Thursday, 14th November 2024

Kharge v/s Yogi: ಮುಸ್ಲಿಮರು ಹಚ್ಚಿದ್ದ ಬೆಂಕಿಗೆ ಖರ್ಗೆ ತಾಯಿ ಬಲಿ…ಅವರು ಇದೀಗ ಮರೆತಿದ್ದಾರೆ; ಯೋಗಿ ಟಾಂಗ್‌

yogi adityanath

ಮುಂಬೈ: ದೇಶಾದ್ಯಂತ ವಿಧಾನಸಭೆ ಚುನಾವಣೆ, ಬೈ ಎಲೆಕ್ಷನ್‌ ಕಾವು ಜೋರಾಗಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ನಡುವಿನ ವಾಕ್ಸಮರ(Kharge v/s Yogi) ತಾರಕ್ಕೇರಿದೆ. ತಮ್ಮನ್ನು ಭಯೋತ್ಪಾದಕಾ ಎಂದು ಕರೆದಿದ್ದ ಖರ್ಗೆಯವರಿಗೆ ತಿರುಗೇಟು ನೀಡಿರುವ ಯೋಗಿ, ಓಲೈಕೆಗೆ ಬಿದ್ದು ಮುಸ್ಲಿಮರ ಅಗ್ನಿಜ್ವಾಲೆಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ಮರೆತೀರಾ ಎಂದು ಖಡಕ್‌ ಆಗಿ ಪ್ರಶ್ನೆ ಎತ್ತಿದ್ದಾರೆ.

ಮಹಾರಾಷ್ಟ್ರದ ಅಚಲಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ತುಷ್ಟೀಕರಣ ನೀತಿ ಮೊದಲು. ನಾನು ಖರ್ಗೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಯೋಗಿಗೆ ದೇಶವು ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು. ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಮೊದಲು ಎಂದು ಹೇಳಿದರು.

ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿತ್ತು. ಇದೇ ಘಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಈ ಪರಿಣಾಮ ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದಾರೆ. ಆದರೆ ಖರ್ಗೆಯವರು ಇದನ್ನು ಹೇಳದೆ ಮೌನವಾಗಿದ್ದಾರೆ. ಏಕೆಂದರೆ ಒಂದು ವೇಳೆ ಹೇಳಿದರೆ ಮುಸ್ಲಿಂ ಮತಗಳು ಕಡಿಮೆಯಾಗುತ್ತವೆ ಎಂದು ಅವರಿಗೆ ತಿಳಿದಿದೆ. ವೋಟ್‌‌ ಬ್ಯಾಂಕ್‌ಗಾಗಿ ಕುಟುಂಬದವರ ತ್ಯಾಗವನ್ನೂ ಖರ್ಗೆಯವರು ಮರೆತಿದ್ದಾರೆ ಎಂದು ಸಿಎಂ ಯೋಗಿ, ಮಲ್ಲಿಕಾರ್ಜುನ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: Modi v/s Kharge: ಬಿಜೆಪಿಯ ʻಬಿʼ ಅಂದ್ರೆ ದ್ರೋಹ ಎಂದರ್ಥ; ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು

ಇದಕ್ಕೂ ಮೊದಲು ಮಲ್ಲಿಕಾರ್ಜುನ ಖರ್ಗೆ ಜಾರ್ಖಂಡ್‌ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಸಂತರ ಬಗ್ಗೆ ಮಾತನಾಡಿದ್ದು, ಈಗ ಅನೇಕ ಸಾಧುಗಳು ರಾಜಕಾರಣಿಗಳಾಗಿದ್ದಾರೆ. ಅವರು ಕೇಸರಿ ಬಟ್ಟೆಗಳನ್ನು ಧರಿಸಿ ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.