Thursday, 14th November 2024

IPL 2025: ರಿಷಭ್‌ ಪಂತ್‌ರನ್ನು ಆರ್‌ಸಿಬಿ ಖರೀದಿಸುತ್ತಾ? ಎಬಿ ಡಿ ವಿಲಿಯರ್ಸ್‌ ಹೇಳಿದ್ದಿದು!

IPL 2025: It would be great if the Royal Challengers Bangalore could pick up Rishabh Pant at the auction-AB De Villiers

ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೆಗಾ ಹರಾಜು ಇನ್ನೇನು ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಸೂಕ್ತವಾಗುವ ಆಟಗಾರರನ್ನು ಖರೀದಿಸಲು ರಣತಂತ್ರವನ್ನು ರೂಪಿಸುತ್ತಿವೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಬಿಡುಗಡೆಯಾಗಿರುವ ರಿಷಭ್‌ ಪಂತ್‌ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಕೆಲ ಫ್ರಾಂಚೈಸಿಗಳು ಎದುರು ನೋಡುತ್ತಿವೆ. ಅದರಂತೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌, ಆರ್‌ಸಿಬಿಯು ಪಂತ್‌ ಅವರನ್ನು ಬಿಡ್‌ ಮಾಡಿದರೆ ತುಂಬಾ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್‌, ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ತುಂಬಾ ದುಬಾರಿಯಾಗಬಹುದು ಮತ್ತು ಹಲವು ತಂಡಗಳಿಂದ ಎಡಗೈ ಆಟಗಾರನಿಗಾಗಿ ಬಿಡ್‌ ವಾರ್‌ ನಡೆಯಬಹುದು ಎಂದು ಹೇಳಿದ್ದಾರೆ.

ಬೆಂಗಳೂರು ಫ್ರಾಂಚೈಸಿಯು ರಿಷಭ್‌ ಪಂತ್ ಅವರನ್ನು ಖರೀದಿಸಬಹುದಾದ ವಿಷಯದ ಕುರಿತು ಮಾತನಾಡಿದ ಎಬಿ ಡಿವಿಲಿಯರ್ಸ್, “ಆರ್‌ಸಿಬಿ ರಿಷಭ್‌ ಪಂತ್ ಅವರನ್ನು ಖರೀದಿಸಬಹುದು ಎಂಬ ಭರವಸೆ ಬಹಳ ಕಡಿಮೆ ಇದೆ. ಪಂತ್‌ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಾರೆ ಮತ್ತು ಎಲ್ಲಾ ಫ್ರಾಂಚೈಸಿಗಳು ಅವರನ್ನು ಬಿಡ್ ಮಾಡಬಹುದು ಎಂದು ನಾನು ನಂಬುತ್ತೇನೆ. ಆದರೆ, ಮುಂದಿನ ಋತುವಿನಲ್ಲಿ ಪಂಜಾಬ್‌ ಕಿಂಗ್ಸ್‌ ತಮ್ಮ ಪರ್ಸ್‌ನ ದೊಡ್ಡ ಭಾಗವನ್ನು ಪಂತ್‌ಗೆ ಖರ್ಚು ಮಾಡಬಹುದೆಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ .” ಎಂದು ತಿಳಿಸಿದ್ದಾರೆ.

ಆರ್‌ಸಿಬಿಗೆ ಮಹತ್ವದ ಸಲಹೆ ನೀಡಿದ ಡಿವಿಲಿಯರ್ಸ್

ರಿಷಭ್ ಪಂತ್ ಆರ್‌ಸಿಬಿ ಪರ ಆಡುವುದನ್ನು ನೋಡಲು ಬಯಸುತ್ತೇನೆ. ಆದರೆ, ಬೆಂಗಳೂರು ಫ್ರಾಂಚೈಸಿ ಬೌಲಿಂಗ್ ಮೇಲೆ ಹೆಚ್ಚು ಗಮನಹರಿಸಬೇಕು. ಆರ್‌ಸಿಬಿಯಲ್ಲಿ ಕೆಲವು ಭಾರತೀಯ ಆಟಗಾರರು ಮತ್ತು ಪ್ರಮುಖ ಸ್ಪಿನ್ ಬೌಲರ್ ಇರುವುದು ಅಗತ್ಯ. ಬೆಂಗಳೂರಿನ ಸ್ಥಳೀಯ ಆಟಗಾರರು ಈ ತಂಡದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಇಲ್ಲಿನ ಕಂಡಿಷನ್ಸ್‌ ಅವರಿಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ,” ಎಂದು ಎ ಬಿ ಡಿವಿಲಿಯರ್ಸ್‌ ಸಲಹೆ ನೀಡಿದ್ದಾರೆ.

ಯುಜ್ವೇಂದ್ರ ಚಹಲ್‌ಗೆ ಬಿಡ್‌ ಮಾಡಿ ಎಂದಿದ್ದ ಎಬಿಡಿ

ಈ ಹಿಂದೆ ಇದೇ ರೀತಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದ ಎಬಿಡಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ತಮ್ಮ ಹಳೆಯ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರನ್ನು ಖರೀದಿಸಬೇಕೆಂದು ತಿಳಿಸಿದ್ದರು. ಬೆಂಗಳೂರು ಪಿಚ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಹಾಗಾಗಿ ಅವರನ್ನು ಖರೀದಿಸಲು ಕೋಚ್‌ ಆಂಡಿ ಫ್ಲವರ್‌ ಮತ್ತು ಅವರ ತಂಡ ಪ್ರಯತ್ನಿಸಬೇಕೆಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಸಲಹೆ ನೀಡಿದ್ದರು.

ರಿಷಭ್‌ ಪಂತ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ 111 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 35ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 3,284 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 148.93 ಮತ್ತು ದಿಲ್ಲಿ ಪರ ಆಡುವಾಗ ಅವರು ಎರಡು ಶತಕ ಮತ್ತು 18 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಪಂತ್ 13 ಪಂದ್ಯಗಳಿಂದ 446 ರನ್ ಗಳಿಸಿದ್ದರು.

ಈ ಸುದ್ದಿಯನ್ನು ಓದಿ: IND vs SA: ಕೊಹ್ಲಿ-ರೋಹಿತ್‌ ಅಲ್ಲ, ಸಂಜು ಸ್ಯಾಮ್ಸನ್‌ಗೆ ನಾನು ದೊಡ್ಡ ಅಭಿಮಾನಿ ಎಂದ ಎಬಿಡಿ!