ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನ(IPL 2025) ಮೆಗಾ ಹರಾಜು ನ. 24 ಮತ್ತು 25ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಜೆಡ್ಡಾದ ಅಬಾದಿ ಅಲ್ ಜೋಹರ್ ಅರೆನಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ಯಾವ ಆಟಗಾರ ಯಾವ ತಂಡಕ್ಕೆ ಸೇರಬಹುದು ಎಂಬ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಚರ್ಚೆಗಳು ಆರಂಭಿಸಿದ್ದಾರೆ.
ಲಕ್ನೋ ತಂಡದಿಂದ ರಿಲೀಸ್ ಆಗಿರುವ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆ.ಎಲ್ ರಾಹುಲ್(KL Rahul) ಈ ಬಾರಿ ಆರ್‌ಸಿಬಿ ತಂಡಕ್ಕೆ ಮರಳುವ ಅಭಿಮಾನಿಗಳ ನಿರೀಕ್ಷೆ ಇದೆ. ಅಭಿಮಾನಿಳು ಕೂಡ ರಾಹುಲ್ ಆರ್‌ಸಿಬಿ ಪರ ಆಡಬೇಕೆಂದು ಆಸೆ ಪಟ್ಟಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅಣಕು ಐಪಿಎಲ್ ಹರಾಜಿನಲ್ಲಿ ರಾಹುಲ್ ಬರೋಬ್ಬರಿ 20 ಕೋಟಿ ರೂ.ಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಅಭಿಮಾನಿಗಳಿಗಾಗಿ ಆರ್‌ಸಿಬಿ ಏರ್ಪಡಿಸಿದ್ದ ಅಣಕು ಹರಾಜು ಪ್ರಕ್ರಿಯೆಯಲ್ಲಿ ರಾಹುಲ್ರನ್ನು ಸೆಳೆದುಕೊಳ್ಳಲು ಅಭಿಮಾನಿಗಳು 20 ಕೋಟಿ ರೂ.ವರೆಗೂ ಬಿಡ್ ಸಲ್ಲಿಸಿದ್ದರು.
2013ರಲ್ಲಿ ಆರ್‌ಸಿಬಿ ಮೂಲಕವೇ ರಾಹುಲ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2014ರಲ್ಲಿ ಹೈದರಾಬಾದ್, 2016ರಲ್ಲಿ ಮತ್ತೆ ಆರ್‌ಸಿಬಿ, 2018ರಲ್ಲಿ ಪಂಜಾಬ್ ಹೀಗೆ ತಂಡಗಳನ್ನು ಬದಲಾಯಿಸಿದ್ದರು. ಇದೇ ವರ್ಷ ನಡೆದಿದ್ದ ಐಪಿಎಲ್ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ IPL 2025: ರಿಷಭ್ ಪಂತ್‌ರನ್ನು ಆರ್‌ಸಿಬಿ ಖರೀದಿಸುತ್ತಾ? ಎಬಿ ಡಿ ವಿಲಿಯರ್ಸ್ ಹೇಳಿದ್ದಿದು!
ಕೊಹ್ಲಿ ನಾಯಕ?
ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿಯೇ ಮತ್ತೆ ಆರ್ಸಿಬಿಗೆ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ವಿರಾಟ್ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ವಿರಾಟ್ ಕೊಹ್ಲಿ 2013ರಲ್ಲಿ ಆರ್ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.