Thursday, 14th November 2024

Virat Kohli: ತಂಡಕ್ಕಿಂತ ಮುಂಚಿತವಾಗಿ ಆಸೀಸ್‌ಗೆ ಪ್ರಯಾಣ ಬೆಳೆಸಿದ ಕೊಹ್ಲಿ

ಮುಂಬಯಿ: 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌(border-gavaskar trophy test) ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡದ ಅನುಭವಿ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಆಸ್ಟ್ರೇಲಿಯಾಕ್ಕೆ ಒಂದು ದಿನ ಮುಂಚಿತವಾಗಿಯೇ ಪ್ರಯಾಣ ಬೆಳೆಸಿದ್ದಾರೆ. ಟೀಮ್‌ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿ ಇಂದು(ನ.10) ರಾತ್ರಿ ಮುಂಬೈಯಿಂದ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಕೊಹ್ಲಿ ನವೆಂಬರ್‌ 9ರಂದೇ ತಮ್ಮ ಪತ್ನಿ ಮತ್ತು ಮಕ್ಕಳ ಜತೆ ಪ್ರತ್ಯೇಕವಾಗಿ ಆಸೀಸ್‌ಗೆ ಪ್ರಯಾಣಿಸಿದ್ದಾರೆ. ಇದೇ ವೇಳೆ ಮಕ್ಕಳ ಫೋಟೊವನ್ನು ತೆಗೆಯದಂತೆ ಪಾಪರಾಜಿಗಳಿಗೆ ಕೊಹ್ಲಿ ಮನವಿ ಮಾಡಿದ್ದಾರೆ.

ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಪಂದ್ಯಗಳಲ್ಲಿ ಒಟ್ಟು 1,979 ರನ್​ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಚೇತೇಶ್ವರ್​ ಪೂಜಾರ 2,033 ರನ್​ ಬಾರಿಸಿ 6ನೇ ಸ್ಥಾನಿಯಾಗಿದ್ದಾರೆ. 3,262 ರನ್​ ಬಾರಿಸಿರುವ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ 2 ಬಾರಿಯ ಪ್ರವಾಸದ ವೇಳೆಯೂ ಆಸೀಸ್ ನೆಲದಲ್ಲಿ​ ಭಾರತ ಸತತ ಸರಣಿ ಗೆದ್ದ ಸಾಧನೆ ಮಾಡಿತ್ತು.

ಇದನ್ನೂ ಓದಿ IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!

ಕೊಹ್ಲಿ ತವರಿನ ನ್ಯೂಜಿಲ್ಯಾಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 93 ರನ್ ಮಾತ್ರ. ಹೀಗಾಗಿ ಕೊಹ್ಲಿ ಆಸೀಸ್‌ನಲ್ಲಿ ಹೇಗೆ ಪ್ರದರ್ಶಣ ತೋರಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೀಗಿರುವಾಗಲೇ ಕೊಹ್ಲಿಯನ್ನು ಪ್ರಸ್ತುತ ಫಾರ್ಮ್‌ನ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಆಸ್ಟ್ರೇಲಿಯದ ದಿಗ್ಗಜ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಹೋರಾಟದ ಸಾಮರ್ಥ್ಯದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ʼಆಸ್ಟ್ರೇಲಿಯ ವಿರುದ್ಧ ಆಡುವುದನ್ನು ಕೊಹ್ಲಿ ಯಾವಾಗಲು ಇಷ್ಟಪಡುತ್ತಾರೆ. ಅದರಲ್ಲೂ ಆಸೀಸ್‌ ನೆಲದಲ್ಲಿ ಅವರ ಅಗ್ರೆಸಿವ್‌ ಬ್ಯಾಟಿಂಗ್‌ ನೋಡುವುದೇ ಕ್ರಿಕೆಟ್‌ ಅಭಿಮಾನಿಗಳಿಗೊಂದು ಹಬ್ಬ. ಆಸ್ಟ್ರೇಲಿಯದಲ್ಲಿ ಕೊಹ್ಲಿ ದಾಖಲೆ ಉತ್ತಮವಾಗಿದೆʼ ಎಂದರು.

ನ್ಯೂಜಿಲ್ಯಾಂಡ್‌ ವಿರುದ್ಧ ವೈಟ್‌ವಾಶ್ ಆಗಿದ್ದು ನಿಜವಾಗಿಯೂ ಉತ್ತಮ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ. ಆಧುನಿಕ ಭಾರತೀಯ ಬ್ಯಾಟರ್ ಗಳ ಸ್ಪಿನ್ ಆಡುವ ಕೌಶಲ್ಯ ಕಳೆದುಕೊಂಡಂತೆ ಕಾಣುತ್ತಿದೆ. ಆಸೀಸ್‌ ಪಿಚ್‌ಗಳು ವೇಗದ ಬೌಲಿಂಗ್‌ ಪಿಚ್‌ಗಳಾಗಿವೆ. ಹೀಗಾಗಿ ಭಾರತೀಯ ಬ್ಯಾಟರ್‌ಗಳು ಇಲ್ಲಿ ಸ್ಪಿನ್‌ ಚಿಂತಿಸುವ ಅಗತ್ಯವಿಲ್ಲ. ವೇಗದ ಪಿಚ್‌ನಲ್ಲಿ ಕೊಹ್ಲಿ ಉತ್ತಮ ರನ್‌ ಗಳಿಸುತ್ತಾರೆ ಎಂದು ಪಾಂಟಿಂಗ್‌ ಅಭಿಪ್ರಾಯಪಟ್ಟರು.