Thursday, 21st November 2024

Vishweshwar Bhat Column: ಏಕಾಂಗಿಗಳಿಗೂ ಒಂದು ದಿನ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನಿನ್ನೆ ನವೆಂಬರ್ 11. ಅದರ ವೈಶಿಷ್ಟ್ಯವೇನು ಗೊತ್ತಾ? ಅದನ್ನು‌ ‘ಏಕಾಂಗಿ ದಿನ’ (Singles’ Day)ಎಂದು ಕರೆಯುತ್ತಾರೆ ಮತ್ತು
ಆಚರಿಸುತ್ತಾರೆ. ಅದರಲ್ಲೂ ಚೀನಾದಲ್ಲಿ ಆ ದಿನಕ್ಕೆ ವಿಶೇಷ ಮಹತ್ವ. ಅಲ್ಲಿ ಆ ದಿನವನ್ನು ‘ಬ್ಯಾಚಲರ್ಸ್ ದಿನ’ವಾಗಿ ಆಚರಿಸುತ್ತಾರೆ. ಈ ದಿನದ ತಾರೀಖು 11/11 ಎಂಬುದು ನಾಲ್ಕು ‘1’ ಅಂಕಿಗಳನ್ನು ಹೊಂದಿರುವ ಕಾರಣ, ಈ ಅಂಕಿಗಳು ಒಬ್ಬೊಬ್ಬ ವ್ಯಕ್ತಿಯ ಏಕಾಂಗಿ ಬದುಕಿನ ಸಂಕೇತ ಎಂದು ಪರಿಗಣಿಸಲಾಗಿದೆ. 1990ರಲ್ಲಿ ಚೀನಾದ ನಂಜಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ದಿನವನ್ನು ತಮ್ಮ ಏಕಾಂಗಿತನವನ್ನು ಆಚರಿಸಲು, ತಮ್ಮ ಅಪರಿಮಿತ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಸಂಭ್ರಮಿಸಲು ಆರಿಸಿಕೊಂಡರು. ಅದಾಗಿ 2-3 ವರ್ಷಗಳಲ್ಲಿ ಈ ಸುದ್ದಿ ಇತರ ವಿ.ವಿ.ಗಳಿಗೆ ಮತ್ತು ನಗರಗಳಿಗೆ ಹಬ್ಬಿತು. ಆ ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಮದುವೆಯಾಗಿ ತಮ್ಮ ಜೀವನದಲ್ಲಿ ನೆಲೆ ಕಂಡುಕೊಂಡಿದ್ದರೂ, ನಾಲ್ವರು ವಿದ್ಯಾರ್ಥಿಗಳು ಮಾತ್ರ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿರಲಿಲ್ಲ.

ಎಲ್ಲರಿಗೂ ಅವರದ್ದೇ ಆದ ದಿನವಿದೆ, ನಾವು ಬ್ಯಾಚಲರುಗಳು ಯಾವ ಪಾಪ ಮಾಡಿದ್ದೇವೆ, ನಾವೂ ಒಂದು ದಿನವನ್ನು ನಮ್ಮ ದಿನವಾಗಿ ಆಚರಿಸೋಣ ಎಂದು ತೀರ್ಮಾನಿಸಿ, ಅದಕ್ಕೆ ನವೆಂಬರ್ 11 ಸೂಕ್ತ ಎಂದು ನಿರ್ಧರಿಸಿದರು. ನವೆಂಬರ್ ಕೂಡ 11ನೇ ತಿಂಗಳಾಗಿದ್ದು ಹೆಚ್ಚು ಸಮರ್ಪಕವಾಗಿ ಅವರ ಲೆಕ್ಕಾಚಾರಕ್ಕೆ ಕೂಡಿಬಂದಿತು. ಮುಂದಿನ ವರ್ಷಗಳಲ್ಲಿ ಈ ಸಂಗತಿ ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದು ಜನಪ್ರಿಯವಾಯಿತು. ಅಂದು ಹೆಚ್ಚಾಗಿ ವಿದ್ಯಾರ್ಥಿಗಳು ತಮ್ಮ ಅವಿವಾಹಿತ ಸ್ನೇಹಿತರನ್ನು ಭೇಟಿಯಾಗಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಚೀನಾದ ಬಹುತೇಕ ನಗರಗಳಲ್ಲಿ ನವೆಂಬರ್ 11ರಂದು ಅನಧಿಕೃತ ರಜಾದಿನವಾಗಿ ಘೋಷಿಸಲಾಗುತ್ತದೆ. ಈ ದಿನವು ಚೀನಾದಲ್ಲಿ ಅತ್ಯಂತ
ದೊಡ್ಡ ಶಾಪಿಂಗ್ ಉತ್ಸವವಾಗಿದ್ದು, ವಿವಿಧ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿಗಳನ್ನು ಘೋಷಿಸುತ್ತವೆ. ಅಂದು ದಿನವಿಡೀ ಬಹುತೇಕ ಎಲ್ಲ ಅಂಗಡಿ, ಮಾಲ್‌ಗಳು ಶಾಪಿಂಗ್‌ಗಾಗಿ ತೆರೆದಿರುತ್ತವೆ. ಅಷ್ಟೇ ಅಲ್ಲ, ನವೆಂಬರ್ 11 ವಾಣಿಜ್ಯ ಉತ್ಸವದ ರೂಪಕವಾಗಿ ಈ ದಿನಗಳಲ್ಲಿ ಪ್ರಚಲಿತ ವಾಗಿದೆ. 2019ರಲ್ಲಿ ಒಂದೇ ದಿನ ಚೀನಾದಲ್ಲಿ 38 ಶತಕೋಟಿ ಡಾಲರ್ ವ್ಯಾಪಾರ-ವಹಿವಾಟು ಆಗಿತ್ತು ಎಂದು ಆನ್‌ಲೈನ್ ವ್ಯವಹಾರ ಸಂಸ್ಥೆ ‘ಅಲಿಬಾಬಾ’ ಪ್ರಕಟಿಸಿತ್ತು. ಅಮೆರಿಕದಲ್ಲಿ ‘ಬ್ಲ್ಯಾಕ್ ಫ್ರೈಡೆ’ ಮತ್ತು ’ಸೈಬರ್ ಮಂಡೇ’ ದಿನ ಆಗುವ ಮಾರಾಟ ಮತ್ತು ವ್ಯಾಪಾರ-ವಹಿವಾಟಿಗಿಂತ 4 ಪಟ್ಟು ಹೆಚ್ಚು ವ್ಯವಹಾರ ಚೀನಾದಲ್ಲಿ ‘ಸಿಂಗಲ್ಸ್ ಡೇ’ ದಿನ ಆಗುತ್ತದೆ ಅಂದರೆ ಅದರ ವ್ಯಾಪ್ತಿ ಮತ್ತು ಗಾತ್ರವನ್ನು ಊಹಿಸ ಬಹುದು.

