ಲಖನೌ: ಆಭರಣ (jeweller) ವ್ಯಾಪಾರಿಯೊಬ್ಬರು ಪತ್ನಿ ಹಾಗೂ ತನ್ನ ಮೂರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ (UP Horror) . ಕೃತ್ಯ ನಡೆಸಿದ ವ್ಯಕ್ತಿಯನ್ನು ಆಭರಣ ವ್ಯಾಪಾರಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿಗೆ ಆಹಾರ ಪದಾರ್ಥದಲ್ಲಿ ವಿಷ ಹಾಕಿ ಕೊಲೆ ಮಾಡಿ ಅದನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ದಾನೆ. ನಂತರ ತಾನು ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಮುಖೇಶ್ ಪತ್ನಿ ರೇಖಾ, ಪುತ್ರಿಯರಾದ ಭವ್ಯ (22), ಕಾವ್ಯ (17) ಮತ್ತು ಪುತ್ರ ಅಭೀಷ್ತ್ (12) ನನ್ನು ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ. ನಂತರ ಶವಗಳ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ಗೆ ಹಾಕಿಕೊಂಡಿದ್ದ. ಇದನ್ನು ನೋಡಿದ ಅವರ ಕುಟುಂಬಸ್ಥರು ಮುಖೇಶ್ ಮನೆಗೆ ಬಂದು ಹುಡುಕಾಟ ನಡೆಸಿದ್ದಾರೆ. ಆಗ ಮೃತ ದೇಹಗಳು ಪತ್ತೆಯಾಗಿವೆ. ಇತ್ತ ಮುಖೇಶ್ ರೈಲ್ವೆ ನಿಲ್ದಾಣಕ್ಕೆ ತೆರಳಿ ಚಲಿಸುವ ಮರುಧರ್ ಎಕ್ಸ್ಪ್ರೆಸ್ನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮುಖೇಶ್ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ ಆರ್ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬುದು ತಿಳಿದು ಬಂದಿದೆ.
Watch: In Etawah's Lalpura area, a jeweler named Mukesh Verma allegedly killed his wife and four children, sparking shock in the community. Suspected to have poisoned them, Verma attempted suicide at the railway station, where he was apprehended by police pic.twitter.com/EZrwwfn0sG
— IANS (@ians_india) November 12, 2024
ಘಟನೆಯ ಬಗ್ಗೆ ಮಾತನಾಡಿದ ಇಟಾವಾಹ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆಗಳು ಎನಿಸುತ್ತವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೇರೊಂದು ಘಟನೆಯಲ್ಲಿ ತನ್ನ ಮಗಳು ಯುವಕನೊಬ್ಬನ ಜೊತೆ ಓಡಿ ಹೋಗಿದ್ದಾಳೆ ಎಂದು ಆಕ್ರೋಶಗೊಂಡ ಮಹಿಳೆ ಮಗಳನ್ನು ಕೊಲೆ ಮಾಡಲು ಯುವಕನೊಬ್ಬನಿಗೆ ಸುಪಾರಿ ನೀಡಿ ತಾನೇ ಕೊಲೆಯಾದ ಘಟನೆ ಇತ್ತೀಚೆಗೆ ನಡೆದಿತ್ತು. 42 ವರ್ಷದ ಅಲ್ಕಾ ದೇವಿ ತನ್ನ ಮಗಳ ಪ್ರಿಯತಮ ಎಂದು ತಿಳಿಯದೆ ಸುಭಾಷ್ ಎನ್ನುವವರಿಗೆ ಮಗಳನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದರು. ಆದರೆ ಆಕೆಯ ಮಗಳು ತನ್ನ ಗೆಳೆಯನ ಜೊತೆ ಸೇರಿ ಅಮ್ಮನನ್ನೇ ಕೊಲೆ ಮಾಡುವಂತೆ ಹೇಳಿದ್ದಾಳೆ. ಪ್ರೇಯಸಿ ಹೇಳಿದ ಮಾತನ್ನು ಕೇಳಿ ಕೊಲೆ ಮಾಡಿದ ಸುಭಾಷ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.