Thursday, 14th November 2024

IPL 2025: ಮೆಗಾ ಹರಾಜಿನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅನ್‌ಸೋಲ್ಡ್‌ ಆಗಲು 3 ಕಾರಣಗಳು!

IPL 2025: Glenn Maxwell To Go Unsold? 3 Reasons Why IPL Teams Won't Buy Australian Star In Mega Auction

ನವದೆಹಲಿ: ಕಳೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಬಳಿಕ ಆಸ್ಟ್ರೇಲಿಯಾ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವೈಫಲ್ಯ ಅನುಭವಿಸಿದ್ದ ಮ್ಯಾಕ್ಸ್‌ವೆಲ್‌, ಪ್ರಸ್ತುತ ಪಾಕಿಸ್ತಾನ ವಿರುದ್ದದ ಏಕದಿನ ಸರಣಿಯಲ್ಲಿಯೂ ನೆಲ ಕಚ್ಚಿದ್ದಾರೆ.

ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ ಮತ್ತು ಯಶ್‌ ದಯಾಳ್‌ ಅವರನ್ನು ಉಳಿಸಿಕೊಳ್ಳುವ ಮೂಲಕ ಬೆಂಗಳೂರು ಫ್ರಾಂಚೈಸಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿದಂತೆ ಬಹುತೇಕ ಆಟಗಾರರನ್ನು ಮೆಗಾ ಹರಾಜಿಗೆ ಬಿಡುಗಡೆ ಮಾಡಿದೆ. ಅಂದ ಹಾಗೆ ಭಾನುವಾರ ಪಾಕಿಸ್ತಾನ ವಿರುದ್ಧ ಅಂತ್ಯವಾದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಮ್ಯಾಕ್ಸ್‌ವೆಲ್‌ ವಿಫಲರಾಗಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದು, ಒಂದು ಪಂದ್ಯದಲ್ಲಿ ಕೇವಲ 16 ರನ್‌ ಗಳಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಹ್ಯಾರಿಸ್‌ ರೌಫ್‌ ಅವರಿಗೆ ಮೂರೂ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್‌ ವಿಕೆಟ್‌ ಒಪ್ಪಿಸಿರುವುದು ಅಚ್ಚರಿಯ ಸಂಗತಿಯಾಗಿದೆ.

ಪ್ರಸ್ತತು ಫಾರ್ಮ್‌ ಕಳೆದುಕೊಂಡಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಖರೀದಿಸಲು ಆಸಕ್ತಿ ತೋರುವುದು ಬಹುತೇಕ ಅನುಮಾನವಾಗಿದೆ. ಇದಕ್ಕೆ ಮೂರು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

  1. ಒಟ್ಟಾರೆ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಂಕಿಅಂಶಗಳು ಅಷ್ಟೊಂದು ಉತ್ತಮವಾಗಿಲ್ಲ. ಅವರು 2014ರಲ್ಲಿ 16 ಪಂದ್ಯಗಳಿಂದ 552 ರನ್‌ಗಳು ಹಾಗೂ 2021ರ ಟೂರ್ನಿಯಲ್ಲಿ 513 ರನ್‌ಗಳನ್ನು ಕಲೆ ಹಾಕಿದ್ದು ಬಿಟ್ಟರೆ ಇನ್ನುಳಿದ ಎಲ್ಲಾ ಆವೃತ್ತಿಗಳಲ್ಲಿಯೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಬಿಗೂ ಸೇರ್ಪಡೆಯಾಗುವ ಮುನ್ನ ಮ್ಯಾಕ್ಸ್‌ವೆಲ್‌ 2020ರ ಟೂರ್ನಿಯಲ್ಲಿ ಆಡಿದ್ದ 13 ಪಂದ್ಯಗಳಿಂದ ಕೇವಲ 108 ರನ್‌ ಗಳಿಸಿದ್ದರು. ಆದರೆ, ಆ ಸೀಸನ್‌ನಲ್ಲಿ ಅವರು ಒಂದೇ ಒಂದು ಸಿಕ್ಸರ್‌ ಸಿಡಿಸಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ, ಐಪಿಎಲ್‌ ಟೂರ್ನಿಯಲ್ಲಿ ಆಸೀಸ್‌ ಆಲ್‌ರೌಂಡರ್‌ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

  1. 2024ರಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ವೈಫಲ್ಯ

2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅತ್ಯಂತ ಕಳಪೆ ಪ್ರದರ್ಶನವನ್ನು ತೋರಿದ್ದರು ಹಾಗೂ ಹಲವು ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದರು. ಆಡಿದ್ದ 10 ಪಂದ್ಯಗಳಿಂದ ಕೇವಲ 5.78ರ ಸರಾಸರಿಯಲ್ಲಿ ಕೇವಲ 52 ರನ್‌ ಗಳಿಸಿದ್ದರು. ಟೂರ್ನಿಯಲ್ಲಿ ಎದುರಾಳಿ ತಂಡಗಳ ಬೌಲರ್‌ಗಳು ಸುಲಭವಾಗಿ ಮ್ಯಾಕ್ಸ್‌ವೆಲ್‌ ಅವರನ್ನು ಔಟ್‌ ಮಾಡಿದ್ದರು.
ಇವರು ಟೂರ್ನಿಯ ಆರಂಭಕ್ಕೂ ಮುನ್ನ ಆರ್‌ಸಿಬಿ ಕೀ ಬ್ಯಾಟ್ಸ್‌ಮನ್‌ ಆಗಿದ್ದರು. ಆದರೆ, ಕಳಪೆ ಫಾರ್ಮ್‌ ಕಾರಣ ಟೂರ್ನಿಯ ಮಧ್ಯದಲ್ಲಿ ಅವರನ್ನು ಬೆಂಚ್‌ ಕಾಯಿಸಲಾಗಿತ್ತು ಹಾಗೂ ವಿಲ್‌ ಜ್ಯಾಕ್ಸ್‌ಗೆ ಸ್ಥಾನವನ್ನು ನೀಡಲಾಗಿತ್ತು.

  1. ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಮೂಲ ಬೆಲೆ ಅಧಿಕ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಮೂಲ ಬೆಲೆ ಎರಡು ಕೋಟಿ ರೂ. ಗಳಿವೆ. ಅವರಿಗೆ ಈಗಾಗಲೇ 36 ವರ್ಷ ವಯಸ್ಸಾಗಿದೆ. ಈ ಕಾರಣದಿಂದಾಗಿ ಇವರಿಗೆ ಎರಡು ಕೋಟಿ ರೂ. ಗಳನ್ನು ನೀಡಲು ಫ್ರಾಂಚೈಸಿಗಳು ಹಿಂದೇಟು ಹಾಕಲಿವೆ ಹಾಗೂ ಇವರ ಬದಲು ಯುವ ಆಟಗಾರರನ್ನು ಖರೀದಿಸಲು ಈ ಮೊತ್ತವನ್ನು ಬಳಸಿಕೊಳ್ಳಬಹುದು.

ಈ ಸುದ್ದಿಯನ್ನು ಓದಿ: IPL 2025 Mega auction: 6 ಸ್ಟಾರ್‌ಗಳ ಮೇಲೆ ಕಣ್ಣಿಟ್ಟಿರುವ ಕೋಲ್ಕತಾ ನೈಟ್‌ ರೈಡರ್ಸ್‌!