Thursday, 14th November 2024

IND vs SA: ಜಿತೇಶ್‌ ಶರ್ಮಾ ಇನ್‌? 3ನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

India's Predicted Playing XI For 3rd T20I Against South Africa

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ಬಂದು ಭಾರತ ತಂಡ ಸೋಲು ಅನುಭವಿಸಿದೆ. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟಿ20ಐ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಮೂರನೇ ಟಿ20ಐ ಪಂದ್ಯ ನವೆಂಬರ್‌ 13 ರಂದು ಬುಧವಾರ ಸೆಂಚೂರಿಯನ್‌ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯಲಿದೆ. ಟಿ20ಐ ಸರಣಿಯಲ್ಲಿ ಭಾರತ ತಂಡ ಗೆಲವು ಪಡೆಯಬೇಕೆಂದರೆ ಇನ್ನುಳಿದ ಎರಡೂ ಪಂದ್ಯಗಳನ್ನು ಜಯಿಸಬೇಕು.

ಸಂಜು ಸ್ಯಾಮ್ಸನ್‌ ಶತಕದ ಬಲದಿಂದ ಭಾರತ ತಂಡ ಮೊದಲನೇ ಪಂದ್ಯದಲ್ಲಿ 61 ರನ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ಸರಣಿಯಲ್ಲಿ ಶುಭಾರಂಭ ಕಂಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕಾರಣ ಟೀಮ್‌ ಇಂಡಿಯಾ ಮೂರು ವಿಕೆಟ್‌ಗಳಿಂದ ಸೋಲು ಒಪ್ಪಿಕೊಳ್ಳಬೇಕಾಯಿತು. ಆದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್‌ಗಳ ಸಾಧಾರಣ ಗುರಿ ನೀಡಿದ್ದರ ಹೊರತಾಗಿಯೂ ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ 5 ವಿಕೆಟ್‌ ಸಾಧನೆ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಸೋಲಿನ ಆತಂಕ ಮೂಡಿಸಿದ್ದರು. ಆದರೆ, ಕೊನೆಯಲ್ಲಿ ಜೆರಾಲ್ಡ್‌ ಕೋಯೆಡ್ಲಿ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ. ಆದರೆ, ಡೆತ್‌ ಓವರ್‌ಗಳಲ್ಲಿ ಆವೇಶ ಖಾನ್‌ ಹಾಗೂ ಅರ್ಷದೀಪ್‌ ಸಿಂಗ್‌ ದುಬಾರಿಯಾಗಿದ್ದರು. ಈ ಕಾರಣದಿಂದ ಮೂರನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಕನಿಷ್ಠ ಒಂದು ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ. ಒಂದು ವೇಳೆ ಬ್ಯಾಟಿಂಗ್‌ ಡೆಪ್ತ್‌ ಹೆಚ್ಚಿಸಿಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಿದರೆ, ಆವೇಶ್‌ ಖಾನ್‌ ಅವರನ್ನು ಕೂರಿಸಿ ಅವರ ಸ್ಥಾನಕ್ಕೆ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಜಿತೇಶ್‌ ಶರ್ಮಾ ಅವರನ್ನು ಆಡಿಸಬಹುದು.

ಮತ್ತೊಂದು ಕಡೆ ಭಾರತ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ ಅವರು ಆರಂಭಿಕ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಅವರಿಂದ ಕನಿಷ್ಠ ಎರಡಂಕಿ ವೈಯಕ್ತಿಕ ಮೊತ್ತ ಕೂಡ ಗಳಿಸಲು ಸಾಧ್ಯವಾಗಿಲ್ಲ . ಆದರೆ, ಯುವ ಬ್ಯಾಟ್ಸ್‌ಮನ್‌ಗೆ ದೀರ್ಘಾವಧಿ ಅವಕಾಶ ನೀಡಲು ಭಾರತ ತಂಡ ಬಯಸಬಹುದು. ಈ ಹಿನ್ನೆಲೆಯಲ್ಲಿ ಅವರನ್ನು ಮೂರನೇ ಪಂದ್ಯದಲ್ಲಿಯೂ ಟೀಮ್‌ ಮ್ಯಾನೇಜ್‌ಮೆಂಟ್‌ ಉಳಿಸಿಕೊಳ್ಳಬಹುದು. ಆದರೆ, ಮುಂದಿನ ಪಂದ್ಯದಲ್ಲಿ ರನ್‌ಗಳಿಸಲೇಬೇಕಾದ ಒತ್ತಡ ಅಭಿಷೇಕ್‌ ಶರ್ಮಾ ಅವರ ಮೇಲಿದೆ.

ಮೂರನೇ ಟಿ೨೦ಐ ಪಂದ್ಯದ ವಿವರ

ಭಾರತ ಹಾಗೂ ದಕ್ಷಿಣ ಆಫ್ರಿಕಾ
ದಿನಾಂಕ: ನವೆಂಬರ್‌ 13, 2024
ಸಮಯ: ರಾತ್ರಿ 08: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಸೂಪರ್‌ಸ್ಪೋರ್ಟ್‌ ಪಾರ್ಕ್‌, ಸೆಂಚೂರಿಯನ್‌
ನೇರ ಪ್ರಸಾರ: ಸ್ಪೋರ್ಟ್ಸ್‌ 18
ಲೈವ್‌ ಸ್ಟ್ರೀಮಿಂಗ್‌: ಜಿಯೋ ಸಿನಿಮಾ

ಮೂರನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿ.ಕೀ), ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ಜಿತೇಶ ಶರ್ಮಾ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯ್‌, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ

ಈ ಸುದ್ದಿಯನ್ನು ಓದಿ: IND vs SA: 5 ವಿಕೆಟ್‌ ಸಾಧನೆ ಮಾಡಿದ ವರುಣ್‌ ಚಕ್ರವರ್ತಿ ಬಗ್ಗೆ ಸೂರ್ಯಕುಮಾರ್‌ ಹೇಳಿದ್ದಿದು!