Saturday, 23rd November 2024

IAS Officers Suspended: ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹಿರಿಯಾಧಿಕಾರಿಗಳ ಬಗ್ಗೆ ಟೀಕೆ, ಧರ್ಮಾಧಾರಿತ ಚ್ಯಾಟಿಂಗ್‌- IAS ಅಧಿಕಾರಿಗಳು ಸಸ್ಪೆಂಡ್‌

Kerala Government

ತಿರುವನಂತಪುರಂ: ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಕೇರಳದ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಕೇರಳ ಸರ್ಕಾರ (Kerala Government) ಅಮಾನತುಗೊಳಿಸಿದೆ. ಅಮಾನತಾದ ಅಧಿಕಾರಿಗಳನ್ನು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕ ಕೆ ಗೋಪಾಲಕೃಷ್ಣನ್ ಮತ್ತು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್ ಪ್ರಶಾಂತ್ ಎಂದು ಗುರುತಿಸಲಾಗಿದೆ (IAS Officers Suspended) . ಧರ್ಮಾಧಾರಿತ ವಾಟ್ಸಾಪ್ ಗ್ರೂಪ್‌ ರಚಿಸಿ ಈ ಅಧಿಕಾರಿಗಳು ಧರ್ಮಾಧಾರಿತ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಲ್ಲದೆ, ಹಲವು ಹಿರಿಯ ಅಧಿಕಾರಿಗಳನ್ನು ಟೀಕಿಸಿದ್ದರು ಎಂದು ತಿಳಿದು ಬಂದಿದೆ.

2013ರ ಬ್ಯಾಚ್‌ನ ಅಧಿಕಾರಿಯಾಗಿರುವ ಗೋಪಾಲಕೃಷ್ಣನ್ ಅವರು ಈ ತಿಂಗಳು “ಮಲ್ಲು ಹಿಂದೂ ಅಧಿಕಾರಿಗಳು” ಎಂಬ ವಾಟ್ಸಾಪ್ ಗ್ರೂಪ್ ರಚನೆ ಮಾಡಿದ್ದರು ಅದರಲ್ಲಿ ಹಲವು ಹಿಂದೂ ಅಧಿಕಾರಗಳನ್ನು ಸೇರಿಸಿದ್ದರು. ಅಕ್ಟೋಬರ್ 30 ರಂದು ರಚಿಸಲಾದ ಈ ಗ್ರೂಪ್‌ನಲ್ಲಿ ಧರ್ಮ ಪ್ರಚೋದಿತ ಕೆಲ ಪೋಸ್ಟ್‌ಗಳನ್ನು ಅವರು ಹಂಚಿಕೊಂಡಿದ್ದರು. ನಂತರ ರಚನೆಯಾದ ಒಂದು ದಿನದ ನಂತರ ಗ್ರೂಪ್‌ನ್ನು ಡಿಲೀಟ್‌ ಮಾಡಲಾಗಿದೆ. ಈ ಘಟನೆಯಾದ ಕೆಲವೇ ದಿನಗಳಲ್ಲಿ ಗೋಪಾಲಕೃಷ್ಣನ್ ಅವರು ತಮ್ಮ ಫೋನ್‌ ಹ್ಯಾಕ್‌ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸ್‌ ತನಿಖೆಯಲ್ಲಿ ಫೋನ್‌ ಹ್ಯಾಕ್‌ ಮಾಡಲಾಗಿದೆ ಎಂದು ಸೂಚಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ತಿಳಿದು ಬಂದಿದೆ ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ತಮ್ಮ ಫೋನ್‌ ಕೊಡುವ ಮೊದಲು ಫ್ಯಾಕ್ಟರಿ ರೀಸೆಟ್‌ ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ.  ವಾಟ್ಸಾಪ್ ಗ್ರೂಪ್‌ನಲ್ಲಿ ಧರ್ಮ ಪ್ರಚೋದಿತ ಅಂಶಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.

ಇನ್ನೊಬ್ಬ ಅಧಿಕಾರಿ ಎನ್‌ ಪ್ರಶಾಂತ್‌ 2007  ರ ಬ್ಯಾಚ್ ಅಧಿಕಾರಿಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಹಿರಿಯ ಅಧಿಕಾರಿಯೊಬ್ಬರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಡಾ.ಜಯತಿಲಕ್ ಐಎಎಸ್ ಬಗ್ಗೆ ಪೋಸ್ಟ್‌ ಮಾಡಿದ್ದ ಪ್ರಶಾಂತ್‌, ಜಯತಿಲಕ್ ನೀಡಿದ ವರದಿ ತಪ್ಪೆಂದು ಹೇಳಿದ್ದರು. ಡಾ.ಜಯತಿಲಕ್ ಅವರು ಸಾಂಬಾರ ಮಂಡಳಿಯ ಅಧ್ಯಕ್ಷರಾಗಿದ್ದಾಗ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಹಲವು ಮಾಹಿತಿಗಳನ್ನು ಪ್ರಶಾಂತ್‌ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಕಲ್ಯಾಣಕ್ಕೆ ಮೀಸಲಾದ ಹಲವು ನಿರ್ಣಾಯಕ ಕಡತಗಳು ನಿಗೂಢವಾಗಿ ನಾಪತ್ತೆಯಾಗಿವೆ ಎಂಬ ಆರೋಪದ ಮೇಲೆ ಪ್ರಶಾಂತ್‌ ಮೇಲೆ ತನಿಖೆಗೆ ಆದೇಶ ನೀಡಲಾಗಿತ್ತು.

ಇದನ್ನೂ ಓದಿ: Pinarayi Vijayan: ಕೇರಳ ಸಿಎಂ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಬೆಂಗಾವಲು ವಾಹನಗಳೂ ಸರಣಿ ಡಿಕ್ಕಿ

ಅಶಿಸ್ತು ಮತ್ತು ಅವಹೇಳನಕಾರಿ ಹೇಳಿಕೆಗಳು ರಾಜ್ಯದ ಆಡಳಿತ ಯಂತ್ರದ ಸಾರ್ವಜನಿಕ ಚಿತ್ರಣವನ್ನು ಹಾಳುಮಾಡುತ್ತವೆ. ಎಂದು ಅವರನ್ನು ಅಮಾನತು ಗೊಳಿಸಲಾಗಿದೆ.ತಮ್ಮ ಅಮಾನತು ಕುರಿತು ಪ್ರತಿಕ್ರಿಯಿಸಿದ ಪ್ರಶಾಂತ್, ಅವರಿಂದ ವಿವರಣೆ ಪಡೆಯದೆ ಕ್ರಮ ಕೈಗೊಳ್ಳಲಾಗಿದೆ. ”ನಾನು ಸರಕಾರವನ್ನು ಟೀಕಿಸಿಲ್ಲ. ನನ್ನ ವಿರುದ್ಧ ನಕಲಿ ವರದಿಯನ್ನು ಸಲ್ಲಿಸಿ ಷಡ್ಯಂತ್ರ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.