ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾನುವಾರ ಉಗ್ರರು ಮತ್ತು ಸೇನೆ ನಡುವೆ ನಡೆದ ಎನ್‌ಕೌಂಟರ್(J&K Encounter) ವೇಳೆ ಇಬ್ಬರು ಚಾರಣಿಗರು ಅಚಾನಕಕ್ಕಾಗಿ ಸಿಲುಕಿಕೊಂಡಿರುವ ಘಟನೆ(Trekkers Rescued) ವರದಿಯಾಗಿದೆ. ಶ್ರೀನಗರದ ಜಬರ್ವಾನ್ ಪ್ರದೇಶದಲ್ಲಿ ಚಾರಣಕ್ಕೆ ಹೊರಟಿದ್ದ ಇಬ್ಬರು ಸೇನಾ ಕಾರ್ಯಾಚರಣೆ ವೇಳೆ ಸಿಲುಕಿಹಾಕಿಕೊಂಡಿದ್ದರು. ಭಯಭೀತರಾದ ಅವರು ತಕ್ಷಣ 100ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ರಕ್ಷಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ಚಾರಣಕ್ಕೆ ತೆರಳುವವರು ಮೊದಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಚಾರಣಿಗರು ತಮ್ಮ ಪ್ರಯಾಣದ ಯೋಜನೆಗಳು ಮತ್ತು ನಿರೀಕ್ಷಿತ ಮಾರ್ಗಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ವಿಶೇಷವಾಗಿ ಭದ್ರತಾ ಕಾರ್ಯಾಚರಣೆಗಳು ಇರುವ ಪ್ರದೇಶಗಳಲ್ಲಿ ಕಡ್ಢಾಯವಾಗಿ ಪೊಲೀಸರಿಗೆ ಮಾಹಿತಿ ನೀಡಿರಲೇಬೇಕು ಎಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥ ವಿಧಿ ಕುಮಾರ ಬಿರ್ಡಿ ಹೇಳಿದರು.
ಭಯೋತ್ಪಾದಕರು ಅವಿತು ಕುಳಿತಿರುವ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಬರ್ವಾನ್ ಅರಣ್ಯ ಪ್ರದೇಶದಲ್ಲಿ ನಿನ್ನೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಈ ವೇಳೆ ಪೊಲೀಸರು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿಯೂ ನಡೆದಿತ್ತು. ಆಗ ಅದೇ ಪ್ರದೇಶದಲ್ಲಿ ಚಾರಣಕ್ಕೆ ತೆರಳಿದ್ದ ಇಬ್ಬರು ಯುವಕರಿಗೆ ತಾವು ಅಪಾಯದಲ್ಲಿರುವ ಬಗ್ಗೆ ಅರಿವಾಗಿತ್ತು. ಅವರು ಅಲ್ಲೇ ಇದ್ದ ಬಂಡೆಗಳ ಹಿಂದೆ ಅಡಗಿಕೊಂಡರು. ಅವರಲ್ಲಿ ಒಬ್ಬರು 100 ಗೆ ಡಯಲ್ ಮಾಡಿ ಅವರ ಸ್ಥಳದ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದರು. ತಕ್ಷಣ ಕಾರ್ಯಾಚರಣೆಯಲ್ಲಿ ಸ್ಥಗಿತಗೊಳಿಸಿದ ಸೇನೆ ಚಾರಣಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿವೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಅದೃಷ್ಟವಶಾತ್, ಅವರಲ್ಲಿ ಒಬ್ಬರಿಗೆ ಪೊಲೀಸ್‌ಗೆ ಕರೆ ಮಾಡಬೇಕೆಂಬ ಐಡಿಯಾ ಬಂತು ಮತ್ತು ಅವರು ದೂರವಾಣಿ ಸಂಖ್ಯೆ 100ಕ್ಕೆ ಡಯಲ್ ಮಾಡಿದ್ದಾರೆ. ಪೊಲೀಸ್ ನಿಯಂತ್ರಣ ಕೊಠಡಿ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು ಮತ್ತು ರಕ್ಷಣಾ ತಂಡ ಅವರನ್ನು ಸ್ಥಳಾಂತರಿಸಿತು. ಸೇನಾ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ರವಾನಿಸುವಲ್ಲಿ ಪೊಲೀಸರು ಯಶಸ್ವಿಯಾದ ಕಾರಣ ದುರಂತ ತಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ತರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ನಾವು ಪ್ರತಿಯೊಬ್ಬ ನಾಗರಿಕರಿಗೂ ಸ್ಥಳೀಯರು, ಪ್ರವಾಸಿಗರು ಮತ್ತು ವಿಶೇಷವಾಗಿ ಚಾರಣಿಗರಿಗೆ ಮನವಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: J&K Encounter: ಕಣಿವೆ ರಾಜ್ಯದಲ್ಲಿ ಸೇನೆಯಿಂದ ಭರ್ಜರಿ ಬೇಟೆ; ವಿಲೇಜ್ ಡಿಫೆನ್ಸ್ ಗಾರ್ಡ್‌ಗಳ ಹತ್ಯೆಗೈದಿದ್ದ ಉಗ್ರರು ಟ್ರ್ಯಾಪ್!