Saturday, 23rd November 2024

Pustaka Santhe: ಮೂರು ದಿನಗಳ ʼವೀರಲೋಕ ಪುಸ್ತಕ ಸಂತೆʼ ನ.15ರಿಂದ; ನೂರಾರು ಅಂಗಡಿ, 100 ಲೇಖಕರು

pustaka sante

ಬೆಂಗಳೂರು: ಕನ್ನಡದ ಖ್ಯಾತ ಪ್ರಕಾಶನವಾದ ʼವೀರಲೋಕʼ (Veeraloka) ವತಿಯಿಂದ ಎರಡನೇ ವರ್ಷದ ʼಪುಸ್ತಕ ಸಂತೆʼ (Pustaka Santhe) ನವೆಂಬರ್‌ 15, 16 ಹಾಗೂ 17ರಂದು ಬೆಂಗಳೂರಿನ (Bengaluru news) ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ. ನೂರಾರು ಲೇಖಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹತ್ತಾರು ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ವೀರಲೋಕದ ರೂವಾರಿ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ.

ಕನ್ನಡ ಪುಸ್ತಕಲೋಕಗಳು ಎಲ್ಲೆಂದರಲ್ಲಿ ಸಿಗಬೇಕು, ಕನ್ನಡಿಗರಿರುವೆಡೆಯೇ ಅವು ಸಿಗಬೇಕು. ಕನ್ನಡ ಪುಸ್ತಕಗಳು ಕನ್ನಡಿಗರ ಬದುಕಿನ ಭಾಗವಾಗಬೇಕು ಎಂಬ ಆಶಯಗಳೊಂದಿಗೆ ವೀರಲೋಕ ಒಂದಿಲ್ಲೊಂದು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಅಂತಹುದ್ದೇ ಒಂದು ಪ್ರಯತ್ನ ಪುಸ್ತಕ ಸಂತೆ. ಕಳೆದ ವರ್ಷ ನಡೆದ ಪುಸ್ತಕ ಸಂತೆಯ ಮೊದಲ ಆವೃತ್ತಿ ಭಾರಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷವೂ ಪ್ರಕಾಶಕರು, ಲೇಖಕರು ಹಾಗೂ ಓದುಗರನ್ನು ಒಟ್ಟುಗೂಡಿಸುವ ಹಬ್ಬಕ್ಕೆ ವೀರಲೋಕ ಮುಂದಾಗಿದೆ.

ಪುಸ್ತಕ ಸಂತೆಗೆ ವೀರಲೋಕದ ಜೊತೆಗೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ನೂರಾರು ಪ್ರಕಾಶಕರು ಇಲ್ಲಿ ಸ್ಟಾಲ್‌ಗಳನ್ನು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಪುಸ್ತಕ ಸಂತೆಯಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ನಾಡಿನ ಅಷ್ಟೂ ಸರ್ಕಾರಿ ನೌಕರರ ಸಂಘ ಸಂಸ್ಥೆಗಳನ್ನೂ ಭಾಗವಹಿಸುವಂತೆ ಕೋರಲಾಗಿದೆ.

“ಓದುಗರು ಲೇಖಕರು ಮುಖಾಮುಖಿಯಾಗಿಸುವುದು ಈ ಪ್ರಯೋಗದ ಉದ್ದೇಶ. ತನ್ನ ಮೆಚ್ಚಿನ ಲೇಖಕರನ್ನು ಕಾಣುವ ಆಸೆ ಓದುಗರಿಗಿರಬಹುದು, ತಮ್ಮ ಅನಾಮಿಕ ಓದುಗರನ್ನು ಭೇಟಿಯಾಗುವ ಆಸೆ ಸಾಹಿತಿಗಳಿಗೂ ಇರಬಹುದು. ಆ ಇಬ್ಬರ ಮುಖಾಮುಖಿಗೆ ಈ ಸಂತೆ ವೇದಿಕೆಯಾಗುತ್ತಿದೆ. ಇಂತಹ ಪ್ರಯೋಗಕ್ಕೆ ತುಂಬು ಪ್ರೀತಿಯಿಂದ ಒಪ್ಪಿಗೆ ನೀಡಿದ ಎಲ್ಲಾ ಸಾಹಿತಿಗಳಿಗೆ ವೀರಲೋಕ ಮನದಾಳದ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ” ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

“ಸಂತೆ ಧೂಳು ಮುಕ್ತವಾಗಿರುತ್ತೆ ಎಂಬ ಖಾತ್ರಿ ವೀರಲೋಕದ್ದು. ಸುಮಾರು ಇಪ್ಪತ್ತು ಸಾವಿರ ಅಡಿಯಷ್ಟು ಸ್ಥಳಕ್ಕೆ ಒಂದು ಅಡಿಯಷ್ಟು ಎತ್ತರದ ಪ್ಲಾಟ್ ಫಾರ್ಮ್ ಹಾಕಿ, ಅದರ ಮೇಲೆ ರತ್ನಗಂಬಳಿ ಹೊದಿಸಿ, ತಲೆ ಮೇಲೆ ಜರ್ಮನ್ ಟೆಂಟ್ ಹಾಕಿಸಿ, ಜಗಮಗ ಅನ್ನೋ ದೀಪಗಳನ್ನು ಬೆಳಗಿಸಿ ಲೇಖಕ – ಓದುಗರನ್ನು ಸ್ವಾಗತಿಸಲು ಕಾಯುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Kannada Pustaka Habba: ಬೆಂಗಳೂರಿನಲ್ಲಿ ಅ.26 ರಿಂದ ಡಿ.1ರವರೆಗೆ ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’