ಮುಂಬೈ: ಭಾರತೀಯ ಚಿತ್ರೋದ್ಯಮದಲ್ಲಿ ಹಾಡು, ಸಂಗೀತಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಕೆಲವು ಸಿನಿಮಾಗಳು ಸಂಗೀತ ಕಥಾ ಹಂದರವನ್ನು ಒಳಗೊಂಡರೆ ಇನ್ನು ಕೆಲವು ಹಾಡುಗಳಿಂದಲೇ ಯಶಸ್ವಿಯಾಗುತ್ತವೆ. ಹಾಡುಗಳ ಮೂಲಕವೇ ಗಮನ ಸೆಳೆಯುವ ಚಿತ್ರಗಳ ಸಂಖ್ಯೆಯೂ ದೊಡ್ಡದಿದೆ. ಇದೇ ಕಾರಣಕ್ಕೆ ಚಿತ್ರ ನಿರ್ಮಾಪಕರು ಕೋಟಿ ಕೋಟಿ ರೂ. ಸುರಿದು ಚಿತ್ರಗಳಲ್ಲಿ ಹಾಡು ಅಳವಡಿಸಲು ಮುಂದಾಗುತ್ತಾರೆ. ಕೆಲವು ಗಾಯಕ ಗಾಯಕಿ ಹಾಡಿದ್ದಾರೆಂದರೆ ಆ ಹಾಡು ಹಿಟ್ ಆಗುತ್ತದೆ ಎನ್ನುವ ನಂಬಿಕೆಯೂ ಚಿತ್ರರಂಗದಲ್ಲಿದೆ. ಕೆಲವೊಮ್ಮೆ ಸಿನಿಮಾ ಹಿಟ್ ಆಗದಿದ್ದರೂ ಸಂಗೀತ ನಿರ್ದೇಶಕ, ಗಾಯಕರ ಕಾರಣಕ್ಕೆ ಆಲ್ಬಂ ಹಿಟ್ ಆಗಿ ಕೋಟಿ ಕೋಟಿ ರೂ. ಗಳಿಸಿದ ಉದಾಹರಣೆಯೂ ಇದೆ. ಹೀಗಾಗಿಯೇ ಸ್ಟಾರ್ ಗಾಯಕರ ಸಂಭಾವಣೆ ಲಕ್ಷ, ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹಾಗಾದರೆ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರು? ಅವರು ಪ್ರತಿ ಹಾಡಿ ಎಷ್ಟು ಸಂಭಾವನೆ ಪಡೆಯುತ್ತಾರೆ? ಎನ್ನುವ ವಿವರ ಇಲ್ಲಿದೆ (Highest-Paid Singer).
ಆರಂಭದ ದಿನಗಳಲ್ಲಿ ಸಿನಿಮಾಗಳಲ್ಲಿ ಹಾಡುಗಳಿದ್ದರೂ ಗಾಯಕರು ಅಷ್ಟೊಂದು ಸಂಭಾವನೆ ಪಡೆಯುತ್ತಿರಲಿಲ್ಲ. ನಾಮಕಾವಸ್ತೆಗಷ್ಟೇ ಅವರಿಗೆ ಸಂಭಾವನೆ ನೀಡಲಾಗುತ್ತಿತ್ತು. 60ರ ದಶಕದಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸಿದ ಕೀರ್ತಿ ಭಾರತದ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಸಲ್ಲುತ್ತದೆ. ಅವರು ಸಂಗೀತ ನಿರ್ದೇಶಕರು, ಸಾಹಿತಿಗಳಷ್ಟೇ ಸಂಭಾವನೆ ಪಡೆಯುವ ಮೂಲಕ ಕಾಂತ್ರಿಕಾರಿ ಬದಲಾವಣೆಗೆ ನಾಂದಿ ಹಾಡಿದರು. ಬಳಿಕ ನಿಧಾನವಾಗಿ ಗಾಯಕರಿಗೆ ಪ್ರಾಮುಖ್ಯತೆ ಸಿಗತೊಡಗಿತು. ಇದೀಗ ಜನಪ್ರಿಯ ಗಾಯಕರು ಪ್ರತಿ ಹಾಡಿಗೆ ಲಕ್ಷ ರೂ.ಗಳಲ್ಲಿ ಹಣ ಜೇಬಿಗಿಳಿಸುತ್ತಾರೆ. ಅದಾಗ್ಯೂ ಈ ಸಿಂಗರ್ ಪ್ರತಿ ಹಾಡಿಗೆ 3 ಕೋಟಿ ರೂ. ಚಾರ್ಜ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರನ್ನು ಮೀರಿಸಲು ಸದ್ಯಕ್ಕಂತೂ ಯಾರಿಗೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಅಂದಹಾಗೆ ಅವರು ಪೂರ್ಣ ಪ್ರಮಾಣದ ಗಾಯಕರಲ್ಲ. ಹೀಗೆ ಪಾರ್ಟ್‌ಟೈಂ ಗಾಯಕ ವೃತ್ತಿ ಮಾಡುತ್ತ ಕೋಟಿ ಕೋಟಿ ರೂ. ಎಣಿಸುವ ಆ ಸಿಂಗರ್ ಯಾರು?
