Monday, 25th November 2024

IND vs AUS: ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಸೂಕ್ತ ನಾಯಕನನ್ನು ಸೂಚಿಸಿದ ರಿಕಿ ಪಾಂಟಿಂಗ್‌!

IND vs AUS: 'Is he going to bowl?-Ricky Ponting predicts captaincy for Jasprit Bumrah to be the 'hardest thing'

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯಕ್ಕೆ ನಾಯಕ ರೋಹಿತ್‌ ಶರ್ಮಾ ಅಲಭ್ಯರಾದರೆ, ಭಾರತ ತಂಡವನ್ನು ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಬೇಕೆಂದು ಆಸೀಸ್‌ ದಿಗ್ಗಜ ರಿಕಿ ಪಾಂಟಿಂಗ್‌ ಸಲಹೆ ನೀಡಿದ್ದಾರೆ. ಆದರೂ ರಾಷ್ಟ್ರೀಯ ತಂಡವನ್ನು ಒಬ್ಬ ಬೌಲರ್‌ ಮುನ್ನಡೆಸುವುದು ಕಷ್ಟದ ಕೆಲಸ ಎಂದು ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ ಬಗ್ಗೆ ಅನುಮಾನವಿದೆ. ಪರ್ತ್‌ ಟೆಸ್ಟ್‌ ಆಡುವ ಬಗ್ಗೆ ಸ್ವತಃ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರೇ ಇನ್ನೂ ಖಚಿತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಉಪನಾಯಕ ಜಸ್‌ಪ್ರೀತ್‌ ಬುಮ್ರಾ ಅವರು ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಜಸ್‌ಪ್ರೀತ್‌ ಬುಮ್ರಾ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC)ನ ‘ರಿವ್ಯೂ ಪಾಡ್‌ಕ್ಯಾಸ್ಟ್’ನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, “ಹೌದು, ನಾಯಕತ್ವವು ಬಹುಶಃ ಅವರಿಗೆ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾದ ಟೆಸ್ಟ್ ನಾಯಕರಾದಾಗಲೂ ಇದು ಯಾವಾಗಲೂ ಪ್ರಶ್ನೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ‘ತಾನು ಎಷ್ಟು ಓವರ್‌ ಬೌಲ್‌ ಮಾಡಬೇಕು? ತಾನೇ ಹೆಚ್ಚು ಬೌಲ್ ಮಾಡಬೇಕೆ? ತಾನು ಹೆಚ್ಚು ಬೌಲ್‌ ಮಾಡುವುದು ಬೇಡವೇ? ಎಂಬೆಲ್ಲಾ ಅಂಶಗಳು ಮನಸಿಗೆ ಬರುತ್ತವೆ. ಆದರೆ, ಜಸ್‌ಪ್ರೀತ್‌ ಬುಮ್ರಾ ಅವರಂತಹ ಅನುಭವಿ ತಾನು ಬೌಲ್‌ ಮಾಡುವ ಸಮಯವನ್ನು ಅರ್ಥಮಾಡಿಕೊಳ್ಳುತ್ತಾರೆ,” ಎಂದು ಪಾಂಟಿಂಗ್ ತಿಳಿಸಿದ್ದಾರೆ.

“ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡದೇ ಇದ್ದರೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಉಪನಾಯಕ ಬುಮ್ರಾ ಅವರ ಮೇಲಿದೆ. 30ರ ಪ್ರಾಯದ ಬುಮ್ರಾ ಅವರು ಭಾರತದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುವಾಗ ತಂಡದ ನಾಯಕತ್ವದ ಜವಾಬ್ದಾರಿಗಳನ್ನು ನಿಭಾಯಿಸಲು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಅದಕ್ಕಾಗಿ ಭಾರತ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದು, ಈ ಅನುಭವವನ್ನು ನೀವು ಬಳಸಿಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ,” ಎಂದು ಆಸ್ಟ್ರೇಲಿಯಾ ನಾಯಕ ಸಲಹೆ ನೀಡಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಇನ್ನೂ ಆಟದ ದೀರ್ಘ ಸ್ವರೂಪದಲ್ಲಿ ಭಾರತದ ಅತ್ಯುತ್ತಮ ವೇಗದ ಬೌಲರ್ ಆಗಿ ಉಳಿದಿದ್ದಾರೆ ಮತ್ತು ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಕಷ್ಟದ ಸಂದರ್ಭಗಳನ್ನು ಜಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಬುಮ್ರಾ ಅವರಂತಹ ಆಟಗಾರರು ಹೆಚ್ಚುವರಿ ಒತ್ತಡ ಮತ್ತು ಜವಾಬ್ದಾರಿಯಲ್ಲಿ ಉತ್ತಮವಾಗಿ ಆಡುತ್ತಾರೆ,” ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

ರಿಕಿ ಪಾಂಟಿಂಗ್‌ ಹೇಳಿದಂತೆ ಬುಮ್ರಾ ದೀರ್ಘಕಾಲದವರೆಗೆ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಅದು ರೆಡ್ ಬಾಲ್ ಕ್ರಿಕೆಟ್ ಆಗಿರಲಿ, ಟಿ20 ಅಥವಾ ಒಡಿಐ ಆಗಿರಲಿ. ಹಲವು ವರ್ಷಗಳಿಂದ ಬುಮ್ರಾ ಭಾರತ ತಂಡಕ್ಕೆ ಕೀ ಬೌಲರ್‌ ಆಗಿ ಆಡುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಭಾರತ ಟೆಸ್ಟ್‌ ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಬಲ್ಲ ಆಟಗಾರನನ್ನು ಆರಿಸಿದ ಗಿಲ್‌ಕ್ರಿಸ್ಟ್‌!