ಲೋಕಮತ
ಲೋಕೇಶ್ ಕಾಯರ್ಗ
ಸುಮಾರು 50 ವರ್ಷಗಳ ಕಾಲ ರಾಜ್ಯದ ಆನೆ ಶಿಬಿರದ ಭಾಗವಾಗಿ, ದಸರಾ ಗಜಪಡೆ ನಾಯಕನಾಗಿ, ನಾನಾ ಕಾರ‍್ಯಾಚರಣೆಗಳ ಅಗ್ರೇಸರನಾಗಿ, ಅಂತಿಮಕ್ಷಣಗಳವರೆಗೂ ಹೋರಾಡಿ ಹಲವರ ಪ್ರಾಣ ಉಳಿಸಿದ ಅರ್ಜುನನ ಬಲಿದಾನಕ್ಕೆ ನ್ಯಾಯ ಸಿಗಬೇಕಾದರೆ, ಆತನ ಸಾವಿನ ರಹಸ್ಯ ಬಯಲಾಗಬೇಕು. ಆತನ ವೀರಗಾಥೆಗೆ ತಕ್ಕುದಾದ ಸ್ಮಾರಕ ರಚನೆಯಾಗಬೇಕು.
ಇನ್ನು ಮೂರು ವಾರಗಳು ಕಳೆದರೆ ಆತನನ್ನು ಕಳೆದುಕೊಂಡು ಭರ್ತಿ ಒಂದು ವರ್ಷ. ಅಂದು ಆತ ತೋರಿದ ಪರಾಕ್ರಮವನ್ನು ಮಂತ್ರಿ ಮಾಗಧರು, ಅಧಿಕಾರಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಕೋಟ್ಯಂತರ ಜನರು ಕೊಂಡಾಡಿದ್ದರು. ಆ ದಿನ ತನ್ನ ಪ್ರಾಣವನ್ನು ಒತ್ತೆ ಇಟ್ಟು ಆತ ಹೋರಾಟಕ್ಕಿಳಿಯದೇ ಹೋಗಿದ್ದರೆ ಏನಾಗುತ್ತಿತ್ತು ಎಂದು ಊಹಿಸಲು ಸಾಧ್ಯವಿಲ್ಲ. ಅಲ್ಲಿದ್ದ ಅಧಿಕಾರಿಗಳು, ತನ್ನನ್ನು ನೋಡಿಕೊಳ್ಳುತ್ತಿದ್ದ ಪರಿಚಾರಕರು ಮತ್ತು ತನ್ನ ಸಂಗಾತಿಗಳನ್ನು ಆತ ಪ್ರಾಣ ಸಂಕಟದಿಂದ ಕಾಪಾಡಿದ್ದ. ಹೋರಾಟದ ವಿಚಾರದ ಬಂದಾಗ ಎಂದಿಗೂ ತಲೆ
ಬಾಗದ ಆತ ಅಂದೂ ಕೂಡ ದಿಟ್ಟತನದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಳಗ ನಡೆಸಿದ್ದ.
ಮೊದಲ ಬಾರಿ ವೈರಿ ಮುನ್ನುಗ್ಗಿ ಬಂದಾಗ ಆತನನ್ನು ಹಿಮ್ಮೆಟ್ಟಿಸಿ ಅಟ್ಟಿಸಿಕೊಂಡು ಹೋಗಿದ್ದ. ಆದರೆ ಎರಡನೇ ಬಾರಿ ಅದೇ ಎದುರಾಳಿ ಎದುರು ಯಾಕೆ ಸೋತ ಎನ್ನುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಅಂದು ಆತನ ಜತೆಗಿದ್ದವರ ಸಮನ್ವಯ, ಸಹಕಾರ ಸರಿಯಾಗಿ
ಸಿಕ್ಕಿರುತ್ತಿದ್ದರೆ, ಅವರು ಎಡವಟ್ಟು ಮಾಡದೇ ಹೋಗಿದ್ದರೆ ಆತ ಬದುಕಿರುತ್ತಿದ್ದ ಎಂಬ ಮಾತುಗಳು ಈಗಲೂ ಕೇಳಿ ಬರುತ್ತಿವೆ. ಆದರೆ ಇವೆಲ್ಲವೂ ಇಂದಿಗೂ ಊಹಾಪೋಹದ ಮಾತುಗಳಾಗಿಯೇ ಉಳಿದಿವೆ. ಆತನ ಮರಣೋತ್ತರ ಪರೀಕ್ಷೆಯನ್ನು ಅವಸರದಲ್ಲಿ ಮುಗಿಸುವ ಉದ್ದೇಶವೇನಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವರ್ಷ ಮುಗಿಯುತ್ತಾ ಬಂದರೂ ಆತನ ಸಾವಿನ ತನಿಖಾ ವರದಿಯನ್ನು ಬಹಿರಂಗಪಡಿಸದಿರಲು ಕಾರಣಗಳು ತಿಳಿದಿಲ್ಲ. ಆತನಿಗಾಗಿ ಸ್ಮಾರಕ ನಿರ್ಮಿಸುವ ಮಾತು ಕಾರ‍್ಯರೂಪಕ್ಕೆ ಬರಲು ಇನ್ನೆಷ್ಟು ಕಾಲ ಬೇಕೋ ಗೊತ್ತಿಲ್ಲ.
