Friday, 15th November 2024

Ladakh Horror: ಬರೋಬ್ಬರಿ 26 ವರ್ಷಗಳ ಬಳಿಕ ಕೊಲೆ ಆರೋಪಿಗಳ ಬಂಧನ; ರೋಚಕ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ವಿವರ

Ladakh Horror

ಲಡಾಖ್‌: ಕಾರ್ಗಿಲ್ (Kargil) ಜಿಲ್ಲೆಯಲ್ಲಿ ನಡೆದ ಹತ್ಯೆಯ (Ladakh Horror) ಆರೋಪಿಗಳನ್ನು ಬರೋಬ್ಬರಿ 26 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸಂತ್ರಸ್ತರ ಕುಟುಂಬದವರಿಗೆ ನ್ಯಾಯ ದೊರೆದಂತಾಗಿದೆ. ಸುದೀರ್ಘವಾದ ವಿಚಾರಣೆಯ ನಂತರ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಹತ್ಯೆಯನ್ನು ಲಡಾಖ್‌ನ ಅತ್ಯಂತ ಭೀಕರ ಅಪರಾಧಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಘಟನೆಯೇನು?

 1998ರ ಅ. 7ರಂದು ಟ್ಯಾಂಗೋಲ್‌ನ ಬಶೀರ್ ಅಹ್ಮದ್ , ಅವರ ಸಹೋದರ ಮೊಹಮ್ಮದ್ ಅಲಿ ಮತ್ತು ಕಾರ್ಗಿಲ್‌ನ ಹಾಜಿ ಅನಾಯತ್ ಅಲಿ, ಕಥುವಾದ ಶೆರೋ ಅಲಿ ಮತ್ತು ನಜೀರ್ ಅಹ್ಮದ್ ಜಾನುವಾರುಗಳನ್ನು ಖರೀದಿಸಲು ವಾರ್ಡ್ವಾನ್‌ಗೆ ತೆರಳಿದ್ದರು. ಆದರೆ ತೆರಳಿದ್ದ ಯಾರೊಬ್ಬರೂ ವಾಪಾಸ್ಸಾಗಿರಲಿಲ್ಲ. ಈ ಸಂಬಂಧ ಹಾಜಿ ಅನಾಯತ್ ಅಲಿ ಸೋದರಳಿಯ ಮೊಹಮ್ಮದ್ ಯೂಸುಫ್ 1999ರ ಏ. 17ರಂದು ಕಥುವಾ ಹೀರಾ ನಗರದ ಮೊಹಮ್ಮದ್ ರಫೀಕ್, ಮೊಹಮ್ಮದ್ ಫರೀದ್ ಮತ್ತು ಅಬ್ದುಲ್ ಅಜೀಜ್ ಎಂಬ ಮೂವರ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

ಎಫ್‌ಐಆರ್ ಸಂಖ್ಯೆ 37/1999ರ ಅಡಿಯಲ್ಲಿ ತನಿಖೆ ಪ್ರಾರಂಭವಾಯಿತು. ಶಂಕಿತರ ಮೇಲೆ ಆರ್‌ಪಿಸಿಯ ಸೆಕ್ಷನ್ 364 ರ ಅಡಿಯಲ್ಲಿ ಅಪಹರಣದ ಆರೋಪ ಹೊರಿಸಿ ಬಂಧಿಸಲಾಯಿತು. ಆದರೆ 1999ರ ಏಪ್ರಿಲ್‌ನಲ್ಲಿ ಸರಿಯಾದ ಸಾಕ್ಷಾಧಾರ ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಕೇಸ್‌ಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರ ಸಿಗದೆ ಇರುವ ಕಾರಣ 2007ರಲ್ಲಿ ಪ್ರಕರಣವನ್ನು ಮುಚ್ಚಲಾಗಿತ್ತು.

ಪ್ರಕರಣಕ್ಕೆ ಟ್ವಿಸ್ಟ್‌

ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು 2011ರಲ್ಲಿ. ಕನಿಟಾಲ್ ಗ್ಲೇಸಿಯರ್ ಬಳಿ ಮನುಷ್ಯರ  ಅಸ್ಥಿ ಪಂಜರ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ಅಸ್ಥಿ ಪಂಜರದ ಡಿಎನ್‌ಎ ಪರೀಕ್ಷೆ ಮಾಡಿದಾಗ ಅದು ನಜೀರ್ ಅಹ್ಮದ್ ಮತ್ತು ಶೆರೋ ಅಲಿ ಅವರ ಅಸ್ಥಿ ಪಂಜರ ಎಂದು ತಿಳಿದು ಬಂದಿತ್ತು. ನಂತರ ಮತ್ತೆ ಪ್ರಕರಣವನ್ನು ಜೀವಂತಗೊಳಿಸಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಆದರೆ ಆರೋಪಿಗಳನ್ನು ಹಿಡಿಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಲೆಮಾರಿ ಜೀವನಶೈಲಿಯಲ್ಲಿ ವಾಸಿಸುವ ಆರೋಪಿಗಳು ಆಗಾಗ್ಗೆ ಸ್ಥಳಗಳನ್ನು ಬದಲಾಯಿಸಿಕೊಂಡು ಜೀವನ ನಡೆಸುತ್ತಿದ್ದರು.

ಇದನ್ನೂ ಓದಿ: Baramulla Encounter: ಕಾಶ್ಮೀರದಲ್ಲಿ ಸೇನೆಯಿಂದ ಭರ್ಜರಿ ಬೇಟೆ; ಇಬ್ಬರು ಉಗ್ರರ ಎನ್‌ಕೌಂಟರ್‌

ಕಾರ್ಗಿಲ್‌ನ ಪಣಿಖರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್‌ಸ್ಪೆಕ್ಟರ್ ಮಂಜೂರ್ ಹುಸೇನ್ ನೇತೃತ್ವದಲ್ಲಿ ಹೊಸ ಪೊಲೀಸ್ ತಂಡವನ್ನು ನೇಮಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಇದೀಗ ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಮತ್ತು ಸ್ಥಳೀಯ ಮೂಲಗಳೊಂದಿಗೆ ಕಥುವಾದ ಹೀರಾ ನಗರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ 7 ದಿನಗಳ ವಿಚಾರಣೆಯ ನಂತರ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಮೂಲಕ ಸುದೀರ್ಘ 26 ವರ್ಷಗಳ ನಂತರ ಸಂಸ್ರಸ್ತರ ಕುಟುಂಬಕ್ಕೆ ನ್ಯಾಯ ದೊರಕಿದಂತಾಗಿದೆ.