Friday, 22nd November 2024

Pavel Durov: ಮಕ್ಕಳಾಗದ ದಂಪತಿಗೆ ಉಚಿತ ಐವಿಎಫ್‌ ಚಿಕಿತ್ಸೆ ಘೋಷಿಸಿದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್‌; ಕಂಡೀಷನ್ಸ್ ಅಪ್ಲೈ

Pavel Durov

ಮಾಸ್ಕೋ: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ (Telegram)ನ ಸಿಇಒ ಪಾವೆಲ್‌ ದುರೋವ್‌ (Pavel Durov) ಮಕ್ಕಳಾಗದಿರುವ ದಂಪತಿಗೆ ಬಹು ದೊಡ್ಡ ಕೊಡುಗೆ ಘೋಷಿಸಿದ್ದಾರೆ. ಉಚಿತವಾಗಿ ಕೃತಕ ಗರ್ಭಧಾರಣೆ (IVF)ಯ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೊಂದು ಷರತ್ತಿದೆ. ತಮ್ಮ ವೀರ್ಯವನ್ನು ಬಳಸಲು ತಯಾರಿರುವ ಮಹಿಳೆಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಐವಿಎಫ್ ಅಥವಾ ಕೃತಕ ಗರ್ಭಧಾರಣೆ ಮೂಲಕ ಬಂಜೆತನದಿಂದ ಬಳಲುತ್ತಿರುವವರು ಮಕ್ಕಳನ್ನು ಹೊಂದಬಹುದು.

ರಷ್ಯಾದ ಮಾಸ್ಕೋದಲ್ಲಿರುವ ಅಲ್ಟ್ರಾವಿಟಾ (Altravita) ಫರ್ಟಿಲಿಟಿ ಕ್ಲಿನಿಕ್‌ನ ಸಹಭಾಗಿತ್ವದ ಮೂಲಕ ಈ ಚಿಕಿತ್ಸೆ ನೀಡಲಾಗುತ್ತಿದೆ. “ನಿಮಗೆ ಒಂದು ವಿಶೇಷ ಕೊಡುಗೆಯನ್ನು ಘೋಷಿಸುತ್ತಿದ್ದೇವೆ. ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಪಾವೆಲ್‌ ದುರೋವ್‌ ಅವರ ವೀರ್ಯವನ್ನು ಬಳಸಿಕೊಂಡು ನಮ್ಮ ಕ್ಲಿನಿಕ್‌ನಲ್ಲಿ ಉಚಿತವಾಗಿ ಐವಿಎಫ್‌ ಚಿಕಿತ್ಸೆ ಪಡೆಯಬಹುದು” ಎಂದು ಅಲ್ಟ್ರಾವಿಟಾ ವೆಬ್‌ಸೈಟ್‌ ತಿಳಿಸಿದೆ. ಉತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಉನ್ನತ ಚಿಕಿತ್ಸೆ ನೀಡಲು ಬದ್ಧರಾಗಿರುವುದಾಗಿ ಕ್ಲಿನಿಕ್ ತಿಳಿಸಿದೆ.

ಆಯ್ಕೆ ಮಾಡುವುದು ಹೇಗೆ?

ಈ ಸೌಲಭ್ಯ ಪಡೆಯುವ ವಿಧಾನವನ್ನೂ ವೆಬ್‌ಸೈಟ್‌ ಪ್ರಕಟಿಸಿದೆ. ಈ ಚಿಕಿತ್ಸೆ ಪಡೆಯಲು ಬಯಸುವ ಮಹಿಳೆಯರು ಆರಂಭಿಕ ಸಮಾಲೋಚನೆಯನ್ನು ನಿಗದಿಪಡಿಸಲು ಅಲ್ಟ್ರಾವಿಟಾ ಕ್ಲಿನಿಕ್‌ ಅನ್ನು ಸಂಪರ್ಕಿಸಬೇಕು. ಈ ವೇಳೆ ವೈದ್ಯರು ಐವಿಎಫ್ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ಜತೆಗೆ ಅಗತ್ಯ ಪರೀಕ್ಷೆಗಳನ್ನು ನಡೆಸುತ್ತಾರೆ. ಆ ಮೂಲಕ ಚಿಕಿತ್ಸೆಗೆ ಅರ್ಹರಾದವರನ್ನು ಆಯ್ಕೆ ಮಾಡುತ್ತಾರೆ. ಮಹಿಳೆಯರ ವಯಸ್ಸು 37 ವರ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಉತ್ತಮ ಆರೋಗ್ಯ ಹೊಂದಿರಬೇಕು. ಅಗತ್ಯ ಪರೀಕ್ಷೆಯ ಬಳಿಕ ಆಯ್ಕೆಯಾದ ಮಹಿಳೆಯರ ಐವಿಎಫ್ ಚಿಕಿತ್ಸೆ ಮುಂದುವರಿಯುತ್ತದೆ ಎಂದು ವೆಬ್‌ಸೈಟ್‌ ತಿಳಿಸಿದೆ.

100 ಮಕ್ಕಳಿಗೆ ತಂದೆಯಾಗಿರುವುದಾಗಿ ಘೋಷಿಸಿದ್ದ ಪಾವೆಲ್‌ ದುರೋವ್

ಈ ವರ್ಷದ ಜುಲೈಯಲ್ಲಿ 39 ವರ್ಷದ ಪಾವೆಲ್‌ ದುರೋವ್‌ ಅವರು ಕಳೆದ 15 ವರ್ಷಗಳಲ್ಲಿ ತಾವು 100 ಮಕ್ಕಳ ತಂದೆಯಾಗಿರುವುದಾಗಿ ಘೋಷಿಸಿದ್ದರು. ಮದುವೆಯಾಗದ ತಮಗೆ ಹೇಗೆ ಮಕ್ಕಳಾದವು ಎನ್ನುವುದನ್ನೂ ಅವರು ವಿವರಿಸಿದ್ದರು. “ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ ಹಂಚಿಕೊಂಡಿದ್ದರು. ವೀರ್ಯ ದಾನದ ಮೂಲಕ ತಾವು 100 ಮಕ್ಕಳ ಜನನಕ್ಕೆ ಕಾರಣರಾಗಿರುವುದನ್ನು ವಿವರಿಸಿದ್ದರು.

“ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದಿದ್ದೇನೆ. ಹೀಗಾಗಿ ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ ಐವಿಎಫ್‌ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿ ಇಡಲಾಗಿದೆ. ನನ್ನ ವೀರ್ಯದಿಂದ ಮಕ್ಕಳು ಜನಿಸುತ್ತಲೇ ಇದ್ದಾರೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದರು.

ಐವಿಎಫ್‌ ಎಂದರೇನು?

ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ ವಿಟ್ರೊ ಫರ್ಟಿಲೈಸೇಷನ್‌ (ಐವಿಎಫ್‌) ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ ಮಹಿಳೆಯ ಅಂಡಾಣು ಹಾಗೂ ಪುರುಷನ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Donald Trump: ಪುಟಿನ್‌ಗೆ ಟ್ರಂಪ್ ಕರೆ- ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಲು ಒತ್ತಾಯ