Thursday, 14th November 2024

Anvay Dravid: ರಾಜ್ಯ 16 ವಯೋಮಿತಿ ತಂಡಕ್ಕೆ ದ್ರಾವಿಡ್​ ಕಿರಿಯ ಪುತ್ರ ಆಯ್ಕೆ

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್​ ರಾಹುಲ್​ ದ್ರಾವಿಡ್‌(Rahul Dravid) ಅವರ ದ್ವಿತೀಯ ಪುತ್ರ, ವಿಕೆಟ್‌ ಕೀಪರ್‌-ಬ್ಯಾಟರ್‌ ಅನ್ವಯ್‌ ದ್ರಾವಿಡ್‌(Anvay Dravid) ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿ(Vijay Merchant Trophy) ಕ್ರಿಕೆಟ್‌ ಪಂದ್ಯಾವಳಿಗಾಗಿ ಆರಿಸಲಾದ 35 ಮಂದಿ ಸಂಭಾವ್ಯ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕೆಟ್​ ಕೀಪರ್-ಬ್ಯಾಟರ್​ ಆಗಿರುವ ಅನ್ವಯ್​, ಇತ್ತೀಚೆಗೆ ನಡೆದ 16 ವಯೋಮಿತಿ(Karnataka Under-16 squad) ಅಂತರ ವಲಯ ಟೂರ್ನಿಯಲ್ಲಿ ತುಮಕೂರು ವಲಯದ ವಿರುದ್ಧ ಅಜೇಯ 200 ರನ್​ ಬಾರಿಸಿದ್ದರು. ಈ ಪ್ರದರ್ಶನದ ಆಧಾರದಲ್ಲಿ ಸ್ಥಾನ ಪಡೆದಿದ್ದಾರೆ. ದ್ರಾವಿಡ್​ ಹಿರಿಯ ಪುತ್ರ ಸಮಿತ್​ ದ್ರಾವಿಡ್​ ಪ್ರಸಕ್ತ ಕರ್ನಾಟಕ ಪರ ಕೂಚ್​ ಬೆಹಾರ್​ ಟ್ರೋಫಿ 19 ವಯೋಮಿತಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ತಂದೆಯಂತೆ ಇಬ್ಬರು ಪುತ್ರರು ಕೂಡ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮಿಂಚಲಿ ಎನ್ನುವುದು ಕನ್ನಡಿಗ ಹಾರೈಕೆ.

ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ಆಸೀಸ್‌ ತಂಡ ಪ್ರಕಟ

ಪ್ರವಾಸಿ ಭಾರತದ ವಿರುದ್ದ ನವೆಂಬರ್‌ 22ರಿಂದ ಆರಂಭವಾಗಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ(Border-Gavaskar Trophy) ಮೊದಲ ಟೆಸ್ಟ್‌ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಮೊದಲ ಪಂದ್ಯಕ್ಕಾಗಿ 13 ಆಟಗಾರರ ತಂಡ ಪ್ರಕಟಿಸಲಾಗಿದ್ದು(Australia SQUAD) ಅಚ್ಚರಿ ಎಂಬಂತೆ ವಿಕೆಟ್‌ ಕೀಪರ್‌ ಬ್ಯಾಟರ್‌ ಜೋಶ್‌ ಇಂಗ್ಲಿಸ್, ಮತ್ತು ಭಾರತ ಎ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ್ದ ನಾಥನ್ ಮೆಕ್‌ಸ್ವೀನಿಗೆ ಅವಕಾಶ ನೀಡಲಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಟ್ರಾವಿಸ್‌ ಹೆಡ್‌, ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಮತ್ತು ಆಲ್‌ ರೌಂಡರ್‌ ಆಗಿ ಮಿಚೆಲ್‌ ಮಾರ್ಷ್‌ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ನಾಯಕ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ ವುಡ್‌ ಮತ್ತು ಸ್ಕಾಟ್‌ ಬೊಲ್ಯಾಂಡ್‌ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್‌ ನಾಥನ್‌ ಲಿಯಾನ್‌ ತಂಡದಲ್ಲಿದ್ದಾರೆ. ಈ ಹಿಂದಿನ ಎರಡು ತವರಿನ ಸರಣಿಯಲ್ಲಿ ಆಸ್ಟ್ರೇಲಿಯಾ ಹೀನಾಯವಾಗಿ ಸರಣಿ ಸೋಲು ಕಂಡಿತ್ತು. ಹೀಗಾಗಿ ಈ ಬಾರಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಯಾನ್, ಮಿಚೆಲ್ ಮಾರ್ಶ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.