರ್ಯಾದೆ ಪ್ರಶ್ನೆ’ ಚಿತ್ರತಂಡದ ಜತೆಗೆ ʼನಮ್ಮ ಯಾತ್ರಿʼ ಆ್ಯಪ್‌ನ ರಾಜೀವ್ ಕೂಡ ಭಾಗವಹಿಸಿದ್ದರು.

“ನಮ್ಮ ಯಾತ್ರಿʼ ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆ್ಯಪ್. ಕನ್ನಡಿಗರ ಜತೆ ನಿಲ್ಲುವುದು ನಮ್ಮ ಉದ್ದೇಶ.‌ ಅದೇ ಉದ್ದೇಶದಿಂದ ಚಾಲಕರ ಪಾತ್ರವಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ತಂಡದ ಜತೆ ನಿಂತಿದ್ದೇವೆ” ಎಂದರು.

ಆರ್‌.ಜೆ. ಪ್ರದೀಪ್‌ ಅವರು ‘ಸಕ್ಕತ್ ಸ್ಟುಡಿಯೋ’ವನ್ನು ಶಂಕರ್ ನಾಗ್ ಅವರ ಜನ್ಮದಿನದಂದು 2017ರಲ್ಲಿ ಆರಂಭಿಸಿದರು. 8 ವರ್ಷಗಳ ಹಿಂದೆ ಶಂಕರ್ ನಾಗ್ ಹಾಡುಗಳ ಅಕಾಪೆಲ್ಲದೊಂದಿಗೆ ಶುರುವಾದ ಸಂಸ್ಥೆ ಇಂದು ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಸಕ್ಕತ್ ಸ್ಟುಡಿಯೋದ ಮೊದಲ ಚಿತ್ರ.

ಚಿತ್ರದಲ್ಲಿ ‘ಡ್ರೈವರ್’ ಪಾತ್ರ ಮಾಡಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ತಮ್ಮ ಬಳಗಕ್ಕೆ ಬರಮಾಡಿಕೊಂಡರು‌‌. ಇದೇ ಸಂದರ್ಭದಲ್ಲಿ ʼಮರ್ಯಾದೆ ಪ್ರಶ್ನೆʼ ಚಿತ್ರದ ಆಟೋ ಸ್ಟಿಕ್ಕರ್ಸ್ ಹಾಕುವುದನ್ನು ಶುರು ಮಾಡಲಾಯಿತು.

ಮಾತನಾಡಿದ ಪೂರ್ಣಚಂದ್ರ ಮೈಸೂರು ಅವರು “ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ಮಾಡಿದ್ದೇನೆ.‌ ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. ‘ಮರ್ಯಾದೆ ಪ್ರಶ್ನೆ’ ಮಿಡಲ್ ಕ್ಲಾಸ್ ಜೀವನ ತೋರಿಸುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ” ಎಂದರು.

‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ 5 ಹಾಡುಗಳಿದ್ದು, ಈಗಾಗಲೇ 2 ಹಾಡುಗಳು ಬಿಡುಗಡೆಯಾಗಿವೆ. ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ‘ಸಕುಟುಂಬ ಸಮೇತ’, ‘ಗೌಳಿ’ ಮತ್ತು ‘ಚಾರ್ಲಿ’ ಸಿನಿಮಾಗಳಿಗೆ ಕೆಲಸ ಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಇದೇ ತಿಂಗಳ 12ಕ್ಕೆ ಟ್ರೈಲರ್‌ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ.

ಈ ಸುದ್ದಿಯನ್ನೂ ಓದಿ: Maryade Prashne Movie: ‘ಮರ್ಯಾದೆ ಪ್ರಶ್ನೆ’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ರಿಲೀಸ್‌

ಈಗಾಗಲೇ ʼಲೂಸ್ ಕನೆಕ್ಷನ್ʼ, ʼಹನಿಮೂನ್ʼ ವೆಬ್ ಸಿರೀಸ್‌ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌.ಜೆ.ಪ್ರದೀಪ್‌ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪ್‌ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ ನಿರ್ದೇಶನವಿದೆ. ‘ಮರ್ಯಾದೆ ಪ್ರಶ್ನೆʼ ನ. 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಿಶ್ವವಾಣಿ ಟಿವಿ ಫೇಸ್‌ಬಕ್‌ ಪೇಜ್ ಫಾಲೋ ಮಾಡಿ