ಕರಾಚಿ: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ(Champions Trophy) ಆತಿಥ್ಯದ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಇದೀಗ ಪಾಕಿಸ್ತಾನ ಸರ್ಕಾರ(Pakistan Government) ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು ಯಾವುದೇ ಕಾರಣಕ್ಕೂ ಪಂದ್ಯಾವಳಿಯನ್ನು ಪಾಕ್‌ನಿಂದ ಹೊರಗೆ ಸ್ಥಳಾಂತರಿಸದಂತೆ ನೋಡಿಕೊಳ್ಳಬೇಕಾಗಿ ಪಿಸಿಬಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ತನ್ನ ತಂಡವನ್ನು ಗಡಿಯಾಚೆಗೆ ಕಳುಹಿಸದಿರುವ ಭಾರತ ಸರ್ಕಾರದ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ತಿಳಿಸಿದೆ. ಆದಾಗ್ಯೂ, ಇಡೀ ಪಂದ್ಯಾವಳಿಯನ್ನು ತವರಿನಲ್ಲಿ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿರುವ ಪಾಕಿಸ್ತಾನವು ಸಂಪೂರ್ಣ ಟೂರ್ನಿಯನ್ನು ಪಾಕ್‌ನಲ್ಲಿಯೇ ನಡೆಸಬೇಕು ಎಂದು ಪಟ್ಟು ಹಿಡಿದಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ ಪಾಕಿಸ್ತಾನ ಸರ್ಕಾರವು ಒಂದೇ ಒಂದು ಪಂದ್ಯವನ್ನೂ ಕೂಡ ದೇಶದ ಹೊರಗೆ ನಡೆಸದಂತೆ ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎನ್ನಲಾಗಿದೆ. ʼಪಾಕಿಸ್ತಾನದಿಂದ ಯಾವುದೇ ಪಂದ್ಯವನ್ನು ಸ್ಥಳಾಂತರಿಸಬೇಡಿ ಎಂದು ನಮ್ಮ ಸರ್ಕಾರವು ನಮಗೆ ಹೇಳಿದೆ ಮತ್ತು ಸಮಯ ಬಂದಾಗ ಅದು ನಮ್ಮ ನಿಲುವು ಆಗಿರುತ್ತದೆ. ಇದೀಗ, ಐಸಿಸಿ ಭಾರತದ ನಿರ್ಧಾರದ ಬಗ್ಗೆ ನಮಗೆ ತಿಳಿಸಿದೆ. ನಾವು ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕುಗಳನ್ನು ಹೊಂದಿದ್ದೇವೆ. ಆದ್ದರಿಂದ ನಾವು ಪಾಕಿಸ್ತಾನದ ಹೊರಗೆ ಆಟಗಳನ್ನು ಸ್ಥಳಾಂತರಿಸಲು ಯಾವುದೇ ಮಾರ್ಗವಿಲ್ಲ” ಎಂದು ಪಿಸಿಬಿಯ ಹೆಸರು ಹೇಳದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ದಕ್ಷಿಣ ಆಫ್ರಿಕಾಗೆ ಶಿಫ್ಟ್? ಪಾಕಿಸ್ತಾನಕ್ಕೆ ಐಸಿಸಿ ವಾರ್ನಿಂಗ್!
ಪಾಕಿಸ್ತಾನದ ಮೂರು ತಾಣಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬಿಸಿಸಿಐ, ಐಸಿಸಿಗೆ ಕಳೆದ ಶುಕ್ರವಾರವೇ ಪತ್ರದ ಮೂಲಕ ತಿಳಿಸಿತ್ತು. ಆದರೆ ಭಾರತ ತಂಡ ಹಾಜರಾಗಲು ಯಾಕೆ ಸಾಧ್ಯವಿಲ್ಲ? ಎಂಬುದರ ಕುರಿತು ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರವನ್ನು ನೀಡುವಂತೆ ಐಸಿಸಿಗೆ ಪಿಸಿಬಿ ಪತ್ರ ಬರೆದಿದೆ.
ಇನ್ನೊಂದೆಡೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವಂತೆ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮನವಿ ಮಾಡಿದೆ ಎನ್ನಲಾಗಿದೆ. ಬಿಸಿಸಿಐ ನಿಲುವಿನಿಂದ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲು ಐಸಿಸಿ ಚಿಂತನೆ ನಡೆಸಿದೆ. ಐಸಿಸಿ ಒಂದು ವೇಳೆ ಟೂರ್ನಿಯ ಆತಿಥ್ಯವನ್ನು ಪಾಕ್‌ನಿಂದ ಕಸಿದುಕೊಂಡರೆ, ಅಂಥ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಗುಳಿಯುವುದರ ಜತೆಗೆ ಮುಂಬರುವ ಐಸಿಸಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟೂರ್ನಿಗಳಲ್ಲಿ ಭಾರತ ವಿರುದ್ಧ ಆಡುವುದಕ್ಕೆ ಪಾಕಿಸ್ತಾನ ನಿರಾಕರಿಸಲಿದೆ ಎಂದು ವರದಿಯಾಗಿದೆ. ಒಟ್ಟಾರೆ ಪಿಸಿಬಿ ಮತ್ತು ಬಿಸಿಸಿಐ ಕಿತ್ತಾಟದಿಂದ ಐಸಿಸಿ ತಲೆಕೆಡಿಸಿಕೊಳ್ಳುವಂತಾಗಿದೆ.