Sunday, 24th November 2024

World Pneumonia Day: ವಿಶ್ವ ನ್ಯುಮೋನಿಯ ದಿನ: ರೋಗ ನಿಯಂತ್ರಣ, ಚಿಕಿತ್ಸೆ ಬಗ್ಗೆ ನಿಮಗೆಷ್ಟು ಗೊತ್ತು?

World Pneumonia Day

ನವದೆಹಲಿ: ಕೆಲವು ರೋಗಗಳು ಕೊಂಚ ಉದಾಸೀನ ಮಾಡಿದರೂ ಜೀವಕ್ಕೆ ಎರವಾಗಿಬಿಡುತ್ತವೆ. ನ್ಯುಮೋನಿಯ (World Pneumonia Day) ಸಹ ಅಂಥ ರೋಗಗಳಲ್ಲಿ ಒಂದು. ಆದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿದಲ್ಲಿ ಖಂಡಿತವಾಗಿ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದೆ.

ಶ್ವಾಸಕೋಶಕ್ಕೆ ಅಮರಿಕೊಳ್ಳುವ ಈ ಸೋಂಕಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಈ ರೋಗಸಂಬಂಧಿ ಸಾವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನವೆಂಬರ್‌ 12ನೇ ದಿನವನ್ನು ವಿಶ್ವ ನ್ಯುಮೋನಿಯ ದಿನ ಎಂದು ಗುರುತಿಸಲಾಗುತ್ತದೆ. ಈ ಬಾರಿ “ಪ್ರತಿ ಉಸಿರೂ ಮುಖ್ಯ: ನ್ಯುಮೋನಿಯವನ್ನು ಹಾದಿಯಲ್ಲೇ ತಡೆಗಟ್ಟಿ” ಘೋಷವಾಕ್ಯದೊಂದಿಗೆ ಈ ಬಾರಿ ಈ ದಿನವನ್ನು ಆಚರಿಸಲಾಗುತ್ತಿದೆ.

ಜಗತ್ತಿನ ಬಹಳಷ್ಟು ದೇಶಗಳನ್ನು ಕಾಡುತ್ತಿರುವ ನ್ಯುಮೋನಿಯಕ್ಕೆ ಪ್ರತಿವರ್ಷ 8 ಲಕ್ಷ ಮಕ್ಕಳು ಬಲಿಯಾಗುತ್ತಿದ್ದು, ಮಕ್ಕಳ ಜೀವಹರಣ ಮಾಡುತ್ತಿರುವ ಪ್ರಮುಖ ಕಾರಣಗಳ ಪೈಕಿ ಇದೂ ಒಂದು. ಇಷ್ಟು ಅಗಾಧ ಪ್ರಮಾಣದಲ್ಲಿ ಇದು ಜನಜೀವನವನ್ನು ಕಾಡುತ್ತಿದ್ದರೂ ಈ ರೋಗದ ಬಗ್ಗೆ ಇರುವಂಥ ತಿಳುವಳಿಕೆ ಕಡಿಮೆ.

ಹೀಗಾಗಿ 2009ರಿಂದ ಈ ಅರಿವಿನ ದಿನವನ್ನು ಆಚರಿಸಲಾಗುತ್ತಿದೆ. ಈ ರೋಗವನ್ನು ಬಾರದಂತೆ ತಡೆಗಟ್ಟುವ ಮತ್ತು ಬಂದರೂ ಆರಂಭದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆಯಿಂದ ಗುಣಪಡಿಸುವ ಬಗೆಗಿನ ಮಾಹಿತಿಯನ್ನು ಜನರಲ್ಲಿ ಹಂಚಿಕೊಳ್ಳಬೇಕೆಂಬುದು ಈ ಆಚರಣೆಯ ಹಿಂದಿನ ಉದ್ದೇಶ. ಇದಕ್ಕೆ ಪೂರಕವಾಗಿ, ಈ ರೋಗ ತಡೆ, ಪ್ರಸರಣ ಮತ್ತು ಚಿಕಿತ್ಸೆಯ ಕುರಿತಾದ ಪ್ರಮುಖ ಮಾಹಿತಿಗಳು ಇಲ್ಲಿವೆ.

World Pneumonia Day

ನ್ಯುಮೋನಿಯ ಬಾರದಂತೆ ತಡೆಯಲು ಲಸಿಕೆಗಳು ಲಭ್ಯವಿವೆ. ನ್ಯುಮೊಕೋಕಲ್‌ ಮತ್ತು ಫ್ಲೂ ಲಸಿಕೆಗಳು ಈ ನಿಟ್ಟಿನಲ್ಲಿ ಬ್ಯಾಕ್ಟೀರಿಯ ಮತ್ತು ವೈರಲ್‌ ನ್ಯುಮೋನಿಯ ವಿರುದ್ಧ ಪರಿಣಾಮಕಾರಿಯಾದ ರಕ್ಷಣೆಯನ್ನು ನೀಡುತ್ತವೆ. ಈ ಕುರಿತು ನಿಮ್ಮ ವೈದ್ಯರಿಂದ ಅಥವಾ ಶಿಶುವೈದ್ಯರಿಂದ ಮಾಹಿತಿ ಪಡೆಯಿರಿ.

ಉಳಿದೆಲ್ಲ ಶ್ವಾಸಕೋಶದ ಸೋಂಕುಗಳಂತೆಯೇ ಇದರ ಪ್ರಸರಣವನ್ನೂ ತಡೆಯಲು ಸ್ವಚ್ಛತೆ ನೆರವಾಗುತ್ತದೆ. ವೈರಸ್‌ ಮತ್ತು ಬ್ಯಾಕ್ಟೀರಿಯ ಸೋಂಕುಗಳು ಬಾರದಂತೆ ಆಗಾಗ ಕೈಗಳನ್ನು ಸ್ವಚ್ಛಗೊಳಿಸಿ. ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ವಸ್ತ್ರದಿಂದ ಮುಚ್ಚಿಕೊಳ್ಳಿ.

ಸೋಂಕಿತರಿಂದ ದೂರ ಇರಿ. ಗಾಳಿಯಿಂದ ಪ್ರಸರಣಗೊಳ್ಳುವ ಸಾಧ್ಯತೆಯನ್ನು ಇದರಿಂದ ಕಡಿಮೆ ಮಾಡಬಹುದು. ಸೋಂಕಿತರ ಆರೈಕೆ ಮಾಡುವಾಗ ಸ್ವಚ್ಛತೆಯತ್ತ ಪ್ರಧಾನವಾಗಿ ಗಮನ ಹರಿಸಿ. ಫ್ಲೂ, ಬ್ರಾಂಕೈಟಿಸ್‌ನಂಥ ಯಾವುದೇ ಸೋಂಕುಗಳಿಗೆ ಪ್ರಾರಂಭದಲ್ಲೇ ಸರಿಯಾದ ಚಿಕಿತ್ಸೆ ಪಡೆಯುವುದರಿಂದ, ಅದು ನ್ಯುಮೋನಿಯಕ್ಕೆ ತಿರುಗುವುದನ್ನು ತಡೆಯಬಹುದು. ಹೀಗಾಗಿ ಶ್ವಾಸಕೋಶದ ಸೋಂಕುಗಳನ್ನು ಉದಾಸೀನ ಮಾಡಬೇಡಿ. ಅದರಲ್ಲೂ ಮಕ್ಕಳಲ್ಲಿ ಕಾಣುವ ಸೋಂಕಿನ ಬಗ್ಗೆ ಹೆಚ್ಚಿನ ನಿಗಾ ವಹಿಸಿ.

ಸೋಂಕಿತರಿರುವಲ್ಲಿ ಮನೆಯೊಳಗಿನ ಗಾಳಿಯನ್ನು ಶುದ್ಧ ಮಾಡುವುದಕ್ಕೆ ಏರ್‌ ಪ್ಯೂರಿಫಯರ್‌ ವ್ಯವಸ್ಥೆ ಅಗತ್ಯ. ಸಾಕಷ್ಟು ಗಾಳಿಯಾಡದ ಜಾಗದಲ್ಲಿ ಕಠೋರವಾದ ರಾಸಾಯನಿಕಗಳನ್ನು ಬಳಸಿದರೆ, ಗಾಳಿಯ ಗುಣಮಟ್ಟ ಇನ್ನಷ್ಟು ಹಾಳಾಗುತ್ತದೆ. ನ್ಯುಮೋನಿಯ ಸೇರಿದಂತೆ ಯಾವುದೇ ರೀತಿಯ ಶ್ವಾಸಕೋಶದ ಸೋಂಕನ್ನು ತಡೆಯಲು ಉಸಿರಾಡುವ ಗಾಳಿಯ ಗುಣಮಟ್ಟ ಚೆನ್ನಾಗಿರುವುದು ಮುಖ್ಯ.

ದೇಹದ ರೋಗನಿರೋಧಕ ಶಕ್ತಿ ಚೆನ್ನಾಗಿದ್ದಷ್ಟೂ ಸೋಂಕುಗಳನ್ನು ತಡೆಯಬಹುದು. ತಾಜಾ ಹಣ್ಣು-ತರಕಾರಿ-ಸೊಪ್ಪುಗಳನ್ನು ನಿತ್ಯದ ಆಹಾರದಲ್ಲಿ ಬಳಸಿ. ಇಡೀ ಧಾನ್ಯಗಳು, ಕಾಯಿ-ಬೀಜಗಳು, ಲೀನ್‌ ಪ್ರೊಟೀನ್‌ಗಳು ಊಟದ ತಟ್ಟೆಯಲ್ಲಿರಲಿ. ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಸಾಕಷ್ಟು ನಿದ್ದೆ ಮಾಡುವುದು ಒಳ್ಳೆಯ ಮದ್ದು.

Weight Gain: ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಸಿಗರೇಟ್‌ ಮತ್ತು ಆಲ್ಕೋಹಾಲ್‌ಗಳೆರಡೂ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಅದರಲ್ಲೂ ಸಿಗರೇಟ್‌ನ ಹೊಗೆಯಿಂದ ಶ್ವಾಸಕೋಶಗಳು ದುರವಸ್ಥೆಗೆ ತಲುಪಿ, ಕಡ್ಡಿಯಂಥ ಸೋಂಕೂ ಗುಡ್ಡದಂತಾಗುತ್ತದೆ. ಹಾಗಾಗಿ ಸ್ವಚ್ಛ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ನ್ಯುಮೋನಿಯದಂಥ ಶ್ವಾಸಕೋಶದ ಸೋಂಕುಗಳನ್ನು ತಡೆಗಟ್ಟಿ.