ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ವಿರುದ್ಧ ಎಫ್ ಐಆರ್ (FIR) ದಾಖಲಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Channapatn bypoll) ಪ್ರಚಾರದ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ನೀಡಿದ್ದ ಹೇಳಿಕೆ ಸಂಬಂಧ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. “ಸಚಿವ ಜಮೀರ್ ಅಹ್ಮದ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ. ಕರಿಯ ಕುಮಾರಸ್ವಾಮಿ ಎಂದು ವರ್ಣಭೇದ ಪ್ರದರ್ಶಿಸಿ ಅವಮಾನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ವಕೀಲ ಮಹೇಶ್ ದೂರು ನೀಡಿದ್ದು, ಹೊಸಕೋಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜಮೀರ್ ಅಹ್ಮದ್ ಕ್ಷಮೆಯಾಚನೆ
ಚನ್ನಪಟ್ಟಣ ಚುನಾವಣೆಯ ಪ್ರಚಾರದ ವೇಳೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಕ್ಷಮೆಯಾಚನೆ ಮಾಡಿದ್ದರು. ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು.
ನಾನು ಮೊದಲಿನಿಂದಲೂ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತಿದ್ದೆ. ಅವರು ನನ್ನನ್ನ ಕುಳ್ಳ ಎನ್ನುತ್ತಿದ್ದರು. ನಾನು ಈ ರೀತಿ ಕರೆಯುತ್ತಿರುವುದು ಇಂದು ನಿನ್ನೆಯದಲ್ಲ. ಬಹಳ ವರ್ಷಗಳ ಹಿಂದೆ ನಾವು ಅಷ್ಟೊಂದು ಅನ್ಯೋನ್ಯವಾಗಿ ಇದ್ದೆವು. ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ವಿಧಾನಸಭೆ (Channapatna Bypoll) ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಜಮೀರ್ ಅಹ್ಮದ್ ಅವರು ಎಚ್ಡಿಕೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಜಮೀರ್ ಅಹ್ಮದ್ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಭಾಷಣದಲ್ಲಿ ಎಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್” ಎಂದು ಉರ್ದುವಿನಲ್ಲಿ ಹೇಳಿದ್ದರು.
ಇದನ್ನೂ ಓದಿ: Zameer ahmed: ಎಚ್ಡಿಕೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಕೋರಿದ ಜಮೀರ್ ಅಹ್ಮದ್