Thursday, 14th November 2024

Drug addiction: ಡ್ರಗ್ಸ್‌ಗೆ ದಾಸನಾದ ಮಗ; ಬೇಸತ್ತು ಕೊಲ್ಲಲು ಅನುಮತಿ ಕೇಳಿದ ತಾಯಿ!

Drug addiction

ತುರುವೇಕೆರೆ: ಮಾದಕ ವಸ್ತುಗಳಿಗೆ ಮಗ ವ್ಯಸನಿಯಾದ (Drug addiction) ಹಿನ್ನೆಲೆಯಲ್ಲಿ ಬೇಸತ್ತ ತಾಯಿಯೊಬ್ಬರು, ದಯಮಾಡಿ ಪುತ್ರನನ್ನು ಜೈಲಿಗೆ ಹಾಕಿ, ಇಲ್ಲವೇ ಅವನನ್ನು ಸಾಯಿಸಲು ನನಗೆ ಅನುಮತಿ ಕೊಡಿ ಎಂದು ಪೊಲೀಸರನ್ನು ಬೇಡಿಕೊಂಡಿರುವುದು ತುಮಕೂರು ಜಿಲ್ಲೆಯ ತುರುವೇಕರೆಯಲ್ಲಿ ನಡೆದಿದೆ.

ತುರುವೇಕೆರೆಯಲ್ಲಿ ಸಣ್ಣ ಹೋಟೆಲ್‌ ಇಟ್ಟುಕೊಂಡಿರುವ ರೇಣುಕಮ್ಮ ಎಂಬುವವರ ಪುತ್ರ ಅಭಿ (20) ಮಾದಕ ವಸ್ತುಗಳ ವ್ಯಸನಿಯಾಗಿದ್ದಾನೆ. ಹೀಗಾಗಿ ಬೇಸತ್ತ ತಾಯಿ, ಮಗನನ್ನು ಬಂಧಿಸಲು ಕೋರಿದ್ದಾರೆ. ಇಲ್ಲದಿದ್ದರೆ ಅವನನ್ನು ಕೊಲ್ಲಲು ನನಗೆ ಅನುಮತಿ ನೀಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಸಾರ್… ನನ್ನ ಮಗ ಸರಿಯಿಲ್ಲ, ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಗಲಾಟೆಗೆ ಹೋಗುತ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುತ್ತಾನೆ, ಕೀಟಲೆ ಮಾಡ್ತಾನೆ, ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಜನರು ಇವನ ಕೈ ಕಾಲು ಮುರಿದು ಹಾಕ್ತಾರೆ, ನಮ್ಮ ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ. ಹೀಗಾಗಿ ದಯಮಾಡಿ ನನ್ನ ಮಗನ್ನ ಜೈಲಿಗೆ ಹಾಕಿ. ಇಲ್ಲವೆಂದರೆ ನನಗೆ ಅವನನ್ನು ಸಾಯಿಸಲು ಪರ್ಮಿಷನ್ ಕೊಡಿ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ಇಂತಹ ಜಾಲಕ್ಕೆ ಬಿದ್ದು ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೇ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಇವರಿಗೆ ಮಾದಕ ವಸ್ತುಗಳನ್ನು ಸಪ್ಪೆ ಮಾಡುತ್ತಿರುವವರು ಯಾರು ಎಂಬುದನ್ನು ದಯಮಾಡಿ ಪತ್ತೆ ಹಚ್ಚಿ ಅಮಾಯಕರನ್ನು ಕಾಪಾಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕೆಲವು ಬಾಲಕಿಯರನ್ನು ಯುವಕ ಅಭಿ ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಹಿಡಿದು ಚೆನ್ನಾಗಿ ಥಳಿಸಿ, ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ನಡುವೆ ಇದೇ ಅಭಿ, ಈ ಹಿಂದೆ ಪಟ್ಟಣದಲ್ಲಿ ಯುವತಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದುಶ್ಚಟಗಳಿಗೆ ಮಗ ಬಲಿಯಾಗಿದ್ದರಿಂದ ಬೇಸತ್ತ ತಾಯಿ ರೇಣುಕಮ್ಮ, ನನ್ನ ಮಗ ಹಾಳಾದ ರೀತಿಯಲ್ಲಿ ಇನ್ನೂ ಹಲವರು ಹಾಳಾಗಿದ್ದಾರೆ. ಅವರನ್ನು ಈ ಪಾಪದ ಕೂಪದಿಂದ ಪಾರು ಮಾಡಬೇಕು ಎಂಬುದು ನನ್ನ ಆಸೆ. ಇಲ್ಲವೇ ನನ್ನ ಮಗನನ್ನು ಸಾಯಿಸಲು ಪರ್ಮಿಷನ್ ಕೊಡಿ, ನಾನು ಅವನನ್ನು ಸಾಯಿಸಿ, ನಾನೂ ಸಾಯ್ತಿನಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Viral News: ಛೇ.. ಎಂಥಾ ಹೀನ ಕೃತ್ಯ! ನಿದ್ರೆಗೆ ತೊಂದರೆ ಮಾಡ್ತಿವೆ ಎಂದು ಐದು ನಾಯಿ ಮರಿಗಳನ್ನು ಸುಟ್ಟು ಹಾಕಿದ ಪಾಪಿಗಳು

ಪೋಲಿಸ್‌ ಠಾಣೆಗೆ ತೆರಳಿದ್ದ ತಾಯಿ ರೇಣುಕಮ್ಮಗೆ ಧೈರ್ಯ ತುಂಬಿರುವ ಸಬ್ ಇನ್ಸ್ ಪೆಕ್ಟರ್ ಪಾಂಡು ಅವರು, ಯುವಕ ವ್ಯಸನಮುಕ್ತವಾಗಲು ಸಹಕಾರ ನೀಡುತ್ತೇವೆ. ಆತನಿಗೆ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ನೆರವು ನೀಡುವುದಾಗಿ ರೇಣುಕಮ್ಮಗೆ ಭರವಸೆ ನೀಡಿದ್ದಾರೆ. ಸದ್ಯ ಯುವಕನನ್ನು ತುರುವೇಕೆರೆ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.