Friday, 15th November 2024

IND vs PAK: ಪಾಕಿಸ್ತಾನಕ್ಕೆ ಏಕೆ ಬರುವುದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್‌

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಭಾರತ ತಂಡ ನಾಳೆ(ಬುಧವಾರ) ನಡೆಯುವ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯಲಿದೆ. ಸದ್ಯ ವಿಶ್ರಾಂತಿಯಲ್ಲಿರುವ ಟೀಮ್‌ ಇಂಡಿಯಾ ಆಟಗಾರರು ಇಲ್ಲಿನ ಮಾಲ್‌ ಒಂದಕ್ಕೆ ಭೇಟಿ ನೀಡಿ ಎಂಜಾಯ್‌ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ(IND vs PAK) ಅಭಿಮಾನಿಯೊಬ್ಬ ಸೂರ್ಯಕುಮಾರ್‌ ಯಾದವ್‌ಗೆ(Suryakumar Yadav) ಪ್ರಶ್ನೆಯೊಂದನ್ನು ಮಾಡಿದ್ದು, ಇದಕ್ಕೆ ಸೂರ್ಯ ನೀಡಿದ ಉತ್ತರ ವೈರಲ್‌ ಆಗಿದೆ.

ಮಾಲ್‌ ಒಂದರಲ್ಲಿ ಸೂರ್ಯಕುಮಾರ್‌ ಯಾದವ್‌, ರಿಂಕು ಸಿಂಗ್‌ ಸೇರಿ ಕೆಲ ಆಟಗಾರರು ಸುತ್ತಾಟ ನಡೆಸುತ್ತಿದ್ದ ವೇಳೆ ಅಲ್ಲಿದ್ದ ಪಾಕಿಸ್ತಾನಿ ಅಭಿಮಾನಿಯೊಬ್ಬ ಭಾರತೀಯ ಆಟಗಾರರ ಜತೆ ಫೋಟೊ ತೆಗೆಸಿಕೊಂಡ ಬಳಿಕ ʼಎಲ್ಲಾ ಸರಿ ನೀವು ಯಾಕೆ ಪಾಕಿಸ್ತಾನಕ್ಕೆ ಬರಲು ಒಪ್ಪುತ್ತಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೂರ್ಯಕುಮಾರ್ ಯಾದವ್ ‘ಅರೇ.. ಇದೆಲ್ಲಾ ನಮ್ಮ ಕೈಯಲ್ಲಿಲ್ಲ’ ಎಂದಿದ್ದಾರೆ. ಅವರ ಈ ಉತ್ತರ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಮುಂದಿನ ವರ್ಷ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ(ICC Champions Trophy) ಟೂರ್ನಿ ನಡೆಯಲಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಇದರ ಬೆನ್ನಲ್ಲೇ ಸೂರ್ಯ ನೀಡಿದ ಉತ್ತರ ಗಮನಸೆಳೆದಿದೆ.

ಬಿಸಿಸಿಐ(BCCI) ಈಗಾಗಲೇ ತನ್ನ ನಿಲುವನ್ನು ತಿಳಿಸಿದೆ. ಯಾವುದೇ ಕಾರಣಕ್ಕೂ ಪಾಕ್‌ಗೆ ಭಾರತ ತಂಡ ಪ್ರಯಾಣಿಸುವುದಿಲ್ಲ, ಟೂರ್ನಿ ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಐಸಿಸಿಗೆ ಮತ್ತು ಪಾಕ್‌ ಕ್ರಿಕೆಟ್‌ ಮಂಡಳಿಗೆ ತಿಳಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡ ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ. ಭಾರತ ತಂಡ ಪಾಕ್‌ಗೆ ಬಾರದಿದ್ದರೆ, ಇನ್ನು ಮುಂದೆ ಪಾಕ್‌ ತಂಡ ಭಾರತ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ ICC Champions Trophy: ʼಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕುʼ-ಬಿಸಿಸಿಐಗೆ ರಶಿದ್‌ ಲತಿಫ್‌ ವಾರ್ನಿಂಗ್‌!

ಪಾಕಿಸ್ತಾನ ಸರ್ಕಾರ ಕೂಡ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು ಯಾವುದೇ ಕಾರಣಕ್ಕೂ ಹೈಬ್ರಿಡ್​ ಮಾದರಿಯ ಟೂರ್ನಿಗೆ ಒಪ್ಪಿಗೆ ಸೂಚಿಸಬಾರದು ಎಂದು ಪಾಕ್‌ ಕಿಕೆಟ್‌ ಮಂಡಳಿಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಬಿಸಿಸಿಐ (BCCI) ವಿರುದ್ಧ ಕೋರ್ಟ್ ಆಫ್​ ಆರ್ಬಿಟ್ರೇಷನ್ ಫಾರ್​ ಸ್ಪೋರ್ಟ್​​ಗೆ (CAS) ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸಜ್ಜಾಗಿದೆ ಎನ್ನಲಾಗಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಿದೆ. ಭಾರತಕ್ಕೆ ಗಡಿ ಸಾಮೀಪ್ಯ ಇರುವ ಕಾರಣ ಲಾಹೋರ್‌ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.