ಮನುಷ್ಯರೊಂದಿಗೆ ಮನುಷ್ಯರಿಗಿಂತ ಹೆಚ್ಚು ನಂಬಿಕಸ್ಥನಾಗಿ ಬದುಕಿದ ಅರ್ಜುನ ಎಂಬ ಅಸೀಮ ಸಾಹಸಿ ಆನೆಯ ದುರಂತ ಸಾವಿಗೆ ಒಂದು ವರ್ಷ ವಾಗುತ್ತಾ ಬಂತು. ಮಧ್ಯಮ ಪಾಂಡವನ ಹೆಸರು ಹೊತ್ತು ಅವನಂತೆ, ಗಜಪಡೆಯ ನಾಯಕನಾಗಿ ಮಿಂಚಿದ ಅರ್ಜುನನ ಸಾವು ಆತನ ಬಗ್ಗೆ ಅಷ್ಟಿಷ್ಟು ಬಲ್ಲ ಎಲ್ಲರಿಗೂ ನಂಬಲು ಕಷ್ಟವೆನಿಸುವ ವಿಷಯ.
ಅರಣ್ಯಾಧಿಕಾರಿಗಳು, ಮಾವುತರು, ಕಾವಾಡಿಗರು, ಅರಿವಳಿಕೆ ತಜ್ಞರು ಮಾತ್ರವಲ್ಲ ಊರವರ ಪಾಲಿಗೂ ಅರ್ಜುನ ಎಂದರೆ ಅಭಯ ಮತ್ತು ವಿಶ್ವಾಸದ ಪ್ರತೀಕ. ನಾಡಿಗೆ ದಾಳಿ ಇಟ್ಟು ದಾಂಧಲೆ ನಡೆಸುವ ಪುಂಡಾನೆಗಳನ್ನು ಓಡಿಸುವುದಾಗಲಿ, ಅವುಗಳನ್ನು ಸೆರೆ ಹಿಡಿದು ಬೇರೆಡೆಗೆ
ಸ್ಥಳಾಂತರಿಸುವುದಾಗಲಿ, ನರಭಕ್ಷಕ ಹುಲಿ ಸೆರೆ ಹಿಡಿಯುವ ಕಾರ‍್ಯಾಚರಣೆಯಾಗಲಿ, ಅರ್ಜುನ ಇದ್ದ ಎಂದರೆ ಅದು ಯಶಸ್ವಿಯಾಯಿತೆಂದೇ ಅರ್ಥ.
ಇದೇ ಕಾರಣಕ್ಕೆ ಅನ್ಯ ರಾಜ್ಯಗಳ ಅಧಿಕಾರಿಗಳೂ ಆತನ ಸೇವೆಗೆ ದುಂಬಾಲು ಬಿದ್ದಿದ್ದರು. ಇಂತಹ ಅರ್ಜುನ ಇದ್ದಕ್ಕಿದ್ದಂತೆ ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಕಾರ‍್ಯಾಚರಣೆಯೊಂದರಲ್ಲಿ ಅಸುನೀಗಿದ ಎಂದರೆ
ನಂಬಲು ಈಗಲೂ ಕಷ್ಟವೆನಿಸುತ್ತಿದೆ.
