Monday, 25th November 2024

WI vs ENG: ಇಂಗ್ಲೆಂಡ್‌ ವಿರುದ್ದದ ಆರಂಭಿಕ ಎರಡು ಟಿ20ಐ ಪಂದ್ಯಗಳಿಗೆ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

Nicholas Pooran, Andre Russell, Hetmyer back in West Indies squad for 1st 2 T20Is

ನವದೆಹಲಿ: ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯ (WI vs ENG) ಆರಂಭಿಕ ಎರಡು ಪಂದ್ಯಗಳಿಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಹಿರಿಯ ಆಟಾರರಾದ ನಿಕೋಲಸ್‌ ಪೂರನ್‌, ಆಂಡ್ರೆ ರಸೆಲ್‌, ಶಿಮ್ರಾನ್‌ ಹೆಟ್ಮಾಯೆರ್‌ ಅವರು ಚುಟುಕು ತಂಡಕ್ಕೆ ಮರಳಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಶ್ರೀಲಂಕಾ ಪ್ರವಾಸಕ್ಕೆ ಈ ಮೂವರು ಆಟಗಾರರು ಅಲಭ್ಯರಾಗಿದ್ದರು. ಈ ಮೂವರು ಆಟಗಾರರ ಸೇರ್ಪಡೆಯಿಂದ ಫ್ಯಾಬಿಯನ್‌ ಅಲೆನ್‌, ಎಲಿಕ್‌ ಅಥಾಲಾಝೆ, ಆಂಡ್ರೆ ಫ್ಲಚರ್‌ ಹಾಗೂ ಶಮರ್‌ ಜೋಸೆಫ್‌ ಅವರು ತಂಡದಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯು ನವೆಂಬರ್‌ 9 ರಂದು ಆರಂಭವಾಗಲಿದೆ.

ಇಂಗ್ಲೆಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ಶೇಯ್‌ ಹೋಪ್‌ ಅವರೊಂದಿಗೆ ಜಗಳ ಮಾಡಿಕೊಂಡು ಪೆವಿಲಿಯನ್‌ಗೆ ವಾಪಸ್‌ ಆಗಿದ್ದ ವೇಗಿ ಆಲ್ಝಾರಿ ಜೋಸೆಫ್‌ ಅವರನ್ನು ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಂಡೀಸ್‌ ವೇಗದ ಬೌಲಿಂಗ್‌ ವಿಭಾಗದಲ್ಲಿ ಶಮರ್‌ ಜೋಸೆಫ್‌, ಟೆರೆನ್ಸ್‌ ಹಿಂಡ್ಸ್‌ ಹಾಗೂ ಮ್ಯಾಥ್ಯೂ ಫಾರ್ಡ್‌ ಆಡಲಿದ್ದಾರೆ. ಮ್ಯಾಥ್ಯೂ ಫಾರ್ಡ್‌ ಅವರು ಆಲ್ಜಾರಿ ಜೋಸೆಫ್‌ ಅವರ ಸ್ಥಾನವನ್ನು ತುಂಬಿದ್ದಾರೆ. ಇನ್ನು ಪ್ರಮುಖ ಸ್ಪಿನ್ನರ್‌ಗಳಾಗಿ ಅಕೀಲ್‌ ಹುಸೇನ್‌ ಹಾಗೂ ಗುಡಕೇಶ್‌ ಮಾಟಿ ಆಡಿದರೆ, ರಾಸ್ಟನ್‌ ಚೇಸ್‌ ಕೂಡ ಸ್ಪಿನ್‌ ಮೋಡಿ ಮಾಡಬಲ್ಲರು.

ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ಧ ಟಿ20ಐ ಸರಣಿಯನ್ನು ಕೂಡ ಗೆಲ್ಲಬೇಕೆಂಬ ಉತ್ಸುಕತೆಯನ್ನು ವೆಸ್ಟ್‌ ಇಂಡೀಸ್‌ ತಂಡದ ಹೆಡ್‌ ಕೋಚ್‌ ಡೆರೆನ್‌ ಸಾಮಿ ಹೊಂದಿದ್ದಾರೆ.

“ಅನುಭವಿ ಆಟಗಾರರೊಂದಿಗೆ ವೆಸ್ಟ್‌ ಇಂಡೀಸ್‌ ತಂಡ ಸಂಪೂರ್ಣವಾಗಿ ಹೊಂದಿಕೊಂಡಿದೆ. ಆದರೆ, ತಂಡದ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡುವುದು ಇಲ್ಲಿ ಕಠಿಣ ಸಂಗತಿಯಾಗಿದೆ. ಏಕೆಂದರೆ ಪ್ಲೇಯಿಂಗ್‌ XIನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಸವಾಲು ಎದುರಾಗಿದೆ. ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ನಾವು ಎದುರಿಸುತ್ತಿದ್ದು, ಇದೀಗ ಆಯ್ಕೆ ಮಾಡಿರುವ ತಂಡ ಕಠಿಣ ಹೋರಾಟ ನಡೆಸಿ ಸರಣಿಯನ್ನು ಗೆದ್ದುಕೊಡಲಿದೆ ಎಂಬ ವಿಶ್ವಾಸ ನನಗಿದೆ,” ಎಂದು ಹೆಡ್‌ ಕೋಚ್‌ ಡೆರೆನ್‌ ಸಾಮಿ ಹೇಳಿದ್ದಾರೆ.

