Friday, 22nd November 2024

Barbie Doll: ಗೊಂಬೆಗಳ ಪ್ಯಾಕ್‍ ಮೇಲೆ ಪೋರ್ನ್ ವೆಬ್‍ಸೈಟ್‌ ಲಿಂಕ್‍ ಪ್ರಿಂಟ್‍; ಇಷ್ಟೆಲ್ಲಾ ಮಾಡಿದ ಕಂಪನಿ ಕೊನೆಗೆ ಹೀಗಾ ಹೇಳೋದು!

Barbie Doll

ವಾಷಿಂಗ್ಟನ್‌: ಅಮೆರಿಕದ ಗೊಂಬೆಗಳ ತಯಾರಿಕಾ ಕಂಪನಿ  ಮಾಟೆಲ್ ಇತ್ತೀಚೆಗೆ ಬಾರ್ಬಿ(Barbie Doll) ಗೊಂಬೆಗಳ ಪ್ಯಾಕಿಂಗ್‍ ಮೇಲೆ ಪೋರ್ನ್‌ ವೆಬ್‍ಸೈಟ್  ಲಿಂಕ್‍ ಅನ್ನು ಪ್ರಿಂಟ್ ಮಾಡಿದ್ದಕ್ಕಾಗಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಘಟನೆ ವರದಿಯಾಗಿದೆ.  ಮ್ಯೂಸಿಕಲ್ ಫ್ಯಾಂಟಸಿ ಚಿತ್ರ ವಿಕೆಡ್ ಅನ್ನು ಪ್ರಚಾರ ಮಾಡಲು ಮುಂದಾದ ಕಂಪನಿ ಪೋರ್ನ್ ವೆಬ್‍ಸೈಟ್ ಲಿಂಕ್‍ ಇರುವ ಗೊಂಬೆಗಳ ಪ್ಯಾಕಿಂಗ್‍ ಅನ್ನು ಬಿಡುಗಡೆ ಮಾಡಿದೆ.  ಆದರೆ ಗೊಂಬೆಗಳ ಪ್ಯಾಕ್  ಹಿಂಭಾಗದಲ್ಲಿ ಚಿತ್ರದ ವೆಬ್‍ಸೈಟ್ ಪ್ರಿಂಟ್ ಮಾಡುವ ಬದಲು ಪೋರ್ನ್ ವೆಬ್‍ಸೈಟ್ ಲಿಂಕ್ ಅನ್ನು ತಪ್ಪಾಗಿ ಪ್ರಿಂಟ್ ಮಾಡಿದೆ. ವೆಬ್‍ಸೈಟ್ ಲಿಂಕ್ ಇರುವುದನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಗುರುತಿಸಿ  ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ವಿಕೆಡ್ ಚಿತ್ರದ ಬಿಡುಗಡೆಗೆ ಮುಂಚಿತವಾಗಿ ಗೊಂಬೆಗಳನ್ನು ಬಿಡುಗಡೆ ಮಾಡಲಾಗಿದೆ.  ಚಿತ್ರದ ಇಬ್ಬರು ಪ್ರಮುಖ ಪಾತ್ರಧಾರಿಗಳಾದ ಗ್ಲಿಂಡಾ ಮತ್ತು ಎಲ್ಫಾಬಾ ಅವರಂತಿರುವ ಗೊಂಬೆಗಳ ಪ್ಯಾಕ್‍ ಮೇಲೆ ಈ ಪೋರ್ನ್ ವೆಬ್‍ಸೈಟ್ ಲಿಂಕ್ ಅನ್ನು ತಪ್ಪಾಗಿ ಪ್ರಿಂಟ್ ಮಾಡಲಾಗಿದೆ. ಪ್ಯಾಕಿಂಗ್ ಹಿಂಭಾಗದಲ್ಲಿ wickedmovie.com ಬದಲು wicked.com ಎಂದು ಇರುವುದನ್ನು ಗಮನಿಸಿದ ಸೋಶಿಯಲ್ ಮೀಡಿಯಾ ಬಳಕೆದಾರರು  ಬೊಂಬೆ ತಯಾರಿಕಾ ಕಂಪನಿಯ ತಪ್ಪುಗಳನ್ನು ಎತ್ತಿ ತೋರಿಸುವ ಪೋಟೊಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಬಾರ್ಬಿ ಮತ್ತು ಹಾಟ್ ವ್ಹೀಲ್ಸ್ ತಯಾರಿಕೆಗೆ ಹೆಸರುವಾಸಿಯಾದ ಮಾಟೆಲ್ ಕಂಪನಿ “ಆಕಸ್ಮಿಕವಾಗಿ ಆದ ತಪ್ಪಿಗೆ” ಕ್ಷಮೆಯಾಚಿಸಿದೆ.

ಪ್ರಾಥಮಿಕವಾಗಿ ಮಕ್ಕಳಿಗಾಗಿ ತಯಾರಿಸಲಾದ ಈ ಗೊಂಬೆ ಉತ್ಪನ್ನಗಳು 150 ಕ್ಕೂ ಹೆಚ್ಚು ದೇಶಗಳನ್ನು ತಲುಪುತ್ತವೆ. ಹಾಗಾಗಿ ಈ ಗೊಂಬೆಗಳ ಮೇಲೆ ತಪ್ಪಾಗಿ ಪ್ರಿಂಟ್ ಆಗಿದ್ದು ಕಂಪನಿ ಮುಜುಗರಕ್ಕೊಳಗಾಗಿದೆ. ತಪ್ಪಿಗಾಗಿ ಕ್ಷಮೆಯಾಚಿಸಿದೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ!

ಅಮೆರಿಕಾದ ಗೊಂಬೆ-ತಯಾರಿಕಾ ಕಂಪನಿ ಮಾಟೆಲ್ ಇಂಕ್ 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ. ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್, ಬಿಲ್ಡ್ ಲಿಲ್ಲಿ ಎಂಬ ಜರ್ಮನ್‌ ಗೊಂಬೆಯಿಂದ ಸ್ಪೂರ್ತಿ ಪಡೆದು ಈ ಬಾರ್ಬಿ ಗೊಂಬೆಯನ್ನು ತಯಾರಿಸಿದ್ದರು.