ಅಸೀಮ ಬಲಶಾಲಿ,ಪರಾಕ್ರಮಿ ಕಳೆದ ತಿಂಗಳಷ್ಟೇ ಮುಗಿದ ಮೈಸೂರು ದಸರೆಯ ಜಂಬೂ ಸವಾರಿ ದಿನ ಆತ ಅನುಪಸ್ಥಿತಿ ಎಲ್ಲರಿಗೂ
ಕಾಡಿತ್ತು. ಸಿನಿಮಾದಲ್ಲಿ ಹೀರೋ ಎಂಟ್ರಿಗೆ ಕಾಯುವಂತೆ ಜಂಬೂ ಸವಾರಿ ದಿನ ಅರ್ಜುನನ ಪ್ರವೇಶಕ್ಕೆ ಕಾಯುವವರಿದ್ದರು. ಗಜಪಡೆಯಲ್ಲಿ ಎಲ್ಲ ಆನೆಗಳಿಗಿಂತ ಹೆಚ್ಚು ಎತ್ತರ ಮತ್ತು ತೂಕದ ಆನೆಯಾಗಿದ್ದ ಆತನ ಗಾಂಭೀರ‍್ಯದ ನಡೆಯನ್ನು ಕಣ್ತುಂಬಿಕೊಳ್ಳಲೆಂದೇ ದಸರೆಗೆ ಬರುವವರಿದ್ದರು. ಗಜಪಡೆಯ ಸಾರಥ್ಯ ವಹಿಸಿದ ಅಭಿಮನ್ಯುವಿನ ಮಾರ್ಗದರ್ಶಕನಾಗಿ, ಹಿರಿಯಣ್ಣನಾಗಿ ಅರ್ಜುನ ಬಂದ ಎಂದರೆ ಅಲ್ಲಿ ಸೇರಿದ್ದ
ಸಾವಿರಾರು ಜನರ ಮೊಬೈಲ್‌ಗಳು ಮತ್ತು ನೂರಾರು ಛಾಯಾಗ್ರಾಹಕರ ಕ್ಯಾಮೆರಾ ಕಣ್ಣುಗಳು ಆತನತ್ತಲೇ ನೆಟ್ಟಿರುತ್ತಿದ್ದವು.
1992ರಲ್ಲಿ ದಸರಾ ಗಜಪಡೆಯನ್ನು ಸೇರಿದ್ದ ಅರ್ಜುನ ಮೊದಲ ಮೂರು ವರ್ಷ ನಿಶಾನೆ ಆನೆಯಾಗಿ ಭಾಗವಹಿಸಿದ್ದ. 18 ವರ್ಷಗಳ ಕಾಲ ನಿರಂತರವಾಗಿ ಅಂಬಾರಿ ಹೊತ್ತಿದ್ದ ದ್ರೋಣ ವಿದ್ಯುತ್ ಸ್ಪರ್ಶಿಸಿ ದುರಂತ ಸಾವಿಗೀಡಾದಾಗ, ಅರ್ಜುನನಿಗೆ ಸಾರಥ್ಯ ನೀಡಲಾಗಿತ್ತು. ಮೊದಲ ವರ್ಷದ ಅಂಬಾರಿ ಸೇವೆಯನ್ನು ಅರ್ಜುನ ಯಶಸ್ವಿಯಾಗಿ ನಡೆಸಿದ್ದ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ದಸರಾದಲ್ಲಿ ೨೫ಕ್ಕೂ ಹೆಚ್ಚು
ವರ್ಷಗಳ ಕಾಲ ಅಂಬಾರಿ ಹೊತ್ತ ಹೆಗ್ಗಳಿಕೆ ಅವನದ್ದಾಗಿರಬೇಕಿತ್ತು. ಆದರೆ 1996ರಲ್ಲಿ ಕಾರಂಜಿ ಕೆರೆ ಬಳಿ ನಡೆದ ಮಾವುತನ ಸಾವಿಗೆ ಮುಂಗೋಪಿ ಅರ್ಜುನ ಕಾರಣ ಎಂಬ ನೆಪದಲ್ಲಿ ಮುಂದೆ ಒಂದೂವರೆ ದಶಕಗಳ ಕಾಲ ದಸರಾ ತಂಡದಿಂದ ಆತನನ್ನು ಹೊರಗಿಡಲಾಯಿತು.
