Monday, 25th November 2024

IND vs AUS: ಭಾರತ ಟೆಸ್ಟ್‌ ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಬಲ್ಲ ಆಟಗಾರನನ್ನು ಆರಿಸಿದ ಗಿಲ್‌ಕ್ರಿಸ್ಟ್‌!

Adam Gilchrist wants josh Inglis to open for Australia in Border-Gavaskar Trophy 2024-25

ನವದೆಹಲಿ: ಭಾರತ ವಿರುದ್ಧದ ಮುಂಬರುವ 2024-25ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಜಾಶ್‌ ಇಂಗ್ಲಿಸ್‌ ಇನಿಂಗ್ಸ್‌ ಆರಂಭಿಸಬೇಕೆಂದು ಆಸೀಸ್‌ ಮಾಜಿ ವಿಕೆಟ್‌ ಕೀಪರಗ್‌ ಆಡಮ್‌ ಗಿಲ್‌ಕ್ರಿಸ್ಟ್‌ ಸಲಹೆ ನೀಡಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಆದರೆ, ಉಸ್ಮಾನ್‌ ಖವಾಜ ಅವರೊಂದಿಗೆ ಯುವ ಬ್ಯಾಟ್ಸ್‌ಮನ್‌ ನೇಥನ್‌ ಮೆಕ್‌ಸ್ವೀನಿ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಭಾರತ ಎ ವಿರುದ್ದದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ನೇಥನ್‌ ಮೆಕ್‌ಸ್ವೀನಿ ಅವರು ಆಸ್ಟ್ರೇಲಿಯಾ ತಂಡದ ಪರ 467ನೇ ಟೆಸ್ಟ್‌ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆಂದು ಕ್ರಿಕೆಟ್‌ ಆಸ್ಟ್ರೇಲಿಯಾ ಭಾನುವಾರ ಸ್ಪಷ್ಟಪಡಿಸಿದೆ. ಅಗ್ರ ಕ್ರಮಾಂಕದಲ್ಲಿ ಅನುಭವ ಇಲ್ಲದ ಹೊರತಾಗಿಯೂ ಮೆಕ್‌ಸ್ವೀನಿ ಅವರನ್ನು ಮೂರನೇ ಕ್ರಮಾಂಕದಿಂದ ಅಗ್ರ ಸ್ಥಾನಕ್ಕೆ ಬಡ್ತಿ ನೀಡಲಾಗುವುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಚೀಫ್‌ ಸೆಲೆಕ್ಟರ್‌ ಜಾರ್ಜ್‌ ಬೈಲಿ ತಿಳಿಸಿದ್ದಾರೆ. ಆದರೆ, ಆಸ್ಟ್ರೇಲಿಯಾ ವೈಟ್‌ಬಾಲ್‌ ತಂಡದ ಜಾಶ್‌ ಇಂಗ್ಲಿಸ್‌ ಅವರನ್ನು ಮೀಸಲು ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡಲಾಗಿದೆ. ಶೆಫೀಲ್ಡ್‌ ಶೀಲ್ಡ್‌ ಆವೃತ್ತಿಯಲ್ಲಿ ಜಾಶ್‌ ಇಂಗ್ಲಿಸ್‌ ಅವರು ಆಡಿದ್ದ ಎರಡು ಪಂದ್ಯಗಳಿಂದ 99.00 ಸರಾಸರಿಯಲ್ಲಿ 297 ರನ್‌ಗಳನ್ನು ಕಲೆ ಹಾಕಿದ್ದರು.

ಜಾಶ ಇಂಗ್ಲಿಸ್‌ ಇನಿಂಗ್ಸ್‌ ಆರಂಭಿಸಬೇಕು

ಫಾಕ್ಸ್‌ ಕ್ರಿಕೆಟ್‌ ಜೊತೆ ಮಾತನಾಡಿದ ಆಡಮ್‌ ಗಿಲ್‌ಕ್ರಿಸ್ಟ್‌ ಅವರು, ತಮ್ಮ ವೆಸ್ಟ್‌ ಆಸ್ಟ್ರೇಲಿಯಾದ ಸಹ ಆಟಗಾರ ಜಾಶ್‌ ಇಂಗ್ಲಿಸ್‌ ಪರ ಬ್ಯಾಟ್‌ ಬೀಸಿದ್ದಾರೆ. ತಂಡದಲ್ಲಿನ ಆರು ವಿಶೇಷ ಬ್ಯಾಟ್ಸ್‌ಮನ್‌ಗಳ ಪೈಕಿ ಜಾಶ್‌ ಇಂಗ್ಲಿಸ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ಆಯ್ಕೆದಾರರು ವಿಶೇಷ ಪಾತ್ರದ ಹೊರತಾಗಿಯೂ ಕೌಶಲದ ಆಧಾರದ ಮೇಲೆ ತಂಡದಲ್ಲಿ ಆಡಿಸಿದ್ದರು. ವೆಸ್ಟ್‌ ಇಂಡೀಸ್‌ ಸರಣಿಯ ವೇಳೆ ಕ್ಯಾಮೆರಾನ್‌ ಗ್ರೀನ್‌ ಅವರನ್ನು ಬ್ಯಾಟ್ಸ್‌ಮನ್‌ ಆಗಿ ಆಡಿಸುವ ಮೂಲಕ ಸ್ಟೀವನ್‌ ಸ್ಮಿತ್‌ ಅವರನ್ನು ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರು.

