Wednesday, 18th December 2024

Laapataa Ladies: ಆಸ್ಕರ್‌ಗಾಗಿ ʻಲಾಪತಾ ಲೇಡಿಸ್‌ʼ ಚಿತ್ರದ ಟೈಟಲ್‌ ಚೇಂಜ್‌; ಪೋಸ್ಟರ್‌ ರಿಲೀಸ್‌

Laapataa Ladies

ಮುಂಬೈ: ಸರಳ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನಗೆದ್ದ ಬಾಲಿವುಡ್‌ನ ಲಾಪತಾ ಲೇಡಿಸ್‌(Laapataa Ladies) ಸಿನಿಮಾ ಆಸ್ಕರ್‌ಗಾಗಿ ಮರುನಾಮಕರಣಗೊಂಡಿದೆ. ಈಗಾಗಲೇ ಈ ಸಿನಿಮಾ 2025ನೇ ಸಾಲಿನ ಆಸ್ಕರ್‌ ಪ್ರಶಸ್ತಿ(Oscars 2025)ಗಾಗಿ ಅಧಿಕೃತವಾಗಿ ಪ್ರವೇಶಾತಿ ಪಡೆದಿದ್ದು, ಇದೀಗ ಚಿತ್ರವು ʼಲಾಸ್ಟ್‌ ಲೇಡಿಸ್‌ʼ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮರುನಾಮಕರಣಗೊಂಡಿರುವ ಸುದ್ದಿ ಹೊರ ಬಿದ್ದಿದೆ.

ಈ ಬಗ್ಗೆ ಸ್ವತಃ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಇಡೀ ಪೋಸ್ಟರ್‌ ʼಲಾಸ್ಟ್‌ ಲೇಡಿಸ್‌ʼ ಜಗತ್ತಿನೊಳಗೆ ಕರೆದೊಯ್ಯುತ್ತದೆ. ಚಿತ್ರ ತಂಡವು “ಸಮ್‌ ಟೈಮ್ಸ್‌ ಯು ಹ್ಯಾವ್‌ ಟು ಲಾಸ್‌ ಯುವರ್‌ ವೇ ಟು ಫೈಂಡ್‌ ಯುವರ್ಸೆಲ್ಫ್‌ ” (ಕೆಲವೊಮ್ಮೆ ನಮ್ಮನ್ನು ನಾವು ಕಂಡುಕೊಳ್ಳಲು-ಹುಡುಕಿಕೊಳ್ಳಲು ನಮ್ಮ ದಾರಿಯನ್ನು ಕಳೆದುಕೊಳ್ಳಬೇಕಾಗುತ್ತದೆ) ಎಂಬ ಸಾಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ನೊಂದಿಗೆ ಹಂಚಿಕೊಂಡಿದೆ.

ಪೋಸ್ಟರ್‌ ಕ್ಯಪ್ಶನ್‌ನಲ್ಲಿ “ನಿಮ್ಮ ಕಾಯುವಿಕೆಗೆ ತೆರೆ ಎಳೆಯುತ್ತಿದ್ದೇವೆ. ಲಾಸ್ಟ್‌ ಲೇಡಿಸ್‌ ನ ಅಧಿಕೃತ ಪೋಸ್ಟರ್‌ ಅನ್ನು ಪ್ರಸ್ತುತಪಡಿಸುತ್ತಿದ್ದೇವೆ. ಅದ್ಭುತ ವಿನ್ಯಾಸದೊಂದಿಗೆ ನಮ್ಮ ಕತೆಗೆ ಜೀವ ತುಂಬಿದ ಜಹನ್‌ ಸಿಂಗ್‌ ಭಕ್ಷಿ ಮತ್ತು ಪ್ರಶಾಂತ್‌ ಸಿ ಅವರಿಗೆ ತುಂಬಾ ಧನ್ಯವಾದಗಳು” ಎಂದು ಚಿತ್ರತಂಡವು ಪೋಸ್ಟ್‌ ಮಾಡಿರುವ ಸಾಲುಗಳನ್ನು ಗಮನಿಸಬಹುದು.

ಆಮಿರ್‌ ಖಾನ್‌ ಪ್ರೊಡಕ್ಷನ್‌ನಲ್ಲಿ ಕಿರಣ್‌ ರಾವ್‌ ನಿರ್ದೇಶನದಲ್ಲಿ ಮೂಡಿಬಂದ ಲಾಪತಾ ಲೇಡೀಸ್‌ ಚಿತ್ರ ಮಾ.1, 2024ರಲ್ಲಿ ತೆರೆಕಂಡಿತ್ತು. ನಿತಾಂಶಿ ಗೋಯೆಲ್‌, ಪ್ರತಿಭಾ ರಂತ, ಸ್ಪರ್ಶ್‌ ಶ್ರೀ ವಾಸ್ತವ, ರವಿ ಕಿಶನ್‌, ಛಾಯಾ ಕದಂ ಮತ್ತು ಕಿರಣ್‌ ರಾವ್‌ ತಾರಾಗಣ ಇರುವ ಈ ಚಿತ್ರ  ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು

ಈ ಸುದ್ದಿಯನ್ನೂ ಓದಿ: Oscars 2025: ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಬಾಲಿವುಡ್‌ನ ʼಲಾಪತಾ ಲೇಡೀಸ್‌ʼ

97ನೇ ಆಸ್ಕರ್‌ ಪ್ರಶಸ್ತಿಗಾಗಿ ಭಾರತದಿಂದ ʼಲಾಪತಾ ಲೇಡೀಸ್‌ʼ ಸಿನಿಮಾ ಅಧಿಕೃತವಾಗಿ ಪ್ರವೇಶ ಪಡೆದಿದೆ” ಎಂದು ಫಿಲಂ ಫೆಡರೇಶನ್‌ ಆಫ್‌ ಇಂಡಿಯಾ ಘೋಷಿಸಿತ್ತು. 12 ಹಿಂದಿ, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳು ಸೇರಿ 29 ಸಿನಿಮಾಗಳು ರೇಸ್‌ನಲ್ಲಿದ್ದವು. ಈ ಪೈಕಿ ʼಲಾಪತಾ ಲೇಡೀಸ್‌ʼ ಆಯ್ಕೆಯಾಗಿದೆ. 13 ಸದಸ್ಯರನ್ನು ಒಳಗೊಂಡ ಸಮಿತಿ ಆಯ್ಕೆ ನಡೆಸಿದೆ.

ʼಲಪಾತಾ ಲೇಡೀಸ್ʼ ಚಿತ್ರವನ್ನು ಬಿಪ್ಲಬ್ ಗೋಸ್ವಾಮಿ ಅವರ ಕಥೆಯನ್ನು ಆಧರಿಸಿ ತಯಾರಿಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದಾರೆ. ಇದು ಕಳೆದ ವರ್ಷ ಪ್ರತಿಷ್ಠಿತ ಟೊರೊಂಟೊ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ (TIFF)ನಲ್ಲಿ ಪ್ರದರ್ಶನ ಕಂಡಿತ್ತು. ಈ ಚಿತ್ರವು ಮಾರ್ಚ್ 1ರಂದು ಭಾರತದಲ್ಲಿ ತೆರೆಕಂಡು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡು ಇನ್ನಷ್ಟು ಜನಪ್ರಿಯಗೊಂಡಿದೆ. ಸರಳ ಕಥಾ ಹಂದರದ ಈ ಸಿನಿಮಾದ ಮುಕುಟಕ್ಕೆ ಇದೀಗ ಮತ್ತೊಂದು ಗರಿ ಲಭಿಸಿದಂತಾಗಿದೆ.