15 ವರ್ಷಗಳ ಅಜ್ಞಾತವಾಸದಲ್ಲಿ ಆತ ಮಾವುತ ದೊಡ್ಡ ಮಾಸ್ತಿ ಅವರ ಕೈಯಲ್ಲಿ ಸಾಕಷ್ಟು ಪಳಗಿದ್ದ. ಮುಂದೆ ಅಂಬಾರಿ ಆನೆ ಬಲರಾಮನ ಉತ್ತರಾಧಿಕಾರಿ ಹುಡುಕಾಟದಲ್ಲಿದ್ದಾಗ ಅರ್ಜುನನಿಗೆ ಇನ್ನಾರೂ ಸಾಟಿ ಇರಲಿಲ್ಲ. 2012ರಿಂದ 2019ರ ತನಕ ನಿರಂತರ ಎಂಟು ವರ್ಷಗಳ ಕಾಲ, 60 ವರ್ಷಗಳು ತುಂಬುವವರೆಗೂ ಅರ್ಜುನ ಅಂಬಾರಿ ಹೊತ್ತು ನಡೆದಿದ್ದ. ಈ ನಡುವೆ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆದಿದ್ದ ಮಾವುತ ದೊಡ್ಡ ಮಾಸ್ತಿ ಅವರು ನಿಧನರಾಗಿ ಇಬ್ಬರು ಹೊಸ ಮಾವುತರು ಬಂದರೂ ಆತನ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ದಸರೆಯೊಂದೇ ಅರ್ಜುನನ ಗಮ್ಯವಾಗಿರಲಿಲ್ಲ. ಆನೆ ಸೆರೆ, ಹುಲಿ ಸೆರೆ ಕಾರ‍್ಯಾಚರಣೆಗಳಲ್ಲಿ ಆತನ ಸೇವೆ ನಿರಂತರವಾಗಿರುತ್ತಿತ್ತು. ಕಳೆದ ವರ್ಷವೂ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಿದ್ದ. ಇದಾದ ಕೆಲವೇ ದಿನಗಳಲ್ಲಿ ಹಾಸನದಲ್ಲಿ ಆನೆ ಸೆರೆ
ಕಾರ‍್ಯಾಚರಣೆಗೆ ದಸರಾ ತಂಡದ ಇತರ ಸದಸ್ಯರ ಜತೆ ಆತನನ್ನು ಕರೆಸಲಾಗಿತ್ತು. ಆದರೆ ಅಲ್ಲಿ ನಡೆಯಬಾರದ ದುರಂತ ನಡೆದುಹೋಗಿತ್ತು. “ಅಂದು ಕಾರ‍್ಯಾಚರಣೆ
ವೇಳೆ ಕಾಯಂ ಮಾವುತ ವಿನು ಬದಲು ಇನ್ನೊಬ್ಬ ಮಾವುತ ಅರ್ಜುನನ್ನು ಮುನ್ನಡೆಸುತ್ತಿದ್ದ. ಕಾರ‍್ಯಾಚರಣೆಯಲ್ಲಿ ಭಾಗವಹಿಸಿದ್ದ ಪ್ರಶಾಂತ ಎಂಬ ಆನೆಗೆ ತಪ್ಪಾಗಿ ಅರಿವಳಿಕೆ ಚುಚ್ಚುಮದ್ದು ಹೊಡೆಯಲಾಗಿತ್ತು.
ಪುಂಡಾನೆ ಎರಡನೇ ಬಾರಿಗೆ ದಾಳಿ ನಡೆಸಲು ಬಂದಾಗ ಅದನ್ನು ಹೆದರಿಸಲು ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಾಗಿತ್ತು. ಈ ಹಂತದಲ್ಲಿ ಮಾವುತ ಪ್ರಾಣ ಉಳಿಸಿಕೊಳ್ಳಲು ಅರ್ಜುನನನ್ನು ತೊರೆದು ಓಡಿ ಹೋಗಿದ್ದ. ಮಾವುತನ ಮಾರ್ಗದರ್ಶನವಿಲ್ಲದೆ,
ಗುಂಡೇಟಿನ ನೋವಿನ ನಡುವೆಯೂ ಹೋರಾಟ ಮುಂದುವರಿಸಿದ್ದ ೬೭ ವರ್ಷದ ಅರ್ಜುನ, ತರುಣಾವಸ್ಥೆಯಲ್ಲಿದ್ದ ಆನೆಯ ದಾಳಿಗೆ ಸಿಲುಕಿ ಸಾವಿಗೀಡಾಬೇಕಾಯಿತು” ಎಂಬ ಮಾತುಗಳು ಕೇಳಿ ಬಂದಿದ್ದವು.
