ನವದೆಹಲಿ: ಕ್ರಿಕೆಟ್ ಪಂದ್ಯವೊಂದರಲ್ಲಿ ಶತಕ, ದ್ವಿಶತಕ ಅಥವಾ ತ್ರಿಶತಕ ಸಿಡಿಸಿರುವುದನ್ನು ನೋಡಿದ್ದೇವೆ. ಆದರೆ, ಹರಿಯಾಣದ ಯುವ ಬ್ಯಾಟ್ಸ್‌ಮನ್ ಯಶ್ವರ್ಧನ್ ದಲಾಲ್ ಅವರು ಚತುರ್ಭುಜ ಶತಕ ಸಿಡಿಸಿ ಕ್ರಿಕೆಟ್ ಲೋಕವನ್ನು ತನ್ನತ್ತಾ ಸೆಳೆದಿದ್ದಾರೆ. ಹೌದು 2024-25ರ ಸಾಲಿನ ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಮುಂಬೈ ವಿರುದ್ದದ ಪಂದ್ಯದಲ್ಲಿ ಯಶ್ವರ್ಧನ್ ದಲಾಲ್ ಅವರು ಸ್ಪೋಟಕ ಬ್ಯಾಟಿಂಗ್ ಮೂಲಕ ನೂತನ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಪಂದ್ಯದ ಎರಡನೇ ದಿನವಾದ ಶನಿವಾರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಯಶ್ವರ್ಧನ್ ದಲಾಲ್ ಅವರು 463 ಎಸೆತಗಳಲ್ಲಿ ಬರೋಬ್ಬರಿ 46 ಬೌಂಡರಿಗಳು ಹಾಗೂ 12 ಸಿಕ್ಸರ್‌ಗಳ ಮೂಲಕ 426 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ಹಿಂದಿನ ಆವೃತ್ತಿಯ ಟೂರ್ನಿಯಲ್ಲಿ 312 ರನ್‌ಗಳನ್ನು ಕಲೆ ಹಾಕಿದ್ದ ಉತ್ತರ ಪ್ರದೇಶ ತಂಡದ ಸಮೀರ್ ರಿಜ್ವಿ ಅವರ ದಾಖಲೆಯನ್ನು ಇದೀಗ ದಲಾಲ್ ಮುರಿದಿದ್ದಾರೆ.
ಹರಿಯಾಣದ ಸುಲ್ತಾನ್‌ಪುರ್‌ನಲ್ಲಿರುವ ಗುರುಗ್ರಾಮ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಹರಿಯಾಣ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶ್ವರ್ಧನ್ ದಲಾಲ್ ಮತ್ತು ಅರ್ಷ್ ರಂಗ ಅವರು ಮುರಿಯದ ಮೊದಲನೇ ವಿಕೆಟ್‌ಗೆ 410 ರನ್‌ಗಳನ್ನು ಕಲೆ ಹಾಕಿದ್ದರು. ಈ ಜೊತೆಯಾಟದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ ಶತಕಗಳನ್ನು ಸಿಡಿಸಿದ್ದಾರೆ.
ದಲಾಲ್ ಜೊತೆ ಮತ್ತೊಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟ್ ಮಾಡುತ್ತಿದ್ದ ಅರ್ಷ್ ರಂಗ ಅವರು 151ರನ್‌ಗಳನ್ನು ಸಿಡಿಸಿ ಅಂತಿಮವಾಗಿ ವಿಕೆಟ್ ಒಪ್ಪಿಸಿದರು. ಯಶ್ವರ್ಧನ್ ದಲಾಲ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹರಿಯಾಣ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವು ನೀಡಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಹರಿಯಾಣ ತಂಡ ಎಂಟು ವಿಕೆಟ್‌ಗಳ ನಷ್ಟಕ್ಕೆ 732 ರನ್‌ಗಳನ್ನು ಕಲೆ ಹಾಕಿದೆ.
ಮುಂಬೈ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬೋಸಲೆ 58 ಓವರ್‌ಗಳಿಗೆ 129 ರನ್‌ಗಳನ್ನು ನೀಡಿ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದರು. ಆದರೆ, ಎರಡನೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ ಯಶ್ವರ್ಧನ್ ದಲಾಲ್ ಅವರು ಅಜೇಯ 426 ರನ್‌ಗಳನ್ನು ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಹರಿಯಾಣ ತಂಡದಲ್ಲಿ ಎರಡು ವಿಕೆಟ್‌ಗಳು ಬಾಕಿ ಇವೆ.
2024ರ ಫೆಬ್ರವರಿಯಲ್ಲಿ ಸಮೀರ್ ರಿಜ್ವಿ ಅವರು ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ತ್ರಿಶತಕ ಸಿಡಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಸೌರಾಷ್ಟ್ರ ವಿರುದ್ದದ ಪಂದ್ಯದಲ್ಲಿ ಅವರು 266 ಎಸೆತಗಳಲ್ಲಿ 312 ರನ್‌ಗಳನ್ನು ಗಳಿಸಿದ್ದರು. ಇದೀಗ 9 ತಿಂಗಳ ಅಂತರದಲ್ಲಿಯೇ ಯಶ್ವರ್ಧನ್ ದಲಾಲ್ ಅವರು ಮುರಿದಿದ್ದಾರೆ.