Thursday, 21st November 2024

Dr BR Ambedkar: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಿದ್ಧರಾಗಿದ್ರು: ಕಾಂಗ್ರೆಸ್ ಮಾಜಿ ಶಾಸಕ ವಿವಾದಿತ ಹೇಳಿಕೆ!

ಹಾವೇರಿ: ಶಿಗ್ಗಾಂವಿ ಉಪ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ ಕಾಂಗ್ರೆಸ್‌ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ (MLA Syed Azeempeer Khadri) ವಿವಾದಾತ್ಮಕ ಹೇಳಿಕೆ ನೀಡಿರುವುದು ಕಂಡುಬಂದಿದೆ. ಸೋಮವಾರ ಪ್ರಚಾರದ ವೇಳೆ ಮಾತನಾಡಿರುವ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ (Dr BR Ambedkar) ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಆದಿ ಜಾಂಬವ ಸಮಾವೇಶದಲ್ಲಿ ಮಾತನಾಡಿರುವ ಅವರು, ದೇಶಕ್ಕೆ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಸ್ಲಿಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ನಾನು ಓದಿ ತಿಳಿದುಕೊಂಡಿದ್ದೇನೆ. ಒಂದು ವೇಳೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದೇ ಹೋಗಿದ್ದರೆ ದಲಿತರೆಲ್ಲ ಮುಸ್ಲಿಮರಾಗುತ್ತಿದ್ದರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲು ಪ್ರಸ್ತಾವ ಇಲ್ಲ: ಸಿಎಂ ಸಿದ್ದರಾಮಯ್ಯ

ಒಂದು ವೇಳೆ ಅಂಬೇಡ್ಕರ್‌ ಅವರು ಇಸ್ಲಾಂ ಧರ್ಮ ಸ್ವೀಕರಿಸಿದ್ದಿದ್ದರೆ ಈಗಿನ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಹೋಗಿ ರಹೀಮ್ ಖಾನ್ ಆಗುತ್ತಿದ್ದರು. ಡಾ.ಜಿ. ಪರಮೇಶ್ವರ್ ಹೋಗಿ ಫೀರ್ ಸಾಹೇಬ್ ಆಗುತ್ತಿದ್ದರು. ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್.ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಮಂಜುನಾಥ್ ತಿಮ್ಮಾಪುರ್ ಹೋಗಿ ಬಾಬೂಸಾಬ್ ಆಗುತ್ತಿದ್ದರು. ಆದರೆ, ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲಿಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಅಜ್ಜಂಪೀರ್‌ ಖಾದ್ರಿ ತಿಳಿಸಿದ್ದಾರೆ.

ಸಿ.ಟಿ.ರವಿ ಆಕ್ಷೇಪ

ಅಂಬೇಡ್ಕರ್‌ ಅವರ ಬಗ್ಗೆ ಅಜ್ಜಂಪೀರ್ ಖಾದ್ರಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಅವರು ಮುಸ್ಲಿಂ ಧರ್ಮ ಸ್ವೀಕರಿಸಲು ಸಿದ್ಧವಾಗಿದ್ದರು ಎಂದು ಹೇಳಿ ಮಾಜಿ ಶಾಸಕ ತಮ್ಮ ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಇಸ್ಲಾಂ ಅಂದರೆ ಅಸಹಿಷ್ಣುತೆಯಿಂದ ಕೂಡಿದೆ, ಮಹಿಳೆಯರನ್ನು ಗುಲಾಮರ ರೀತಿ ನಡೆಸಿಕೊಳ್ಳಲಾಗುತ್ತದೆ. ಬುರ್ಖಾ ಗುಲಾಮಗಿರಿಯ ಪ್ರತೀಕ ಎಂದು ಅಂಬೇಡ್ಕರ್ ಅವರೇ ವಿಶ್ಲೇಷಣೆ ಮಾಡಿದ್ದರು. ಅಂಬೇಡ್ಕರ್ ಅವರ ಥಾಟ್ಸ್ ಅಫ್ ಪಾಕಿಸ್ತಾನ್ ಪುಸ್ತಕವನ್ನು ಅಜ್ಜಂಪೀರ್ ಖಾದ್ರಿ ಓದಲಿ. ಬಕಾಸುರ ಮತ್ತು ಭಸ್ಮಾಸುರ ಎರಡೂ ಸೇರಿದರೆ ಏನಾಗುತ್ತದೋ ಅದು ಇಂದು ಕಾಂಗ್ರೆಸ್ ಅಗಿದೆ. ಅದಕ್ಕೆ ಜಮೀರ್ ಅಹ್ಮದ್ ತರಹದವರು ಈ ರೀತಿ ಎಲ್ಲಾ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.