ಬೆಂಗಳೂರು: ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ. ಜೆಡಿಎಸ್ ನಾಯಕರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ. ಅವರು ತಮ್ಮ ಕುಟುಂಬದ ಅಳಿವು-ಉಳಿವಿಗಾಗಿ ಮತ ಕೇಳುತ್ತಿದ್ದಾರೆ. ನಾವು ಚನ್ನಪಟ್ಟಣದ ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ (DK Suresh) ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಅವರು ಮಾತನಾಡಿದರು.
ಡಿ.ಕೆ. ಸಹೋದರರು ಅಪೂರ್ವ ಸಹೋದರರು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ”ಅಪೂರ್ವ ಮಕ್ಕಳು, ಮೊಮ್ಮಕ್ಕಳು, ಅಪೂರ್ವ ಕುಮಾರಸ್ವಾಮಿ ಕುಟುಂಬ, ಎಚ್ಡಿಕೆ ಕುಟುಂಬ, ದೇವೇಗೌಡರ ಕುಟುಂಬ ಎಂದು ನಾವು ಹೇಳುವುದಾ? ನಾವು ಅಪೂರ್ವ ಸಹೋದರರೇ. ದೇವೇಗೌಡರ ಮೊಮ್ಮಕ್ಕಳ ಬಗ್ಗೆ ಎಳೆ, ಎಳೆಯಾಗಿ ಬಿಡಿಸಿ ಹೇಳಿದರೆ ಅವರಿಗೆ ನೋವಾಗುತ್ತದೆ. ತೀಕ್ಷವಾಗಿ ಮಾತನಾಡದೆ ಅವರ ವಯಸ್ಸಿಗೆ ಗೌರವ ಕೊಟ್ಟು ನಾವು ಮಾತನಾಡುತ್ತಿಲ್ಲ” ಎಂದರು.
ಈ ಸುದ್ದಿಯನ್ನೂ ಓದಿ | Pustaka Santhe: ಮೂರು ದಿನಗಳ ʼವೀರಲೋಕ ಪುಸ್ತಕ ಸಂತೆʼ ನ.15ರಿಂದ; ನೂರಾರು ಅಂಗಡಿ, 100 ಲೇಖಕರು
ಗ್ಯಾರಂಟಿಯಿಂದ ಅವರಿಗೆ ಹೊಟ್ಟೆಉರಿ
ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎನ್ನುವ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಗ್ಯಾರಂಟಿ ಯೋಜನೆಗಳಿಂದ ಕಸಿವಿಸಿಯಾಗಿದೆ. ಅವರಿಗೆ ಗ್ಯಾರಂಟಿಗಳು ಬೇಡ ಎನ್ನಿಸಿದ್ದರೆ ನೇರವಾಗಿ ಗ್ಯಾರಂಟಿಗಳನ್ನು ನಿಲ್ಲಿಸಲಿ ಎಂದು ಜನರ ಮುಂದೆ ಹೇಳಲಿ. ಈಗಾಗಲೇ ಅನೇಕ ಬಾರಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಸಿಎಂ, ಪಕ್ಷದ ರಾಷ್ಟೀಯ ಅಧ್ಯಕ್ಷರು, ರಾಹುಲ್ ಗಾಂಧಿ ಅವರು ಸ್ಪಷ್ಟ ಪಡಿಸಿದ್ದಾರೆ ಎಂದರು.
ಪ್ರಧಾನಿ ಮೋದಿ ಸುಳ್ಳು ಹೇಳಬಾರದು
ಕರ್ನಾಟಕದ ಭ್ರಷ್ಟಾಚಾರದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎನ್ನುವ ಪ್ರಧಾನಿಗಳ ಆರೋಪದ ಬಗ್ಗೆ ಕೇಳಿದಾಗ, “ಪ್ರಧಾನಿ ಮೋದಿ ಅವರು ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿ. ಅವರು ಹೀಗೆ ಸುಳ್ಳು ಹೇಳಬಾರದು. ಜತೆಗೆ ಎಲ್ಲಾ ಏಜೆನ್ಸಿಗಳು ಅವರ ಕೈಯಲ್ಲಿ ಇರುವ ಕಾರಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಆರೋಪವನ್ನು ಸ್ಪಷ್ಟಪಡಿಸಲಿ. ಕೇವಲ ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿಗಳಿಂದ ಈ ರೀತಿಯ ಆರೋಪವನ್ನು ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ನಾಲ್ಕುವರೇ ವರ್ಷಗಳ ಕಾಲ ಅವರೇ ಪ್ರಧಾನಿಗಳಾಗಿ ಇರುತ್ತಾರೆ. ಅವರು ಇಂತಹ ರಾಜಕೀಯ ಹೇಳಿಕೆ ನೀಡುವುದು ಶೋಭೆಯಲ್ಲ” ಎಂದರು.
