Monday, 25th November 2024

Swiggy IPO: ಸ್ವಿಗ್ಗಿಯ 500 ಉದ್ಯೋಗಿಗಳಿಗೆ ಕೋಟ್ಯಧಿಪತಿಯಾಗುವ ಸುವರ್ಣಾವಕಾಶ!

Swiggy

ಬೆಂಗಳೂರು: ಬೆಂಗಳೂರು ಮೂಲದ ಆನ್‌ಲೈನ್‌ ಫುಡ್‌ ಡೆಲಿವರಿ ಕಂಪನಿ ಸ್ವಿಗ್ಗಿಯ 500 ಕ್ಕೂ ಹೆಚ್ಚು ಉದ್ಯೋಗಿಗಳು (Swiggy IPO) ಕೋಟ್ಯಧಿಪತಿಗಳಾಗುವ ಸಂಭ್ರಮದ ನಿರೀಕ್ಷೆಯಲ್ಲಿದ್ದಾರೆ! ಇದಕ್ಕೆ ಕಾರಣವೂ ಇದೆ.
ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಸ್ವಿಗ್ಗಿ ತನ್ನ ಉದ್ಯೋಗಿಗಳಿಗೆ ಎಂಪ್ಲಾಯೀ ಸ್ಟಾಕ್‌ ಓನರ್‌ಶಿಪ್‌ ಪ್ಲಾನ್‌ (Employee stock ownership plan) ಅಡಿಯಲ್ಲಿ ಷೇರುಗಳನ್ನು ವಿತರಿಸುತ್ತಿದೆ. ಇದರ ಪರಿಣಾಮ 500ಕ್ಕೂ ಹೆಚ್ಚು ಉದ್ಯೋಗಿಗಳು ಶೀಘ್ರದಲ್ಲಿಯೇ ಕೋಟ್ಯಧಿಪತಿಗಳಾಗುವ ನಿರೀಕ್ಷೆ ಇದೆ. ಈಗಾಗಲೇ ಸ್ವಿಗ್ಗಿಯು 546 ಕೋಟಿ ರೂ. ಮೌಲ್ಯದ ಷೇರುಗಳನ್ನು ಇಎಸ್‌ಒಪಿ ಅಡಿಯಲ್ಲಿ ಉದ್ಯೋಗಿಗಳಿಗೆ ವಿತರಿಸಿದೆ.

ಭಾರತೀಯ ಸ್ಟಾರ್ಟಪ್‌ ವಲಯದಲ್ಲಿಯೇ ಇದು ಅತಿ ದೊಡ್ಡ ಸಂಪತ್ತಿನ ಸೃಷ್ಟಿಯ ಘಟನೆ ಎನ್ನಿಸಲಿದೆ. ಸ್ವಿಗ್ಗಿಯ 5,000ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಸ್ವಿಗ್ಗಿಯ ಐಪಿಒ ಗಾತ್ರ 11,327 ಕೋಟಿ ರೂ.ಗಳಾಗಿದೆ. ಐಪಿಒದಲ್ಲಿ ಪ್ರತಿ ಷೇರಿನ ದರ 371-390 ರೂ.ಗಳಾಗಿದೆ. ಸ್ವಿಗ್ಗಿ 9,000 ಕೋಟಿ ರೂ. ಮೌಲ್ಯದ ಎಂಪ್ಲಾಯೀ ಸ್ಟಾಕ್‌ ಓನರ್ಶಿಪ್‌ ಪ್ಲಾನ್‌ ಮಾಡಿರುವುದು ಅತ್ಯಂತ ವಿಶೇಷ. 2019ರಲ್ಲಿ ಪೇಟಿಎಂ ಬಳಿಕ ಅತಿ ದೊಡ್ಡ ಟೆಕ್ನಾಲಜಿ ಕಂಪನಿಯ ಐಪಿಒ ಇದಾಗಿದೆ.

