ನವದೆಹಲಿ: ಮುಂಬರುವ 2024-25ರ ಸಾಲಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಮೊದಲನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಪರ್ತ್ನಲ್ಲಿ ಆರಂಭವಾಗಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡಕ್ಕೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಭಾರತ, ಯುವ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅನುಭವಿ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಸರಣಿಯಲ್ಲಿ ಭಾರತ ತಂಡಕ್ಕೆ ಅಗತ್ಯವಿರುವ ಮೂವರು ಸ್ಟಾರ್ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
- ಮೊಹಮ್ಮದ್ ಶಮಿ
ಭಾರತ ತಂಡದ ಅತ್ಯಂತ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮೊಹಮ್ಮದ್ ಶಮಿ ಕೊನೆಯ ಬಾರಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಗಾಯದ ಕಾರಣ ಅವರು ಅಂದಿನಿಂದ ಕ್ರಿಕೆಟ್ ಆಡುತ್ತಿಲ್ಲ. ಫಿಟ್ನೆಸ್ನಿಂದಾಗಿ ಅವರು ಈ ಪ್ರವಾಸದ ಭಾಗವಾಗಿರಲು ಸಾಧ್ಯವಾಗಲಿಲ್ಲ. ಶಮಿ ಅವರ ಸೀಮ್ ಬೌಲಿಂಗ್ ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತಿತ್ತು. ಆದರೆ, ಅವರು ಅನುಪಸ್ಥಿತಿಯು ಭಾರತ ತಂಡಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ. ಮೊಹಮ್ಮದ್ ಶಮಿ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ಗಳನ್ನು ಪಡೆದಿದ್ದಾರೆ.
- ಚೇತೇಶ್ವರ್ ಪೂಜಾರ
ಈ ಸರಣಿಯಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಭಾರತದ ಚೇತೇಶ್ವರ್ ಪೂಜಾರ ಅವರನ್ನು ಹೊಂದಿರುವುದು ತುಂಬಾ ನಿರ್ಣಾಯಕವಾಗಿತ್ತು. ಆಸ್ಟ್ರೇಲಿಯಾದಲ್ಲಿ ಕಳೆದ ಬಾರಿ ಪ್ರವಾಸದಲ್ಲಿ ಬ್ಯಾಟ್ ಮಾಡಿದ್ದ ರೀತಿ ಇಂದಿಗೂ ಚರ್ಚೆಗೆ ಗ್ರಾಸವಾಗಿದೆ. ಅಂದು ಪೂಜಾರ ಫೈಟರ್ ಆಗಿ ಆಡಿದ್ದರು. ಅವರು ತನ್ನ ದೇಹದ ಮೇಲೆ ಅನೇಕ ಬಾರಿ ಚೆಂಡಿನಿಂದ ತಗುಲಿಸಿಕೊಂಡಿದ್ದರು. ಆದರೂ ಕಲ್ಲಿನಂತೆ ಕ್ರೀಸ್ನಲ್ಲಿ ನಿಂತಿದ್ದರು. ಹಲವು ಗಂಟೆಗಳ ಕಾಲ ಬ್ಯಾಟ್ ಮಾಡಿದ್ದರು. ಪೂಜಾರ ಆ ಸರಣಿಯಲ್ಲಿ 4 ಪಂದ್ಯಗಳಿಂದ 271 ರನ್ಗಳನ್ನು ಕಲೆ ಹಾಕಿದ್ದರು. ಅವರು ಆ ಸರಣಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ್ದರು.
- ಅಜಿಂಕ್ಯ ರಹಾನೆ
ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಲ್ಲಿ ಅನುಭವಿ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಸ್ಥಾನ ಪಡೆದಿಲ್ಲ. ಕಳೆದ ಬಾರಿ ಭಾರತ ತಂಡ, ಆಸ್ಟ್ರೇಲಿಯಾಕ್ಕೆ ತೆರಳಿ ರಹಾನೆ ನಾಯಕತ್ವದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿತ್ತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ತಂಡದ ನಾಯಕತ್ವ ವಹಿಸಿದ್ದರು. ಆ ಸರಣಿಯಲ್ಲಿ ರಹಾನೆ ಅವರ ಬ್ಯಾಟ್ನಿಂದಲೂ ರನ್ಗಳು ದಾಖಲಾಗಿದ್ದವು. ಅವರು 4 ಟೆಸ್ಟ್ ಪಂದ್ಯಗಳಿಂದ 268 ರನ್ಗಳನ್ನು ಕಲೆ ಹಾಕಿದ್ದರು. ಅವರು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡ
ರೋಹಿತ್ ಶರ್ಮ (ನಾಯಕ), ಜಸ್ಪ್ರಿತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿಧ್ ಕೃಷ್ಣ, ಹರ್ಷಿತ್ ರಾಣಾ, ನಿತೇಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್