ಈ‌ ದಿನದಂದೇ ಅನೇಕರು ತಮ್ಮ ಮದುವೆಯನ್ನು, ಸಂಗಾತಿಯನ್ನು ಘೋಷಿಸುವುದುಂಟು. ಇದೇ ದಿನ ತಮ್ಮ ಬ್ಯಾಚಲರ್ಸ್ ದಿನ ಮುಗಿಯಿತು ಎಂಬು ದನ್ನು ಹಲವರು ಪ್ರಕಟಿಸುವುದುಂಟು. 2011ರಲ್ಲಿ ಇದೇ ದಿನ ಸುಮಾರು 4000ಕ್ಕೂ ಹೆಚ್ಚು ಮಂದಿ ಮದುವೆಯಾಗಿ ತಮ್ಮ ಏಕಾಂಗಿ ಜೀವನಕ್ಕೆ ಕೊನೆ ಹಾಡಿದ್ದರು. ನವೆಂಬರ್ 11ರ ದಿನದ ಆಚರಣೆಗಾಗಿ ಜಗತ್ತಿನ ಖ್ಯಾತನಾಮ ಸಂಗೀತಗಾರರು, ಗಾಯಕರು ಚೀನಾಕ್ಕೆ ಲಗ್ಗೆಯಿಡುವುದು ಸಾಮಾನ್ಯವಾಗಿದೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಬೃಹತ್ ಪ್ರದರ್ಶನವನ್ನು ಏರ್ಪಡಿಸಿ, ಗಾಯಕರು, ನಟ-ನಟಿಯರನ್ನು ಆಹ್ವಾನಿಸುತ್ತವೆ. ‌

ಸಿಂಗಲ್ಸ್ ಡೇ ನೆಪದಲ್ಲಿ ಶಾಪಿಂಗ್ ಅನ್ನು ಪ್ರೇರೇಪಿಸುವ ಬಹುದೊಡ್ಡ ಅವಕಾಶವಾಗಿ‌ ಈ ದಿನ ಮಾರ್ಪಾಟಾಗಿದೆ. 2011ರಲ್ಲಿ (11.11.2011) 6 ಒಂದಂಕಿ ಬಂದಿದ್ದರಿಂದ (6 ಸಲ ಒಂದಂಕಿ ಬರುವುದು 100 ವರ್ಷದಲ್ಲಿ ಒಂದು ಸಲ ಮಾತ್ರ) ಈ ದಿನವನ್ನು ವಿಶೇಷವಾಗಿ, ಅದ್ದೂರಿಯಾಗಿ ಆಚರಿಸಲಾಗಿತ್ತು. ಚೀನಾದಲ್ಲಿ ‘ಏಕಾಂಗಿ ದಿನ’ದ ಯಶಸ್ಸಿನಿಂದ ಪ್ರೇರಣೆ ಪಡೆದ ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳು ಫೆಬ್ರುವರಿ 15ರಂದು ‘ಏಕಾಂಗಿಗಳ ಜಾಗೃತಿ ದಿನ’ವಾಗಿಯೂ ಆಚರಿಸಿ, ಆ ದಿನದಂದು ಶಾಪಿಂಗ್ ಅನ್ನು ಉತ್ತೇಜಿಸುವ ಅವಕಾಶವಾಗಿ ಪರಿವರ್ತಿಸುವುದುಂಟು. ಬ್ರಿಟನ್‌ನಲ್ಲಿ ಮಾರ್ಚ್ 11ರಂದು ‘ರಾಷ್ಟ್ರೀಯ ಏಕಾಂಗಿಗಳ ದಿನ’ ಎಂದು ಆಚರಿಸುತ್ತಾರೆ.

ಇದನ್ನೂ ಓದಿ:vishweshwar bhat column: ಯಾರಿಗೆ ಆಗಲಿ, ಕುಳಿತು ಕೈಕುಲುಕಬಾರದು. ಕೈಕುಲುಕುವಾಗ ಎದ್ದು ನಿಲ್ಲಬೇಕು!