ಸ್ವಿಗ್ಗಿಯ ಸ್ಥಾಪಕರು, ಸಿಇಒ ಹಾಗೂ ಇತರ ಪ್ರಮುಖ ಹುದ್ದೆಯಲ್ಲಿ ಇರುವವರು ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ತಮ್ಮದಾಗಿಸಲಿದ್ದಾರೆ. ದುಡ್ಡಿನ ಹೊಳೆಯೇ ಅವರ ಕಡೆಗೆ ಹರಿಯಲಿದೆ. ಸ್ವಿಗ್ಗಿಯ ಸಹ ಸಂಸ್ಥಾಪಕ ಶ್ರೀಹರ್ಷ ಮಜೆಟಿ ಅವರು 200 ದಶಲಕ್ಷ ಡಾಲರ್‌ ( ಸುಮಾರು 1,660 ಕೋಟಿ ರೂ.) ಇನ್‌ಸ್ಟಾಮಾರ್ಟ್‌ ಸಿಇಒ ಅಮಿತೇಶ್‌ ಜಾ ಅವರು 13.3 ದಶಲಕ್ಷ ಡಾಲರ್‌ (ಸುಮಾರು 110 ಕೋಟಿ ರೂ.) ಮೌಲ್ಯದ ಷೇರುಗಳನ್ನು ಪಡೆಯಲಿದ್ದಾರೆ. ಸ್ವಿಗ್ಗಿಯ ಸ್ಥಾಪಕರು ಮತ್ತು ಟಾಪ್‌ ಮ್ಯಾನೇಜ್‌ಮೆಂಟ್‌ನಲ್ಲಿ ಇರುವವರಿಗೆ 2,600 ಕೋಟಿ ರೂ. ಷೇರುಗಳು ಮಂಜೂರಾಗಲಿದೆ. ‌

420 ರೂ.ಗೆ ಸ್ವಿಗ್ಗಿಯ ಷೇರು ಲಿಸ್ಟ್:

ಸ್ವಿಗ್ಗಿಯ ಷೇರುಗಳು ನವೆಂಬರ್‌ 13ರಂದು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿದ್ದು, ಪ್ರತಿ ಷೇರಿನ ದರ 420 ರೂ.ಗೆ ಲಭ್ಯವಿದೆ. ಐಪಿಒ ದರ 390 ರೂ.ಗಳಾಗಿತ್ತು. ಇದರೊಂದಿಗೆ ಗ್ರೇ ಮಾರ್ಕೆಟ್‌ನ ನಿರೀಕ್ಷೆಯನ್ನೂ ಮೀರಿ ಸ್ವಿಗ್ಗಿ ಪ್ರಬಲವಾಗಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಐಪಿಒ ದರಕ್ಕಿಂತ 7.69% ಹೆಚ್ಚಿನ ದರದಲ್ಲಿ ಲಿಸ್ಟ್‌ ಆಗಿದೆ.

ಏನಿದು ಇಎಸ್‌ಒಪಿ?

ಇಎಸ್‌ಒಪಿ ಅಥವಾ ಎಂಪ್ಲಾಯಿ ಸ್ಟಾಕ್‌ ಓನರ್‌ಶಿಪ್‌ ಪ್ಲಾನ್‌ ಎಂದರೆ ಕಂಪನಿಯು ತನ್ನ ಉದ್ಯೋಗಿಗಳಿಗೆ ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಅಥವಾ ಅಲ್ಪ ದರಕ್ಕೆ ನೀಡುವ ಷೇರುಗಳು. ಇಎಸ್‌ಒಪಿಯಿಂದ ಕಂಪನಿ ಮತ್ತು ಉದ್ಯೋಗಿಗಳಿಗೆ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಕಂಪನಿಯ ಮಾಲಿಕತ್ವದಲ್ಲಿ ಪಾಲು ಸಿಗುತ್ತದೆ. ಜತೆಗೆ ಕಂಪನಿ ಲಾಭ ಗಳಿಸಿದಾಗ, ಕಂಪನಿಯ ಷೇರುಗಳ ದರ ಏರಿದಾಗ ಲಾಭವಾಗುತ್ತದೆ. ಆದರೆ ಒಂದು ವೇಳೆ ಕಂಪನಿ ನಷ್ಟಕ್ಕೀಡಾದರೆ ಉದ್ಯೋಗಿಗಳು ಪಡೆಯುವ ಷೇರಿನ ಮೌಲ್ಯವೂ ಕುಸಿಯುತ್ತದೆ. ಈ ರಿಸ್ಕ್‌ ಇರುತ್ತದೆ. ಕಂಪನಿಗಳಿಗೆ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಇಎಸ್‌ಒಪಿ ಸಹಕಾರಿಯಾಗುತ್ತದೆ. ಉದ್ಯೋಗಿಗಳು ಇಎಸ್‌ಒಪಿ ಅಡಿಯಲ್ಲಿ ಪಡೆಯುವ ಷೇರುಗಳನ್ನು ನಿರ್ದಿಷ್ಟ ಅವಧಿಯ ಬಳಿಕ ಮಾರಾಟ ಮಾಡಿ ಹಣ ಗಳಿಸಬಹುದು.