ಸತ್ಯದ ಸಮಾಧಿ ಆಗದಿರಲಿ
ಇವುಗಳ ಸತ್ಯಾಸತ್ಯತೆ ತಿಳಿಯುವ ಹಕ್ಕು ಕನ್ನಡಿಗರಿಗಿದೆ. ಕೋಟ್ಯಂತರ ಜನರ ಪ್ರೀತಿ, ಅಭಿಮಾನ, ಗೌರವಾದರ ಗಳಿಗೆ ಪಾತ್ರವಾಗಿದ್ದ ದಸರಾ ಆನೆಯ ಸಾವು ನಿಗೂಢವಾಗಿ ಉಳಿಯಬಾರದು. ಪಿಸಿಸಿಎ- ಅಜಯ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಮಿತಿ ಈಗಾಗಲೇ ಈ
ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಿದೆ. ಸರಕಾರ ಈ ವರದಿಯನ್ನು ಬಹಿರಂಗಪಡಿಸದಿರುವುದು ಅರ್ಜುನನ ಸಮಾಧಿ ಜತೆ ಸತ್ಯವನ್ನೂ ಸಮಾಧಿ ಮಾಡುವ ಹುನ್ನಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ತನಿಖಾ ವರದಿ ಮುಂದೆ ಇಂತಹ ಅಚಾತುರ‍್ಯ, ನಿರ್ಲಕ್ಷ್ಯ ಘಟಿಸದಿರಲು
ನಮಗೆ ಪಾಠವಾಗಬೇಕು. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಕ್ರಿಯಾಶೀಲ ಸಚಿವರೆನಿಸಿರುವ ಈಶ್ವರ್ ಖಂಡ್ರೆ ಅವರು ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಾಗಿದೆ.
ಇದೊಂದೇ ಅಲ್ಲ, ಕಳೆದ ಎರಡು ವರ್ಷಗಳಲ್ಲಿ ಅರ್ಜುನ ಸೇರಿ ಮೂರು ದಸರಾ ಆನೆಗಳು ಆನೆಗಳು ದುರಂತ ಮರಣವನ್ನು ಕಂಡಿವೆ. ೨೦೨೨ರ ಡಿಸೆಂಬರ್ ನಲ್ಲಿ ಹುಣಸೂರಿನ ಭೀಮನಕಟ್ಟೆ ಶಿಬಿರದಲ್ಲಿ ಮೇಯಲು ಹೋಗಿದ್ದ ಬಲರಾಮ ಆನೆ ಮೇಲೆ ರೈತ ನೊಬ್ಬ ಗುಂಡು ಹಾರಿಸಿದ್ದ. ಇದರಿಂದ ಚೇತರಿಸಿಕೊಳ್ಳಲಾಗದೆ ಸುಮಾರು ೫ ತಿಂಗಳ ಕಾಲ ನೋವುಂಡು ದಸರಾ ಆನೆ ಮೃತಪಟ್ಟಿತ್ತು. ಇದಾದ ಬಳಿಕ ಅರ್ಜುನನ ಸರದಿ. ಇದೇ ವರ್ಷ ಜೂನ್‌ನಲ್ಲಿ ಭವಿಷ್ಯದ ಅಂಬಾರಿ ಆನೆ ಎಂದು ಪರಿಗಣಿಸಲಾಗಿದ್ದ ಅಶ್ವತ್ಥಾಮ ಆನೆ ಭೀಮನಕಟ್ಟೆ ಶಿಬಿರದಲ್ಲಿಯೇ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿತ್ತು. ಅರ್ಜುನನ ಸಾವಿಗೆ ಕೆಲವೇ ತಿಂಗಳು ಮೊದಲು ಬೇಲೂರು ತಾಲ್ಲೂಕಿನಲ್ಲಿ ಡಾ. ವೆಂಕಟೇಶ್ ಎಂಬ ಅರಿವಳಿಕೆ ತಜ್ಞ ಕಾರ‍್ಯಾಚರಣೆ ವೇಳೆಯೇ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಇದಾದ ಬಳಿಕ ಇನ್ನೊಬ್ಬ ಅರಿವಳಿಕೆ ತಜ್ಞ ಡಾ. ಸನತ್‌ಕುಮಾರ್ ಎಂಬ
ವರು ತೀವ್ರವಾಗಿ ಗಾಯಗೊಂಡಿದ್ದರು. ಇವೆಲ್ಲವೂ ಅಚಾನಕ್ ಆಗಿ ನಡೆದ ಘಟನೆಗಳಲ್ಲ. ಈ ದುರ್ಘಟನೆ ಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೂ ಕಾರಣ. ಆದರೆ ಇದುವರೆಗೆ ಯಾವುದೇ ಅಧಿಕಾರಿ ಇಲ್ಲವೇ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಂಡಿಲ್ಲ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಪುಂಡಾನೆಗಳ ಸೆರೆ ಮತ್ತು ಹುಲಿ ಸೆರೆ ಕಾರ‍್ಯಾಚರಣೆಯಲ್ಲಿ ಕರ್ನಾಟಕದ ಅನುಭವ ಹಿರಿದು. ೨೦೧೩-೧೪ರಲ್ಲಿ ಜಿ.ವಿ. ರಂಗರಾವ್ ಎಂಬವರು ಸಿಸಿಎಫ್ ಆಗಿದ್ದ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ೨೦ಕ್ಕೂ ಹೆಚ್ಚು ಕಾಡಾನೆಗಳನ್ನು ಸೆರೆ
ಹಿಡಿಯಲಾಗಿತ್ತು. ಆಗ ಹಿರಿಯ ಅಽಕಾರಿಗಳು ಕಾರ‍್ಯಾಚರಣೆಯ ಭಾಗವಾಗಿ ಕೆಳಹಂತದ ಸಿಬ್ಬಂದಿ ಜತೆ ಕಾಡಿನಲ್ಲಿರುತ್ತಿದ್ದರು. ಈಗ ಕಾಡಿನತ್ತ ತಲೆ ಹಾಕದೇ ಜಿಲ್ಲಾ ಕೇಂದ್ರಗಳಲ್ಲಿ, ರಾಜಧಾನಿಯಲ್ಲಿ ಕಾಲ ಕಳೆಯುವ ಅರಣ್ಯ ಅಧಿಕಾರಿಗಳಿದ್ದಾರೆ. ಇಂತಹ ಸೋಮಾರಿ ಅಧಿಕಾರಿಗಳ ಕಾರಣದಿಂದಲೇ ಕಾರ‍್ಯಾಚರಣೆಗಳು ವಿಫಲವಾಗುತ್ತಿವೆ. ಸಾಕಷ್ಟು ಪಳಗಿದ ದಸರಾ ಆನೆಗಳೂ ದುರಂತ ಸಾವು ಕಾಣುತ್ತಿವೆ. ಸಿಬ್ಬಂದಿಗಳೂ ಪ್ರಾಣ ಭೀತಿ ಎದುರಿಸುವಂತಾಗಿದೆ.
