ಕಲಬುರಗಿ: ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ (Waqf issue) ನೀಡಿರುವುದನ್ನು ಖಂಡಿಸಿ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಭಾನುವಾರ ನಡೆದಿದ್ದ ವಕ್ಫ್ ಹಠಾವೋ, ದೇಶ ಬಚಾವೋ ಪ್ರತಿಭಟನೆಯ ವೇಳೆ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ, ವಕ್ಫ್ ತೆಗೆಯದಿದ್ದರೆ ಜೀವ ತೆಗೆಯೋಕೆ ನಾವು ರೆಡಿ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿಭಟನಾ ಧರಣಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಗೃಹಸಚಿವರು, ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಕೈಯಲ್ಲಿ ಪೆನ್ ಬದಲು ತಲ್ವಾರ್ ಕೊಡಿ ಅಂತಾರೆ. ಯಾವ ಸೆಕ್ಷನ್ನಡಿ ಕ್ರಮ ತೆಗೆದುಕೊಳ್ಳಬೇಕೆಂದು ನೋಡೋಣ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಸ್ವಾಮೀಜಿ ಏನು ಹೇಳಿದ್ದರು?
ಕಲಬುರಗಿಯ ಅಫಜಲಪುರದಲ್ಲಿ ನಡೆದ ‘ವಕ್ಫ್ ಹಠಾವೋ ದೇಶ್ ಬಚಾವೋ’ ಪ್ರತಿಭಟನೆಯಲ್ಲಿ ಮಾತನಾಡಿದ ಮರುಳಾರಾಧ್ಯ ಸ್ವಾಮೀಜಿಗಳು, ಆ ಸಮುದಾಯದ ಎಲ್ಲ ಯುವಕರ ಮನೆಗಳಲ್ಲಿ ತಲ್ವಾರ್ಗಳಿವೆ. ಎದುರು ಬಂದವರನ್ನು ಕಡಿಯುತ್ತೇವೆ ಎನ್ನುತ್ತಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಿದೆ. ಹೀಗಾಗಿ ಮಕ್ಕಳ ಕೈಗೆ ಪೆನ್ನು ಕೊಡುವ ಬದಲು ತಲ್ವಾರ್ ಕೊಡಬೇಕು ಎಂದು ಹೇಳಿದ್ದರು. ಪೊಲೀಸರ ಎದುರೇ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು. ಹೀಗಾಗಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Vikrant Massey: ಭಾರತದ ಮುಸ್ಲಿಮರು ಅಪಾಯದಲ್ಲಿಲ್ಲ… ನಟ ವಿಕ್ರಾಂತ್ ಮಾಸ್ಸೆ ವಿವಾದ; ಪ್ರಚಾರದ ಗಿಮಿಕ್ ಎಂದ ನೆಟ್ಟಿಗರು
ಎಚ್ಡಿ ಕುಮಾರಸ್ವಾಮಿಗೆ ಅವಹೇಳನಕಾರಿ ಮಾತು ಬಳಸಿದ ಜಮೀರ್ ಅಹ್ಮದ್
ರಾಮನಗರ: ಚನ್ನಪಟ್ಟಣದಲ್ಲಿ ವಿಧಾನಸಭೆ (Channapatna Bypoll) ಉಪಚುನಾವಣೆ ಪ್ರಚಾರ ಕಾವೇರಿದ್ದು, ಪ್ರಚಾರದ ಭರಾಟೆಯ ನಡುವೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed khan) ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ʼಕರಿಯʼ ಎಂಬ ಪದ ಬಳಸಿ ನಿಂದಿಸಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಭಾಷಣದ ಮಧ್ಯೆ ʼಕರಿಯ ಕುಮಾರಸ್ವಾಮಿʼ ಎಂದು ಟೀಕಿಸಿದ್ದಾರೆ.
ರವಿವಾರ ರಾತ್ರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಪರವಾಗಿ ಜಮೀರ್ ಅಹ್ಮದ್ ಪ್ರಚಾರಕ್ಕೆ ಆಗಮಿಸಿದ್ದರು. ಪ್ರಚಾರ ಭಾಷಣದಲ್ಲಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್” ಎಂದು ಉರ್ದುವಿನಲ್ಲಿ ಹೇಳಿದರು.
“ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು, ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್ ಬೇಡ ಅಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ? ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ” ಎಂದು ವಾಗ್ದಾಳಿ ಮಾಡಿದ್ದಾರೆ.
ಜಮೀರ್ ಅಹ್ಮದ್ ಈ ಹಿಂದೆಯೂ ಇದೇ ರೀತಿಯಾದ ಹೇಳಿಕೆ ನೀಡಿದ್ದರು. 2021ರಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರನ್ನು ಜಮೀರ್ ಅಹ್ಮದ್ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದರು.
ಇದನ್ನೂ ಓದಿ: HD Kumaraswamy: ಐಪಿಎಸ್ ಅಧಿಕಾರಿ ಚಂದ್ರಶೇಖರ್ ಒಬ್ಬ ಕ್ರಿಮಿನಲ್, ಬ್ಲ್ಯಾಕ್ ಮೇಲರ್; ಎಚ್ಡಿ ಕುಮಾರಸ್ವಾಮಿ ಕಿಡಿ