Thursday, 14th November 2024

Terror Attack: ಜಮ್ಮು & ಕಾಶ್ಮೀರದಲ್ಲಿ ಎನ್‌ಕೌಂಟರ್‌; ಸೇನಾಧಿಕಾರಿ ಹುತಾತ್ಮ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ನ. 10ರಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ಮೂವರು ಸೈನಿಕರು ಗಾಯಗೊಂಡಿದ್ದಾರೆ. ʼʼಕಿಶ್ತ್ವಾರ್‌ನ ಭರ್ತ್ ರಿಡ್ಜ್‌ನಲ್ಲಿ ನಡೆದ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ನೈಬ್ ಸುಬೇದಾರ್ ರಾಕೇಶ್ ಕುಮಾರ್ (Naib Subedar Rakesh Kumar) ಹುತಾತ್ಮರಾಗಿದ್ದಾರೆ ಎಂದು ಸೇನೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ (Terror Attack).

ರಾಕೇಶ್ ಕುಮಾರ್ ಅವರು 2 ಪ್ಯಾರಾ (ಎಸ್ಎಫ್)ಗೆ ಸೇರಿದವರು. ಕಾರ್ಯಾಚರಣೆ ಮುಂದುವರಿದಿದ್ದು, 3-4 ಉಗ್ರರು ಅವಿತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕಿಶ್ತ್ವಾರ್ (Kishtwar) ಜಿಲ್ಲೆಯ ಮುಂಜ್ಲಾ ಧಾರ್‌ನಲ್ಲಿ ಗುರುವಾರ (ನ. 7) ಭಯೋತ್ಪಾದಕರು ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌(VDGs)ಗಳನ್ನು ಹತ್ಯೆ ಮಾಡಿದ್ದರು. ಓಹ್ಲಿ-ಕುಂಟ್ವಾರಾ ಗ್ರಾಮದ ನಿವಾಸಿಗಳಾದ 45 ವರ್ಷದ ನಜೀರ್ ಅಹ್ಮದ್ ಮತ್ತು 33 ವರ್ಷದ ಕುಲದೀಪ್ ಕುಮಾರ್ ಮೃತರು. ಈ ಹಿನ್ನೆಲೆಯಲ್ಲಿ ಗುರುವಾರವೇ ಭದ್ರತಾ ಪಡೆ ಭಯೋತ್ಪಾದಕರ ನಿಗ್ರಹಕ್ಕೆ ಕಾರ್ಯಾಚರಣೆ ಆರಂಭಿಸಿತ್ತು. ವಿಡಿಜಿಗಳ ಮೃತದೇಹ ಪತ್ತೆಯಾದ ಸ್ಥಳದಿಂದ ಕೆಲವು ಕಿ.ಮೀ. ದೂರದ ಕಾಡಿನಲ್ಲಿ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸುತ್ತಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ರಾಕೇಶ್ ಕುಮಾರ್ ಹುತಾತ್ಮರಾಗಿದ್ದಾರೆ.

ಗುಂಡಿನ ಚಕಮಕಿ ವೇಳೆ ಗಾಯಗೊಂಡಿರುವ ಮೂವರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ.

ಹೊಣೆ ಹೊತ್ತುಕೊಂಡಿದ್ದ ಕಾಶ್ಮೀರ್ ಟೈಗರ್ಸ್ 

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯಾದ ಕಾಶ್ಮೀರ್ ಟೈಗರ್ಸ್ ವಿಡಿಜಿಗಳ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಜತೆಗೆ “ನಾವು ಇಲ್ಲಿಯವರೆಗೆ ಒಬ್ಬ ಸಾಮಾನ್ಯ ಹಿಂದೂವನ್ನು ಕೊಂದಿಲ್ಲ. ನಾವು ಭಾರತೀಯ ಸೇನೆಯ ವಿರುದ್ಧ ಹೋರಾಡುತ್ತಿದ್ದೇವೆ. ಆದಾಗ್ಯೂ ಕೆಲವರು ವಿಡಿಜಿಗೆ ಸೇರುತ್ತಿದ್ದಾರೆ. ಅಂತಹ ಜನರು ಇಂದಿನ ಘಟನೆಯಿಂದ ಪಾಠ ಕಲಿಯಬೇಕು ಮತ್ತು ಅವರು ವಿಡಿಜಿಗೆ ಸೇರಬಾರದು. ಎಚ್ಚರಿಕೆಯನ್ನು ಉಲ್ಲಂಘಿಸಿದವರಿಗೂ ಇದೇ ಗತಿʼʼ ಎಂದು ಎಚ್ಚರಿಕೆಯನ್ನೂ ನೀಡಿದೆ.

ಭಯೋತ್ಪಾದಕ ಚಟುವಟಿಕೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ1990ರ ದಶಕದಲ್ಲಿ ಮೊದಲ ಬಾರಿಗೆ ವಿಡಿಜಿಗಳನ್ನು ನೇಮಿಸಲಾಯಿತು. ಬಳಿಕ 2000ದಲ್ಲಿ ವಿಸರ್ಜಿಸಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ವಿಡಿಜಿಗಳನ್ನು ಮತ್ತೆ ನೇಮಿಸಲಾಯಿತು. ಗ್ರಾಮ ಸ್ವಯಂಸೇವಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಡಿಜಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಜವಾಬ್ದಾರಿಯನ್ನು ಸಿಆರ್‌ಪಿಎಫ್‌ಗೆ ನೀಡಲಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರದೇಶದಲ್ಲಿ 4,125 ವಿಡಿಜಿಗಳಿದ್ದಾರೆ.

ಈ ವರ್ಷ ಜಮ್ಮುವಿನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 15 ಭದ್ರತಾ ಪಡೆ ಸಿಬ್ಬಂದಿ, 10 ನಾಗರಿಕರು ಮತ್ತು ಮೂವರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳು ಮೃತಪಟ್ಟಿದ್ದಾರೆ. ಜತೆಗೆ 13 ಉಗ್ರರನ್ನು ಹೊಡೆದುರುಳಿಸಲಾಗಿದೆ. ಮಾತ್ರವಲ್ಲ ಕಣಿವೆಯಲ್ಲಿ ಈ ಹತರಾದ ಉಗ್ರರ ಸಂಖ್ಯೆ 24 ಎಂದು ಅಂಕಿ-ಅಂಶಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Terror Attack: ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳ ಮೃತದೇಹ ಪತ್ತೆ; ಉಗ್ರರ ಪತ್ತೆಗೆ ತೀವ್ರಗೊಂಡ ಶೋಧ ಕಾರ್ಯ