ಇಎಸ್‌ಒಪಿ ಟ್ರೆಂಡ್‌ ಹೇಗಿದೆ?

2021ರಲ್ಲಿ ಪೇಟಿಎಂ ಐಒಇ ಸಂದರ್ಭ ಸುಮಾರು 350 ಉದ್ಯೋಗಿಗಳು ಷೇರುಗಳನ್ನು ಪಡೆದು ಕೋಟ್ಯಧಿಪತಿಗಳಾಗಿದ್ದರು. ಈ ವರ್ಷ ವಾಟ್‌ಫಿಕ್ಸ್‌ ಕಂಪನಿಯು ಇಎಸ್‌ಒಪಿ ಮೂಲಕ ಉದ್ಯೋಗಿಗಳಿಗೆ 487 ಕೋಟಿ ರೂ.ಗಳನ್ನು ವಿತರಿಸಿದೆ. ಅರ್ಬನ್‌ ಕಂಪನಿಯು 203 ಕೋಟಿ ರೈಊ, ಮೀಶೋ 200 ಕೋಟಿ ರೂ, ಪಾಕೆಟ್‌ ಎಫ್‌ಎಂ 70 ಕೋಟಿ ರೂ. ಷೇರು ಸಂಪತ್ತನ್ನು ಉದ್ಯೋಗಿಗಳಿಗೆ ವಿತರಿಸಿದೆ. 2023ರಲ್ಲಿ ಫ್ಲಿಪ್‌ ಕಾರ್ಟ್‌ ತನ್ನ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ 700 ದಶಲಕ್ಷ ಡಾಲರ್‌ ಮೌಲ್ಯದ ಷೇರುಗಳನ್ನು ವಿತರಿಸಿತ್ತು.

ಇನ್ಫೋಸಿಸ್‌ ಮುಂತಾದ ಐಟಿ ಕಂಪನಿಗಳಲ್ಲಿ ಇಎಸ್‌ಒಪಿ ಮಂಜೂರು ಟ್ರೆಂಡ್‌ ಆಗಿತ್ತು. ಹೀಗಿದ್ದರೂ, ಸಾಮೂಹಿಕವಾಗಿ ಉದ್ಯೋಗಿಗಳಿಗೆ ಷೇರುಗಳನ್ನು ಕೊಟ್ಟು ಅವರನ್ನು ಕೋಟ್ಯಧಿಪತಿಗಳನ್ನಾಗಿಸುವ ಕೆಲಸಕ್ಕೆ ಸ್ವಿಗ್ಗಿ ಮುಂದಾಗಿರುವುದು ಗಮನಾರ್ಹ. ಇದು ಹಲವು ಆಯಾಮಗಳಲ್ಲಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡುತ್ತದೆ. ಇದರಿಂದ ರಿಯಲ್‌ ಎಸ್ಟೇಟ್‌ ಮತ್ತು ಇತರ ಅಸೆಟ್‌ಗಳಲ್ಲಿ ಹೂಡಿಕೆ ಹೆಚ್ಚಬಹುದು.

ಈ ಸುದ್ದಿಯನ್ನೂ ಓದಿ: Sovereign Gold Bond: ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಭ ಡಬಲ್