ಪರ್ತ್: ಆಸ್ಟ್ರೇಲಿಯ ಮತ್ತು ಭಾರತ(IND vs AUS) ಕ್ರಿಕೆಟ್ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್(Border–Gavaskar Trophy) ಟೆಸ್ಟ್ ಸರಣಿಯ ಅಧಿಕೃತ ಪ್ರಸಾರ ಚಾನೆಲ್ ಆಗಿರುವ ಆಸ್ಟ್ರೇಲಿಯದ ‘ಫಾಕ್ಸ್ ಕ್ರಿಕೆಟ್’, ಈ ಸರಣಿಯ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ನವೆಂಬರ್ 22ರಂದು ಪರ್ತ್‌ನಲ್ಲಿ ನಡೆಯುವ ಮೊದಲ ಪಂದ್ಯದ ಪೋಸ್ಟರ್ ಇದಾಗಿದ್ದು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ವಿರಾಟ್ ಕೊಹ್ಲಿಯ ಫೋಟೊ ಇದರಲ್ಲಿ ಹಾಕಲಾಗಿದೆ.
ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಪೋಸ್ಟರ್ ನೋಡುವಾಗ ಖಚಿತವಾದಂತಿದೆ. ಮೊದಲ ಪಂದ್ಯಕ್ಕೆ ರೋಹಿತ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವಿಚಾರ ಈ ಪೋಸ್ಟರ್‌ನಿಂದ ತಿಳಿದುಬಂದಿದೆ.
ಆಸ್ಟ್ರೇಲಿಯ-ಪಾಕಿಸ್ತಾನ ಏಕದಿನ ಸರಣಿ ಮುಗಿಯುತ್ತಿರುವಂತೆಯೇ, ಆಸ್ಟ್ರೇಲಿಯ- ಭಾರತ ಸರಣಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳನ್ನು ನೆನಪಿಸುವುದಕ್ಕಾಗಿ ಚಾನೆಲ್ ನೇರಪ್ರಸಾರದ ವೇಳೆ ಪೋಸ್ಟರನ್ನು ಪ್ರದರ್ಶಿಸಿತ್ತು. ಆ ಪೋಸ್ಟರ್ ನಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ರ ಚಿತ್ರವಿತ್ತಾದರೂ, ಇನ್ನೊಂದು ಬದಿಯಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾರ ಚಿತ್ರ ಇರಲಿಲ್ಲ. ಬದಲಿಗೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಚಿತ್ರವಿತ್ತು. ರೋಹಿತ್ ಶರ್ಮಾ ಹೆಸರನ್ನು ಕೈಬಿಟ್ಟಿರುವುದಕ್ಕಾಗಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚಾನೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಮನಗಂಡ ಚಾನೆಲ್ ಈ ಪೋಸ್ಟರನ್ನು ಕೈಬಿಡುವುದಾಗಿ ಹೇಳಿದೆ. ಟೀಮ್ ಇಂಡಿಯಾ ಆಟಗಾರರು ಎರಡು ಬ್ಯಾಚ್‌ನಲ್ಲಿ ಪ್ರಯಾಣಿಸಲಿದ್ದು, ಭಾನುವಾರ ಮೊದಲ ತಂಡ ಭಾರತದಿಂದ ನಿರ್ಗಮಿಸಿದೆ.
ಇದನ್ನೂ ಓದಿ IND vs SA: ಡಕ್‌ಔಟ್ ಆಗುವ ಮೂಲಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸಂಜು ಸ್ಯಾಮ್ಸನ್!
ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1,979 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಕೊಹ್ಲಿ ತವರಿನ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 93 ರನ್ ಮಾತ್ರ. ಹೀಗಾಗಿ ಕೊಹ್ಲಿ ಆಸೀಸ್‌ನಲ್ಲಿ ಹೇಗೆ ಪ್ರದರ್ಶಣ ತೋರಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.