ಕರ್ನಾಟಕಕ್ಕೆ ಮೋದಿ ಅವರಿಂದ ಅನ್ಯಾಯ
ಮೋದಿ ಅವರು ಕರ್ನಾಟಕಕ್ಕೆ ಕಳೆದ ಹತ್ತುವರೇ ವರ್ಷಗಳಿಂದ ಯಾವ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಿಳಿಸಲಿ. ಮಹದಾಯಿ ಯೋಜನೆಗೆ ಅನುಮತಿ ಕೊಡಿಸಿದ್ದಾರೆಯೇ? ಬೆಂಗಳೂರಿಗೆ ಯಾವ ಕೊಡುಗೆ ಕೊಟ್ಟಿದ್ದಾರೆ ತಿಳಿಸಲಿ. ನಮಗೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ. 4 ಲಕ್ಷ ಕೋಟಿ ನಮ್ಮ ತೆರಿಗೆಯನ್ನು ತೆಗೆದುಕೊಂಡು ಹೋಗಿ ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದಾರೆ. ಬಿಜೆಪಿಯವರು ಇದರ ಬಗ್ಗೆ ಉತ್ತರಿಸಲಿ. ಈ ರಾಜ್ಯದ ಬಗ್ಗೆ ಅವರು ತೋರಿಸುತ್ತಿರುವ ಮಲತಾಯಿ ಧೋರಣೆಗಳು ನೂರಾರಿವೆ. ತೆರಿಗೆ ಅನ್ಯಾಯ, ಉದ್ಯೋಗ ಸೃಷ್ಟಿ ಯಾವ ಕೆಲಸವೂ ಆಗಿಲ್ಲ. ಗುಜರಾತ್ಗೆ ಎಲ್ಲಾ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ದೂರಿದರು.
ದೇವೇಗೌಡರು ಇಳಿವಯಸ್ಸಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯವಾಗಿ ಉತ್ತರ ಕೊಡುತ್ತೇವೆ. ಅವರು ಯಾರ ಬಳಿ ಬೇಕಾದರೂ ಹೋಗಲಿ. ಅವರು ಈ ಹಿಂದೆ ಏನೇನು ಮಾತನಾಡಿದ್ದಾರೆ ಎಂದು ಮಾಧ್ಯಮದವರೇ ಹುಡುಕಿ ನೋಡಿ. ನಾವು ಮಾತನಾಡಿದ್ದನ್ನು ಮಾತ್ರ ತಿರುಗಿಸಿ ಹಾಕುತ್ತೀರಿ. ಅವರ ವಿಚಾರದಲ್ಲಿ ಅದೇ ರೀತಿ ನಡೆಯಿರಿ. ನಾನು ಈ ಹಿಂದೆ ಆಡಿದ ಮಾತುಗಳಿಗೆ ಬದ್ಧನಾಗಿ ಇದ್ದೇನೆ. ದೇವೇಗೌಡರು, ಕುಮಾರಸ್ವಾಮಿ ಅವರು ಪ್ರಧಾನಿಗಳ ಬಗ್ಗೆ ಹಾಗೂ ಬಿಜೆಪಿ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದನ್ನು ಜನರಿಗೆ ಮಾಧ್ಯಮಗಳು ತಿಳಿಸಬೇಕು ಎಂದರು.
ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಚುನಾವಣೆಯು ಕೇವಲ ಒಂದು ವಾರ ಇರುವಾಗ ಬಂದು ಜನರಿಗೆ ಹಣ ಹಂಚಿ ಗೆಲ್ಲಬೇಕು ಎಂದು ಹೇಳಿದ್ದರು. ಇದೇ ಚಾಳಿಯನ್ನು ಈಗ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿಯೇ ಉಳಿದು ಮಗ, ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ತಂತ್ರ ಮಾಡುತ್ತಾ ಇದ್ದಾರೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ
ಗೌರವಕ್ಕಾಗಿ ದೇವೇಗೌಡರ ಹೆಸರು
ದೇವೇಗೌಡ ಬ್ಯಾರೇಜ್ ಜಟಾಪಟಿ ಬಗ್ಗೆ ಕೇಳಿದಾಗ, ದೇವರಾಜ ಅರಸು ಅವರು ಈ ಯೋಜನೆ ಮಂಜೂರು ಮಾಡಿದರು, ಗುಂಡೂರಾವ್ ಅವರ ಕಾಲದಲ್ಲಿ ಕೆಲಸ ಪ್ರಾರಂಭವಾಯಿತು, ಜೆಡಿಎಸ್ ಅವರು ಯೋಜನೆಯನ್ನು ಪುನರ್ ಅವಲೋಕನ ಮಾಡಿದರು. ದೇವೇಗೌಡರ ಮಾನಸ ಪುತ್ರ ವರದೇಗೌಡರು ಅವರ ಮೇಲಿನ ಅಭಿಮಾನಕ್ಕಾಗಿ, ಪ್ರಧಾನಿ ಆಗಿದ್ದರು ಎಂದು ಅವರ ಹೆಸರು ಇಟ್ಟರು. ಇದು ದಾಖಲೆಗಳಲ್ಲಿ ಇದೆ ಎಂದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.