Saturday, 16th November 2024

Rahmanullah Gurbaz: ಗುರ್ಬಾಜ್ ಶತಕಕ್ಕೆ ಸಚಿನ್‌, ಕೊಹ್ಲಿ ದಾಖಲೆ ಪತನ

ಶಾರ್ಜಾ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ(Afghanistan vs Bangladesh 3rd ODI) ಅಮೋಘ ಶತಕ ಬಾರಿಸಿ ಮಿಂಚಿದ ಅಫಘಾನಿಸ್ತಾನದ ಆರಂಭಿಕ ಬ್ಯಾಟರ್‌ ರಹಮಾನುಲ್ಲಾ ಗುರ್ಬಾಜ್(Rahmanullah Gurbaz) ಈ ಶತಕದ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಎಂಟು ಶತಕಗಳನ್ನು ಗಳಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ವಿಶಿಷ್ಟ ದಾಖಲೆ ಬರೆದರು. ಈ ವೇಳೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ಮತ್ತು ವಿರಾಟ್‌ ಕೊಹ್ಲಿ(Virat Kohli)ಯನ್ನು ಹಿಂದಿಕ್ಕಿದರು.

ಶಾರ್ಜಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಗುರ್ಬಾಜ್ ಬರೋಬ್ಬರಿ 7 ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ 101 ರನ್‌ ಬಾರಿಸಿದರು. ಇವರ ಈ ಶತಕದಾಟದಿಂದ ಅಫಘಾನಿಸ್ತಾನ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸಿತು.

ಗುರ್ಬಾಜ್ 22 ವರ್ಷ 349 ದಿನದಲ್ಲಿ ಎಂಟನೇ ಏಕದಿನ ಶತಕ ಬಾರಿಸಿದರೆ, ಸಚಿನ್ ತೆಂಡೂಲ್ಕರ್ ಅವರು 22 ವರ್ಷ 357 ದಿನದಲ್ಲಿ, ವಿರಾಟ್‌ ಕೊಹ್ಲಿ ವಿರಾಟ್ ಕೊಹ್ಲಿ 23 ವರ್ಷ 27 ದಿನದಲ್ಲಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ 23 ವರ್ಷ 280 ದಿನದಲ್ಲಿ ಎಂಟನೇ ಏಕದಿನ ಶತಕ ಗಳಿಸಿದ್ದರು. ವಿಶ್ವ ದಾಖಲೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿದೆ. ಅವರು 22 ವರ್ಷ 312 ದಿನದಲ್ಲಿ 8ನೇ ಶತಕ ಪೂರ್ತಿಗೊಳಿಸಿದ್ದರು. ಅತಿ ಕಡಿಮೆ ಇನಿಂಗ್ಸ್‌ನಲ್ಲಿ 8 ಶತಕ ಬಾರಿಸಿದ ದಾಖಲೆ ಗುರ್ಬಾಜ್ ಪಾಲಾಗಿದೆ.

ಇದನ್ನೂ ಓದಿ IND vs AUS: ಪರ್ತ್‌ ತಲುಪಿದ ಟೀಮ್‌ ಇಂಡಿಯಾದ ಮೊದಲ ಬ್ಯಾಚ್‌

https://twitter.com/Shebas_10dulkar/status/1856020909175582886

ಈ ಪಂದ್ಯದಲ್ಲಿ 7 ಸಿಕ್ಸರ್‌ ಬಾರಿಸಿದ ಗುರ್ಬಾಜ್, 2024ರ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ವಿಶ್ವದ 2ನೇ ಬ್ಯಾಟರ್‌ ಎನಿಸಿಕೊಂಡರು. ಗುರ್ಬಾಜ್ ಈ ವರ್ಷ 31 ಇನಿಂಗ್ಸ್‌ ಆಡಿ ಭರ್ತಿ 50 ಸಿಕ್ಸರ್‌ ಬಾರಿಸಿದ್ದಾರೆ. ಹಾಂಗ್ ಕಾಂಗ್‌ನ ಬಾಬರ್ ಹಯಾತ್‌ಗೆ ಅಗ್ರ ಸ್ಥಾನ. ಬಾಬರ್ ಕೂಡ 50 ಸಿಕ್ಸರ್‌ ಬಾರಿಸಿದ್ದಾರೆ. ಅವರು ಕೇವಲ 23 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು.

ಸರಣಿ ಗೆದ್ದ ಅಫಘಾನಿಸ್ತಾನ

ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಅಫಘಾನಿಸ್ತಾನ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 244 ರನ್‌ ಬಾರಿಸಿದರೆ, ಅಫಘಾನಿಸ್ತಾನ 48.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಗುರ್ಬಾಜ್ ಹೊರತಾಗಿ ಅಜ್ಮತುಲ್ಲಾ ಒಮರ್ಜಾಯ್ 70 ರನ್‌ ಬಾರಿಸಿದರು. ಬೌಲಿಂಗ್‌ನಲ್ಲಿಯೂ ಮಿಂಚಿದ ಒಮರ್ಜಾಯ್ 37 ರನ್‌ಗೆ 4 ವಿಕೆಟ್‌ ಕಿತ್ತು ಮಿಂಚಿದರು. ಅವರ ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.