“ಆಸ್ಟ್ರೇಲಿಯಾ ತಂಡದಲ್ಲಿ ಜಾಶ್‌ ಇಂಗ್ಲಿಸ್‌ ಅವರು ಮೀಸಲು ಬ್ಯಾಟ್ಸ್‌ಮನ್‌ ಆಗಿ ಇದ್ದಾರೆ. ತವರು ಕಂಡೀಷನ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಈ ರೀತಿ ಆಡಿಸುವುದು ಸಾಂಪ್ರದಾಯವಲ್ಲ. ನೇಥನ್‌ ಮೆಕ್‌ಸ್ವೀನಿ ಅವರನ್ನು ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬಹುದೆಂದು ನನಗೆ ಅನಿಸುತ್ತಿದೆ. ಆದರೆ, ಕಳೆದ ವರ್ಷ ಅಗ್ರ ಆರರ ಕ್ರಮಾಂಕದಲ್ಲಿ ವಿಶೇ಼ಷ ಬ್ಯಾಟ್ಸ್‌ಮನ್‌ಗಳನ್ನು ಆಡಿಸಲಾಗಿತ್ತು. ಈ ನಿಯಮವನ್ನು ಈ ಬಾರಿ ಪಾಲಿಸಲಾಗುತ್ತದೆಯೆ?” ಎಂದು ಆಡಮ್‌ ಗಿಲ್‌ಕ್ರಿಸ್ಟ್‌ ಪ್ರಶ್ನೆ ಮಾಡಿದ್ದಾರೆ.

ಜಾಶ್‌ ಇಂಗ್ಲಿಸ್‌ ಆಕ್ರಮಣಕಾರಿಯಾಗಿ ಆಡಬಲ್ಲರು: ಗಿಲ್‌ಕ್ರಿಸ್ಟ್‌

ನೇಥನ್‌ ಮೆಕ್‌ಸ್ವೀನಿ ಅವರು ರಕ್ಷಾಣಾತ್ಮಕ ಬ್ಯಾಟಿಂಗ್‌ ಕೌಶಲವನ್ನು ಹೊಂದಿರುವ ಕಾರಣ ಆಯ್ಕೆದಾರರು ಅವರನ್ನು ಆರಂಭಿಕ ಸ್ಥಾನಕ್ಕೆ ಆಡಲು ಅವಕಾಶ ನೀಡುತ್ತಿರಬಹುದು. ಆದರೆ, ಜಾಶ್‌ ಇಂಗ್ಲಿಸ್‌ ಅವರ ಆಕ್ರಮಣಕಾರಿ ಆಟ ಕೂಡ ಪಂದ್ಯದಲ್ಲಿ ಮೌಲ್ಯವನ್ನು ತಂದುಕೊಡುತ್ತದೆ ಎಂದು ಗಿಲ್‌ಕ್ರಿಸ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನೇಥನ್‌ ಮೆಕ್‌ಸ್ವೀನಿ ಅವರು ನೋಡಲು ಅತ್ಯುತ್ತಮ ಆಟಗಾರ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ರಕ್ಷಣಾತ್ಮಕ ಆಟವನ್ನು ಹೊಂದಿರುವ ಕಾರಣ ಆರಂಭಿಕ ಸ್ಥಾನಕ್ಕೆ ಸೂಕ್ತವಾಗಬಹುದು. ಆದರೆ, ಜಾಶ್‌ ಇಂಗ್ಲಿಸ್‌ಗೆ ಹೇಗೆ ದಾಳಿ ನಡೆಸಬೇಕೆಂಬುದು ಗೊತ್ತಿದೆ. ರಕ್ಷಣಾತ್ಮಕ ಕೌಶಲಕ್ಕಿಂತ ಆಕ್ರಮಣಕಾರಿ ಆಟ ಇಂಗ್ಲಿಸ್‌ಗೆ ಉತ್ತಮವಾಗಿದೆ,” ಎಂದು ಆಡಮ್‌ ಗಿಲ್‌ಕ್ರಿಸ್ಟ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!