Thursday, 14th November 2024

IPL 2025: ಎಂಎಸ್‌ ಧೋನಿಯ ಐಪಿಎಲ್‌ ನಿವೃತ್ತಿ ಯಾವಾಗ? ಸಿಎಸ್‌ಕೆ ಸಿಇಒ ಮಹತ್ವದ ಮಾಹಿತಿ!

IPL 2025: 'He will play his last game in Chennai'-CSK CEO Kasi Viswanathan on MS Dhoni's future

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ಧೋನಿಯು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಬರೋಬ್ಬರಿ ಐದು ವರ್ಷಗಳು ಕಳೆದಿವೆ. ಆದರೆ, ಅವರು ಸಿಎಸ್‌ಕೆ ತಂಡದ ಪರ ಕೇವಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇದರ ನಡುವೆ ಎಂಎಸ್‌ ಧೋನಿಯ ಪಾಲಿಗೆ 2025ರ ಐಪಿಎಲ್‌ (IPL 2025) ಕೊನೆಯ ಟೂರ್ನಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚೆನ್ನೈ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್‌ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮುಂಬರುವ 2025ರ ಐಪಿಎಲ್‌ ಮೆಗಾ ಹರಾಜಿನ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎಂಎಸ್‌ ಧೋನಿ ಅವರನ್ನು ಅನ್‌ಕ್ಯಾಪ್ಡ್‌ ಆಟಗಾರರ ನಿಯಮದ ಅಡಿಯಲ್ಲಿ ಎಂಎಸ್ ಧೋನಿಯನ್ನು 4ಕೋಟಿ ರೂ. ಗಳಿಗೆ ಉಳಿಸಿಕೊಂಡಿದೆ. ಆ ಮೂಲಕ ಮುಂಬರುವ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಲು ಎಂಎಸ್‌ ಧೋನಿ ಕಣಕ್ಕೆ ಇಳಿಯುತ್ತಿರುವುದು ಸ್ಪಷ್ಟವಾಗಿದೆ. ಆದರೆ, ಎಂಎಸ್‌ ಧೋನಿ, ಈ ಟೂರ್ನಿಯ ಮೂಲಕ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು ಮುಗಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ.

ಎಂಎಸ್‌ ಧೋನಿಯ ಐಪಿಎಲ್‌ ಭವಿಷ್ಯದ ಬಗ್ಗೆ ಸಿಎಸ್‌ಕೆ ಸಿಇಒ ಹೇಳಿಕೆ

ಅಂದ ಹಾಗೆ ಎಂಎಸ್‌ ಧೋನಿಯ ಐಪಿಎಲ್‌ ಭವಿಷ್ಯದ ಬಗ್ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕಾಶಿ ವಿಶ್ವನಾಥನ್‌ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಐಪಿಎಲ್‌ ನಿವೃತ್ತಿ ಬಗ್ಗೆ ಎಂಎಸ್‌ ಧೋನಿ ಅವರೇ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಆದರೆ, ಅವರು ತಮ್ಮ ಕೊನೆಯ ಐಪಿಎಲ್‌ ಪಂದ್ಯವನ್ನು ಚೆನ್ನೈನಲ್ಲಿಯೇ ಆಡಲಿದ್ದಾರೆಂದು ಅವರು ತಿಳಿಸಿದ್ದಾರೆ.

“ನಿವೃತ್ತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಮಾಹಿ ಭಾಯ್‌ ಅವರ ಬಳಿಯೇ ಕೇಳಬೇಕು ಹಾಗೂ ಈ ಎಲ್ಲಾ ಮಾಹಿತಿ ಅವರ ಬಳಿ ಇದೆ. ಈ ಮಾಹಿತಿ ಕೊನೆಯ ಕ್ಷಣದಲ್ಲಿ ಹೊರಬೀಳಲಿದೆ. ಸಿಎಸ್‌ಕೆ ತಂಡದ ಬಗ್ಗೆ ಅವರಿಗೆ ಇರುವ ಉತ್ಸಾಹ ನಿಮಗೆಲ್ಲರಿಗೂ ಗೊತ್ತಿದೆ. ಅವರು ಇತ್ತೀಚಿನ ಸಂದರ್ಶನದಲ್ಲಿ ತಾನು ತನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿಯೇ ಆಡುತ್ತೇನೆಂದು ಹೇಳಿದ್ದರು. ಹಾಗಾಗಿ ಅವರು ಚೆನ್ನೈಗಾಗಿ ಆಡುವಷ್ಟು ದಿನಗಳ ಕಾಲ ಆಡಲಿ ಹಾಗೂ ಅವರಿಗೆ ಬಾಗಿಲುಗಳು ಸದಾ ತೆರೆದಿವೆ. ಅವರ ಬದ್ದತೆ ಮತ್ತು ಸಮರ್ಪಣಾ ಭಾವನೆಯನ್ನು ನಾವೆಲ್ಲಾ ನೋಡಿದ್ದೇವೆ ಹಾಗಾಗಿ ಅವರೇ ಈ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ,” ಎಂದು ಸಿಎಸ್‌ಕೆ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಅವರೊಂದಿಗಿನ ಸಂಭಾಷಣೆಯಲ್ಲಿ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ.

2025ರ ಐಪಿಎಲ್‌ಗೆ ಸಿಎಸ್‌ಕೆ ಉಳಿಸಿಕೊಂಡವರ ವಿವರ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೆಗಾ ಹರಾಜಿನ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಎಂಎಸ್‌ ಧೋನಿ ಸೇರಿದಂತೆ ಒಟ್ಟು ಐವರು ಆಟಗಾರರನ್ನು ಉಳಿಸಿಕೊಂಡಿದೆ. ನಾಯಕ ಋತುರಾಜ್‌ ಗಾಯಕ್ವಾಡ್‌ (18 ಕೋಟಿ ರೂ.), ಮತೀಶ ಪತಿರಣ (13ಕೋಟಿ ರೂ.), ಶಿವಂ ದುಬೆ (12 ಕೋಟಿ ರೂ.) ಹಾಗೂ ರವೀಂದ್ರ ಜಡೇಜಾ (18 ಕೋಟಿ ರೂ.) ಅವರನ್ನು ಚೆನ್ನೈ ಫ್ರಾಂಚೈಸಿ ಉಳಿಸಿಕೊಂಡಿದೆ. ಈ ಐವರು ಆಟಗಾರರನ್ನು ಉಳಿಸಿಕೊಳ್ಳಲು ಚೆನ್ನೈ ಫ್ರಾಂಚೈಸಿಯ ಖಾತೆಯಲ್ಲಿದ್ದ ಒಟ್ಟು 120 ಕೋಟಿ ರೂ. ಹಣದಲ್ಲಿ 65 ಕೋಟಿ ರೂ. ಗಳನ್ನು ಉಪಯೋಗಿಸಿಕೊಂಡಿದೆ.

ಈ ಸುದ್ದಿಯನ್ನು ಓದಿ: IND vs SA: ʼನನ್ನ ಮಗನ 10 ವರ್ಷಗಳ ವೃತ್ತಿ ಜೀವನವನ್ನು ಈ ನಾಲ್ವರು ಹಾಳು ಮಾಡಿದ್ದಾರೆʼ-ಸಂಜು ಸ್ಯಾಮ್ಸನ್‌ ತಂದೆ ಶಾಕಿಂಗ್‌ ಹೇಳಿಕೆ!