ಸ್ಮಾರಕ ವಿಚಾರದಲ್ಲೂ ಗೊಂದಲ
ಇನ್ನು ಅರ್ಜುನನ ಸ್ಮಾರಕ ವಿಚಾರದಲ್ಲಿ ಸರಕಾರದ ನಿಧಾನ ನಡೆ ನಾವೆಷ್ಟು ಸಂವೇದನಾರಹಿತರು ಎನ್ನುವುದಕ್ಕೆ ಸಾಕ್ಷಿಯಂತಿದೆ. ಆರಂಭದಲ್ಲಿ ಸಮಾಧಿ ಎಲ್ಲಿ ಎಂಬ ವಿಚಾರದಲ್ಲಿಯೇ ಗೊಂದಲ ಮೂಡಿಸಲಾಯಿತು. ಬಳಿಕ ಸಮಾಽ ಸುತ್ತ ಕಲ್ಲುಗಳನ್ನು ಇಟ್ಟು ಸಂರಕ್ಷಣೆ ಮಾಡುವ ವಿಷಯದಲ್ಲಿ ದರ್ಶನ್ ಅಭಿಮಾನಿಗಳು ಮತ್ತು ಅಽಕಾರಿಗಳ ಮಧ್ಯೆ ಆರೋಪ- ಪ್ರತ್ಯಾರೋಪಗಳು ನಡೆದವು. ಇದೀಗ ಅರ್ಜುನ ವೀರ
ಮರಣವನ್ನಪ್ಪಿದ ಯಸಳೂರು ಮತ್ತು ಮೈಸೂರಿನಲ್ಲಿ ಆತನ ಸಮಾಧಿ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಯಸಳೂರಿನಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ಮಾರಕಕ್ಕೆ ಮೂರ‍್ನಾಲ್ಕು ತಿಂಗಳ ಹಿಂದೆಯೇ ಸಚಿವ ಖಂಡ್ರೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಆದರೆ
ಸಮಾಽ ಸುತ್ತ ಕಟ್ಟೆ ಕಟ್ಟಿರುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ಮಹತ್ವದ ಪ್ರಗತಿ ಆಗಿಲ್ಲ. ಮೈಸೂರಿನಲ್ಲಿ ಸ್ಮಾರಕದ ಸ್ಥಳ ಇನ್ನೂ ಅಂತಿಮವಾಗಿಲ್ಲ.
ಜನರ ಪ್ರೀತಿ ಒಡನಾಟ ಗಳಿಸಿದ ಆನೆಗಳಿಗಾಗಿ ನಿರ್ಮಿಸಿದ ಸ್ಮಾರಕಗಳು ಪ್ರವಾಸಿ ತಾಣಗಳಾಗಿ, ಯಾತ್ರಾ ಸ್ಥಳಗಳಾಗಿ ಬದಲಾದ ಉದಾಹರಣೆಗಳಿವೆ.
ಅದು ನಮ್ಮ ಶ್ರದ್ಧೆ ಮತ್ತು ಪ್ರೀತಿಯ ದ್ಯೋತಕಗಳೂ ಹೌದು. ಗುರುವಾಯೂರಿನಲ್ಲಿ ಮೂರ‍್ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಕೇಶವನ್ ಹೆಸರಿನ ಆನೆಗಾಗಿ ನಿರ್ಮಿಸಿದ ಸ್ಮಾರಕ ಭಕ್ತರ ಶ್ರದ್ಧಾಕೇಂದ್ರವಾಗಿದೆ. ಶ್ರೀಲಂಕಾದ ಆನೆ ಸ್ಮಾರಕ ವಿಶ್ವಪ್ರಸಿದ್ಧವಾಗಿದೆ. ಸುಮಾರು ೫೦ ವರ್ಷಗಳ ಕಾಲ ರಾಜ್ಯದ ಆನೆ ಶಿಬಿರದ ಭಾಗವಾಗಿ, ದಸರಾ ಗಜಪಡೆಯ ನಾಯಕನಾಗಿ, ನಾನಾ ಕಾರ‍್ಯಾಚರಣೆಗಳ ಅಗ್ರೇಸರನಾಗಿ, ಅಂತಿಮ ಕ್ಷಣಗಳ ವರೆಗೂ ಹೋರಾಡಿ ಹಲವರ ಪ್ರಾಣ ಉಳಿಸಿದ ಅರ್ಜುನನ ಸಾಹಸ ಗಾಥೆ ನಮ್ಮ ಮುಂದಿನ ಪೀಳಿಗೆಯ ವರಿಗೂ ತಿಳಿಯಬೇಕಾಗಿದೆ. ಇದಕ್ಕಾಗಿ ಆತನ ವೀರ ಗಾಥೆಗೆ ತಕ್ಕುದಾದ ಸ್ಮಾರಕ ರಚನೆಯಾಗಬೇಕು. ಆತನ ಸಾವಿನ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಆತನ ಬಲಿದಾನಕ್ಕೂ ನ್ಯಾಯ ಸಿಗಬೇಕು.
ಇದನ್ನೂ ಓದಿ: Lokesh Kayarga Column: ಬೆಂಗಳೂರು ಮಳೆನಾಡೆಂಬ ವಿವೇಕ ನಮಗಿರಲಿ