ದಾಖಲೆ ನಿರ್ಮಿಸಿದ ಎ.ಆರ್.ರೆಹಮಾನ್
ದಾಖಲೆಯ ಸಂಭಾವಣೆ ಪಡೆಯುವ ಆ ಸಿಂಗರ್ ಎ.ಆರ್.ರೆಹಮಾನ್. ಸಂಗೀತ ನಿರ್ದೇಶಕರಾಗಿಯೂ ಗಮನ ಸೆಳೆಯುತ್ತಿರುವ ಅವರು ಸಿಂಗರ್ ಆಗಿಯೂ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 6 ಬಾರಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಪ್ರತಿ ಹಾಡಿಗೆ 3 ಕೋಟಿ ರೂ. ಚಾರ್ಜ್ ಮಾಡುತ್ತಾರಂತೆ. ಇದು ದೇಶದ ಇತರ ಪ್ರಸಿದ್ಧ ಗಾಯಕರು ಪಡೆಯುವ ಸಂಭಾವನೆಗಿಂತ ಸುಮಾರು 12-15 ಪಟ್ಟು ಅಧಿಕ.
ಸಾಮಾನ್ಯವಾಗಿ ರೆಹಮಾನ್ ತಮ್ಮದೇ ಸಂಗೀತ ನಿರ್ದೇಶನದಲ್ಲಿ ಹಾಡುತ್ತಾರೆ. ಇತರ ಸಂಗೀತ ನಿರ್ದೇಶಕರ ಹಾಡುಗಳಿಗೆ ಧ್ವನಿ ನೀಡಲು ಅವರು ಈ ದುಬಾರಿ ಸಂಭಾವನೆಯ ಬೇಡಿಕೆ ಇಡುತ್ತಾರೆ. ಮೂಲಗಳ ಪ್ರಕಾರ ಅವರು ಒಪ್ಪಿಕೊಂಡ ಸಂಗೀತ ನಿರ್ದೇಶನಕ್ಕೆ ಹೆಚ್ಚಿನ ಗಮನ ಹರಿಸಲು ಸಾಮಾನ್ಯವಾಗಿ ಇತರರ ಹಾಡುಗಳನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಅವರು ಇಷ್ಟೊಂದು ಸಂಭಾವನೆ ಕೇಳುತ್ತಾರಂತೆ. ಅದಾಗ್ಯೂ ಅವರೇ ಬೇಕೆಂದರೆ ನಿರ್ಮಾಪಕರು ಇಷ್ಟೊಂದು ಹಣ ಪಾವತಿಸಬೇಕಾಗುತ್ತದೆ.
ಯಾರಿಗೆ, ಎಷ್ಟು ಸಂಭಾವಣೆ ?
ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಗಾಯಕರು ಯಾರು ಎನ್ನುವುದನ್ನು ನೋಡುವುದಾದರೆ ಪ್ರತಿ ಹಾಡಿಗೆ 25 ಲಕ್ಷ ರೂ. ಸಂಭಾವನೆ ಪಡೆಯುವ ಮೂಲಕ ಶ್ರೇಯಾ ಘೋಷಾಲ್ 2ನೇ ಸ್ಥಾನದಲ್ಲಿದ್ದಾರೆ. ಸುನಿಧಿ ಚೌಹಾಣ್ ಮತ್ತು ಅರ್ಜಿತ್ ಸಿಂಗ್ ಪ್ರತಿ ಹಾಡಿಗೆ 18-20 ಲಕ್ಷ ರೂ. ಚಾರ್ಜ್ ಮಾಡುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಸೋನು ನಿಗಂ ಪ್ರತಿ ಹಾಡಿಗೆ 15-18 ಲಕ್ಷ ರೂ. ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Isha Koppikar: ಆತ ಬೇಜವಾಬ್ದಾರಿ ಮನುಷ್ಯ… ವಿಚ್ಛೇದನ ಕಾರಣ ಬಿಚ್ಚಿಟ್ಟ ʻಸೂರ್ಯವಂಶʼ ನಾಯಕಿ