ಇಂಗ್ಲೆಂಡ್‌ ವಿರುದ್ದ ಆರಂಭಿಕ ಎರಡು ಪಂದ್ಯಗಳಿಗೆ ವಿಂಡೀಸ್‌ ತಂಡ

ರೊವ್ಮನ್‌ ಪೊವೆಲ್‌ (ನಾಯಕ), ರಾಸ್ಟನ್‌ ಚೇಸ್‌, ಮ್ಯಾಥ್ಯೂ ಫಾರ್ಡ್‌, ಶಿಮ್ರಾನ್‌ ಹೆಟ್ಮಾಯರ್‌, ಟೆರೆನ್ಸ್‌ ಹಿಂಡ್ಸ್‌, ಶೇಯ್‌ ಹೋಪ್‌, ಅಕೀಲ್‌ ಹುಸೇನ್‌, ಶಮರ್‌ ಜೋಸೆಫ್‌, ಬ್ರೆಂಡನ್‌ ಕಿಂಗ್‌ ಎವಿನ್‌ ಲೆವಿಸ್‌, ಗುಡಕೇಶ್‌ ಮಾಟಿ, ನಿಕೋಲಸ್‌ ಪೂರನ್‌, ಆಂಡ್ರೆ ರಸೆಲ್‌, ಶೆರ್ಫೆನ್‌ ಋದರ್‌ಫೋರ್ಡ್‌, ರೊಮಾರಿಯೊ ಶೆಫರ್ಡ್‌

ಟಿ20ಐ ಸರಣಿಗೆ ಇಂಗ್ಲೆಂಡ್‌ ತಂಡ

ಜೋಸ್‌ ಬಟ್ಲರ್‌ (ನಾಯಕ), ಜೋಫ್ರಾ ಆರ್ಚರ್‌, ಜಾಕೊಬ್‌ ಬೆಥೆಲ್‌, ಜಾಫರ್‌ ಚೊಹಾನ್‌, ಸ್ಯಾಮ್‌ ಕರನ್‌, ವಿಲ್‌ ಜ್ಯಾಕ್ಸ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಸಕಿಬ್‌ ಮಹ್ಮೂದ್‌, ಡಾನ್‌ ಮೌಸ್ಲೀ, ಜೇಮಿ ಓವರ್ಟನ್‌, ಆದಿಲ್‌ ರಶೀದ್‌, ಫಿಲ್‌ ಸಾಲ್ಟ್‌, ರೀಸ್‌ ಟಾಪ್ಲೀ, ಜಾನ್‌ ಟರ್ನರ್‌

ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ಟಿ20ಐ ಸರಣಿಯ ವೇಳಾಪಟ್ಟಿ

ಮೊದಲನೇ ಟಿ20ಐ ಪಂದ್ಯ: ನವೆಂಬರ್‌ 9, ಕೆನ್ಸಿಂಗ್ಟನ್‌ ಓವಲ್‌, ಬಾರ್ಬಡೋಸ್‌
ಎರಡನೇ ಟಿ20ಐ ಪಂದ್ಯ: ನವೆಂಬರ್‌ 10, ಕೆನ್ಸಿಂಗ್ಟನ್‌ ಓವಲ್‌, ಬಾರ್ಬಡೋಸ್‌
ಮೂರನೇ ಟಿ20ಐ ಪಂದ್ಯ: ನವೆಂಬರ್‌ 14, ಡೆರೆನ್‌ ಸಾಮಿ ಸ್ಟೇಡಿಯಂ, ಸೇಂಟ್‌ ಲೂಸಿಯಾ
ನಾಲ್ಕನೇ ಟಿ20ಐ ಪಂದ್ಯ: ನವೆಂಬರ್‌ 16, ಡೆರೆನ್‌ ಸಾಮಿ ಸ್ಟೇಡಿಯಂ, ಸೇಂಟ್‌ ಲೂಸಿಯಾ
ಐದನೇ ಟಿ20ಐ ಪಂದ್ಯ: ನವೆಂಬರ್‌ 17, ಡೆರೆನ್‌ ಸಾಮಿ ಸ್ಟೇಡಿಯಂ, ಸೇಂಟ್‌ ಲೂಸಿಯಾ

ಈ ಸುದ್ದಿಯನ್ನು ಓದಿ: WI vs ENG: ಕಾರ್ಟಿ-ಕಿಂಗ್‌ ಶತಕಗಳ ಅಬ್ಬರಕ್ಕೆ ಶರಣಾದ ಆಂಗ್ಲರು, ವಿಂಡೀಸ್‌ಗೆ ಒಡಿಐ ಸರಣಿ!