Thursday, 14th November 2024

Atal Pension Scheme: ವೃದ್ಧಾಪ್ಯದಲ್ಲಿ ಪತಿ-ಪತ್ನಿ 5000 ರೂ. ಪಿಂಚಣಿ ಪಡೆಯುವುದು ಹೇಗೆ?

Atal Pension Scheme

ಭವಿಷ್ಯ ಸುರಕ್ಷಿತವಾಗಿರಬೇಕು, ಅನುಕೂಲಕರವಾಗಿರಬೇಕು ಎಂದು ಬಯಸುವವರು ವೃದ್ಧಾಪ್ಯಕ್ಕಾಗಿ ಉತ್ತಮ ಪಿಂಚಣಿ ಯೋಜನೆಯನ್ನು (Pension Scheme) ಖರೀದಿ ಮಾಡುತ್ತಾರೆ ಅಥವಾ ಮಾಡಲು ಬಯಸುತ್ತಾರೆ. ಅಂತಹ ಯೋಜನೆಯಲ್ಲಿ ಒಂದು ಅಟಲ್ ಪಿಂಚಣಿ (Atal Pension Scheme) ಯೋಜನೆ.

ದೇಶದಲ್ಲಿ ಅನೇಕ ರೀತಿಯ ಪಿಂಚಣಿ ಯೋಜನೆಗಳಿವೆ. ಆದರೆ ಈ ಒಂದು ಯೋಜನೆಯಲ್ಲಿ ಪತಿ ಪತ್ನಿ 60 ವರ್ಷ ವಯಸ್ಸಿನ ಬಳಿಕ ತಲಾ ಐದು ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.

18 ರಿಂದ 40 ವರ್ಷ ವಯಸ್ಸಿನವರು ಅಟಲ್ ಪಿಂಚಣಿ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ 18ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪತಿ ಪತ್ನಿ ಇಬ್ಬರೂ ತಲಾ ಐದು ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಇದಕ್ಕಾಗಿ ಪ್ರತಿ ತಿಂಗಳು ಇಬ್ಬರೂ ಹೂಡಿಕೆ ಮಾಡಬೇಕಾದ ತಲಾ ಮೊತ್ತ ಕೇವಲ 210 ರೂ.

ಇಬ್ಬರೂ ಪ್ರತಿ ತಿಂಗಳು 210 + 210 ರೂ. ನಂತೆ 420 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಈ ಹೂಡಿಕೆಯನ್ನು ಪತಿ- ಪತ್ನಿಯರಿಬ್ಬರೂ 60 ವರ್ಷದವರೆಗೆ ಮಾಡಬೇಕು.ಇದರ ಅನಂತರ ಇಬ್ಬರಿಗೂ ಪಿಂಚಣಿ ಸಿಗುತ್ತದೆ. ಇದು ಇಬ್ಬರ ವೃದ್ಧಾಪ್ಯಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.

Atal Pension Scheme

ಅಟಲ್ ಪಿಂಚಣಿ ಯೋಜನೆ ಎಂದರೇನು?

ಈ ಯೋಜನೆಯು ಸರ್ಕಾರಿ ಬೆಂಬಲಿತ ಪಿಂಚಣಿ ಕಾರ್ಯಕ್ರಮವಾಗಿದ್ದು, ನಿವೃತ್ತಿಯ ಅನಂತರ ಭಾರತೀಯರಿಗೆ ಸ್ಥಿರವಾದ ಆದಾಯವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಮುಖ್ಯವಾಗಿ ಅಸಂಘಟಿತ ವಲಯವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಈ ಯೋಜನೆಯು 1,000 ರೂ. ನಿಂದ 5,000 ರೂ. ವರೆಗಿನ ಮಾಸಿಕ ಪಿಂಚಣಿ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

ಇದರಲ್ಲಿ ಹೂಡಿಕೆಯು ಅಪಾಯ ಮುಕ್ತವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಅಟಲ್ ಪಿಂಚಣಿ ಯೋಜನೆಯು ಸ್ವಯಂ ಪ್ರೇರಿತ ಉಳಿತಾಯ ಮತ್ತು ನಿವೃತ್ತಿಗಾಗಿ ಹಣ ಉಳಿಸಲು ಉತ್ತೇಜಿಸುತ್ತದೆ. ಆರ್ಥಿಕ ಚಿಂತೆಯಿಲ್ಲದೆ ಜೀವನದಲ್ಲಿ ಅನಾರೋಗ್ಯ, ಅಪಘಾತ ಅಥವಾ ಯಾವುದೇ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು
ಅಟಲ್ ಪಿಂಚಣಿ ಯೋಜನೆಗೆ 18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇತರ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯ ಭಾಗವಾಗಿರಬಾರದು. ಅರ್ಜಿದಾರರು ಕನಿಷ್ಠ 20 ವರ್ಷಗಳವರೆಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಸ್ವಾವಲಂಬನ್ ಯೋಜನೆಯ ಫಲಾನುಭವಿಗಳು ಸಹ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರು ಬ್ಯಾಂಕ್ ಶಾಖೆಗಳಲ್ಲಿ ಖಾತೆ ತೆರೆದು ಅರ್ಜಿ ಸಲ್ಲಿಸಬಹುದು ಅಥವಾ ಇದಕ್ಕಾಗಿ ಪಿಎಫ್ ಆರ್ ಡಿಎಯ ಅಧಿಕೃತ ವೆಬ್‌ಸೈಟ್‌ಗಳಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಬಹುದು.

Post Office Scheme: ಆಕರ್ಷಕ ಬಡ್ಡಿ ನೀಡುವ ಪೋಸ್ಟ್ ಆಫೀಸ್‌ನ ಐದು ಯೋಜನೆಗಳಿವು

ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ. ಇದರೊಂದಿಗೆ ಮೊಬೈಲ್ ಸಂಖ್ಯೆ, ಆಧಾರ್ ಪ್ರತಿಯನ್ನು ಸಲ್ಲಿಸಿ.
ಅಟಲ್ ಪಿಂಚಣಿ ಯೋಜನೆಯ ಅರ್ಜಿಯು ಬಹು ಭಾಷೆಗಳಲ್ಲಿ ಲಭ್ಯವಿದೆ. ಅರ್ಜಿ ಅನುಮೋದನೆಯಾದ ಬಳಿಕ ಅರ್ಜಿದಾರರಿಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.