Thursday, 21st November 2024

Pralhad Joshi: ಭಯೋತ್ಪಾದಕರನ್ನು ಕೊಲ್ಲದೆ ಬಿರಿಯಾನಿ ತಿನ್ನಿಸಬೇಕೇ?: ಫಾರೂಕ್ ಅಬ್ದುಲ್ಲಾ ವಿರುದ್ಧ ಜೋಶಿ ಕಿಡಿ

Pralhad Joshi

ಹುಬ್ಬಳ್ಳಿ: ” ಭಯೋತ್ಪಾದಕರನ್ನು ಹತ್ಯೆ ಮಾಡಬಾರದು ಎನ್ನುತ್ತಾರೆ. ಹಾಗಾದರೆ ಬಿರಿಯಾನಿ ತಿನ್ನಿಸಬೇಕೇ? ಫಾರೂಕ್ ಅಬ್ದುಲ್ಲಾ ಒಬ್ಬ ಮತಾಂಧ. ಆದರೆ, ಕಾಂಗ್ರೆಸ್ಸಿಗರಿಗೆ ಏನಾಗಿದೆ? ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ತೋರುತ್ತಾರೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ‌ (Pralhad Joshi) ಕಿಡಿ ಕಾರಿದರು.

ಭಯೋತ್ಪಾದಕರನ್ನು ಕೊಲ್ಲುವ ಬದಲು ಸೆರೆಹಿಡಿಯಬೇಕು ಎಂಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಸಿಎಂ ಬರೀ ಮುಸಲ್ಮಾನರಿಗೆ ಇದ್ದಾರೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೀ ಮುಸಲ್ಮಾನರಿಗಾಗಿ ಇದ್ದಾರೋ ? ಅಥವಾ ನಾಡಿನ ಸಮಗ್ರ ಜನತೆಗಾಗಿ ಇದ್ದಾರೋ? ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಜೋಶಿ ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿರೋವರೆಗೆ ಗಲಭೆ ಪ್ರಕರಣಗಳಲ್ಲಿ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯುವುದು, ದೇಶದ್ರೋಹ, ಸಮಾಜ ದ್ರೋಹ ಮಾಡಿದವರ ರಕ್ಷಣೆಗೆ ನಿಲ್ಲುವುದು, ವಕ್ಫ್ ಆಸ್ತಿ ಬೇಕಾ ಬಿಟ್ಟಿ ಮಾಡುವುದು, ಶಾದಿ ಭಾಗ್ಯ ಮತ್ತೊಂದು ಮಗದೊಂದು ಮಾಡಿಕೊಳ್ಳುವುದು ಇದೇ ಇವರ ಕೆಲಸವಾಗಿದೆ. ಕಾಂಗ್ರೆಸ್ಸಿಗರು ದೇಶದಲ್ಲಿ ಭಯೋತ್ಪಾದನೆ ಕುರಿತು ಮೃದು ಧೋರಣೆ ತೋರುತ್ತಲೇ ಬಂದಿದ್ದಾರೆ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ | Waqf issue: ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ ಹೇಳಿಕೆ; ಮರುಳಾರಾಧ್ಯ ಶಿವಾಚಾರ್ಯ ಶ್ರೀ ವಿರುದ್ಧ ಎಫ್‌ಐಆರ್

ವಕ್ಫ್‌ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೂ ಇರುತ್ತೆ: ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಗೆ ಇರೋ ಮೂಲ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೇವೆ. ಆದರೆ, ಅತಿಕ್ರಮಣವನ್ನಲ್ಲ. ವಕ್ಫ್ ಅಸ್ತಿ ಯಾರೊಬ್ಬರ ಸ್ವತ್ತೂ ಆಗಬಾರದು. ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಸೇರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸ್ಪಷ್ಟಪಡಿಸಿದರು.

ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮೊದಲು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಲಿ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಗೆ ಇರೋ ಮೂಲ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೇವೆ. ಆದರೆ, ಅತಿಕ್ರಮಣವನ್ನಲ್ಲ ಎಂದು ತಿಳಿಸಿದ್ದಾರೆ.

2 ಲಕ್ಷ 30 ಸಾವಿರ ಕೋಟಿ ಆಸ್ತಿ ವಕ್ಫ್ ಬಳಿಯಿದೆ. ಇದನ್ನು ಕಾಂಗ್ರೆಸ್ಸಿನಲ್ಲಿ ಇರೋ ಮುಸ್ಲಿಂ ಮುಖಂಡರು ದೋಚುತ್ತಿದ್ದಾರೆ ಎಂದು ಆರೋಪಿಸಿದರು.

ವಕ್ಫ್ ಉದ್ದೇಶ, ವಕ್ಫ್ ನಿಯಮ ಏನಿದೆ? ಅದನ್ನು ಪಾಲಿಸಲು ನಮ್ಮ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ವಕ್ಫ್ ಗೆ ಮುಸಲ್ಮಾನರು ಮತ್ತು ಕೆಲ ಹಿಂದುಗಳೂ ದಾನ ಕೊಟ್ಟ ಆಸ್ತಿಯನ್ನು ಅನ್ಯರ ಪಾಲಾಗದಂತೆ ರಕ್ಷಿಸಬೇಕು. ಹೆಚ್ಚುವರಿ ವಕ್ಫ್ ಆಸ್ತಿಯನ್ನು ತೆಗೆಸುತ್ತೇವೆ. ನಿಜವಾಗಿ ಇದ್ದ ಮೂಲ ವಕ್ಫ್ ಆಸ್ತಿಯನ್ನು ಆಯಾ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂಬುದು ಬಿಜೆಪಿ ನಿಲುವಾಗಿದೆ ಎಂದರು.

ಬಿಜೆಪಿಯವರು ಯಾವತ್ತೂ ಊರೂರು ಓಡಾಡಿ ಅದಾಲತ್ ನಡೆಸಿ ತಹಸೀಲ್ದಾರ್‌ಗಳಿಗೆ ಧಮ್ಕಿ ಕೊಟ್ಟು ಪಹಣಿಯಲ್ಲಿ ವಕ್ಫ್ ಆಸ್ತಿಯನ್ನಾಗಿ ಸೇರಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಮಾಡೋ ದಾಷ್ಠ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ | Bandi Sanjay Kumar: ಲಾರಿಯಡಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ರಕ್ಷಣೆ; ಕೇಂದ್ರ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ!