Friday, 15th November 2024

IND vs AUS: ಪರ್ತ್‌ ತಲುಪಿದ ಟೀಮ್‌ ಇಂಡಿಯಾದ ಮೊದಲ ಬ್ಯಾಚ್‌

ಪರ್ತ್‌: ನವೆಂಬರ್‌ 22ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಬಾರ್ಡರ್‌-ಗಾವಸ್ಕರ್‌ ಟ್ರೋಫಿ(Border Gavaskar Trophy) ಟೆಸ್ಟ್‌ ಸರಣಿಯನ್ನಾಡಲು ಭಾರತೀಯ(IND vs AUS) ಕ್ರಿಕೆಟಿಗರ ಮೊದಲ ಬ್ಯಾಚ್‌ ಸೋಮವಾರ ರಾತ್ರಿ ಪರ್ತ್‌ ತಲುಪಿದೆ. ಶುಭಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಹರ್ಷಿತ್‌ ರಾಣಾ, ಆಕಾಶ್‌ ದೀಪ್‌, ಸರ್ಫರಾಜ್ ಖಾನ್‌ ಮತ್ತು ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಈ ತಂಡದಲ್ಲಿದ್ದರು. ಇವರೆಲ್ಲ ಭಾನುವಾರ ಮುಂಬೈಯಲ್ಲಿ ವಿಮಾನ ಏರಿದ್ದರು.

ಕೋಚ್‌ ಗಂಭೀರ್‌ ಸೇರಿದಂತೆ ಕೆಲ ಆಟಗಾರರು ಸೋಮವಾರ ಮುಂಬಯಿಯಿಂದ ಪರ್ತ್‌ಗೆ ಪ್ರಯಾಣ ಬೆಳೆಸಿದ್ದು ಇಂದು ರಾತ್ರಿ ಪರ್ತ್‌ಗೆ ತಲುಪಬಹುದು. ಭಾರತ ತಂಡ 2018-19 ಮತ್ತು 2020-21ರ ಕೊನೇ ಎರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿಗಳಲ್ಲಿ 2-1 ಅಂತರದಿಂದ ಜಯಿಸಿತ್ತು. ಅಲ್ಲದೆ 2016-17ರಿಂದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಭಾರತದ ಕೈಯಲ್ಲೇ ಇದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಸತತ 3ನೇ ಬಾರಿ ಫೈನಲ್​ಗೇರಲು ಆಸೀಸ್​ನಲ್ಲಿ 4-0ಯಿಂದ ಸರಣಿ ಗೆಲ್ಲುವ ಸವಾಲು ಕೂಡ ಭಾರತದ ಮುಂದಿದೆ.

ಭಾರತ ತಂಡ ಕಿವೀಸ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಬೆಂಗಳೂರಿನ ವೇಗದ ಬೌಲಿಂಗ್​ ಸ್ನೇಹಿ ಮತ್ತು ಪುಣೆ-ಮುಂಬೈನ ಸ್ಪಿನ್​ ಸ್ನೇಹಿ ಪಿಚ್​ಗಳಲ್ಲೂ ಮುಗ್ಗರಿಸಿತ್ತು. ಆದರೆ ಆಸೀಸ್​ ನೆಲದಲ್ಲಿ ಯಾವುದೇ ರೀತಿಯ ಪಿಚ್​ ಎದುರಾದರೂ ಭಾರತ ಅತ್ಯುತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದೆ ಎಂದು ಕೋಚ್‌ ಗಂಭೀರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾಗುವ ಪಿಚ್​ಗಳ ಮೇಲೆ ನಾವು ನಿಯಂತ್ರಣ ಹೊಂದಿಲ್ಲ. ಅದು ಅವರ ಆಯ್ಕೆ. ಅವರು ಯಾವುದೇ ರೀತಿಯ ಪಿಚ್​ ಸಿದ್ಧಪಡಿಸಿದರೂ, ನಾವು ಅದರಲ್ಲಿ ಆಡಲು ಸಿದ್ಧ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಯಾವುದೇ ತಂಡವನ್ನಾದರೂ ಸೋಲಿಸಬಲ್ಲೆವು ಎಂದು ಗಂಭೀರ್‌ ಹೇಳಿದರು.

ಆಸ್ಟ್ರೇಲಿಯಾ ಮೊದಲ ಪಂದ್ಯಕ್ಕೆ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಭಾರತ ಕೂಡ ಸಂಪೂರ್ಣ ಸರಣಿಗೆ ತಂಡ ಪ್ರಕಟಿಸಿದೆ. ಆದರೆ ನಾಯಕ ರೋಹಿತ್‌ ಶರ್ಮ ಮೊದಲ ಪಂದ್ಯ ಆಡುವುದು ಅನುಮಾನ ವೈಯಕ್ತಿಕ ಕಾರಣ ನೀಡಿರುವ ಅವರು ಮೊದಲ ಪಂದ್ಯದ ಬಳಿಕ ಆಸೀಸ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IND vs SA: ʻಅಕ್ಷರ್‌ ಪಟೇಲ್‌ ಬೌಲ್‌ ಮಾಡಿದ್ದು ಕೇವಲ ಒಂದೇ ಓವರ್‌ʼ- ಸೂರ್ಯ ವಿರುದ್ಧ ಆಕಾಶ್‌ ಚೋಪ್ರಾ ಕಿಡಿ!

ಟೆಸ್ಟ್‌ ಸರಣಿಗೆ ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಸರ್ಫ‌ರಾಜ್‌ ಖಾನ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಪ್ರಸಿದ್ಧ್ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.

ಆಸ್ಟ್ರೇಲಿಯಾ ಟೆಸ್ಟ್ ತಂಡ(ಮೊದಲ ಟೆಸ್ಟ್‌ಗೆ): ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಯಾನ್, ಮಿಚೆಲ್ ಮಾರ್ಶ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.