Sunday, 24th November 2024

IND vs AUS: ಮೊಹಮ್ಮದ್‌ ಶಮಿ ಅಲಭ್ಯತೆ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದ ಪಾಲ್‌ ಆಡಮ್ಸ್‌!

Mohammad Shami's absence major blow for India in Border-Gavaskar Trophy-Paul Adams

ನವದೆಹಲಿ: ಹಿರಿಯ ಸೀಮ್‌ ಬೌಲರ್‌ ಮೊಹಮ್ಮದ್‌ ಶಮಿ (Mohammed Shami) ಅಲಭ್ಯತೆ ಆಸ್ಟ್ರೇಲಿಯಾ ವಿರುದ್ಧ ಮುಂಬರುವ 2024-25ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೂರ್ನಿಯಲ್ಲಿ ಭಾರತ ತಂಡಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಪಾಲ್‌ ಆಡಮ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕಾಂಗರೂ ನಾಡಿನ ಬೌನ್ಸ್‌ ಹಾಗೂ ವೇಗದ ಕಂಡೀಷನ್ಸ್‌ನಲ್ಲಿ ಶಮಿ ಅವರ ಬೌಲಿಂಗ್‌ ತುಂಬಾ ಪರಿಣಾಮಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಶಮಿ ಆಡದೆ ಇರುವುದು ಭಾರತಕ್ಕೆ ಹಿನ್ನಡೆಯನ್ನು ತಂದುಕೊಡಲಿದೆ ಎಂದಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಗಾಯಕ್ಕೆ ತುತ್ತಾಗಿದ್ದ ಮೊಹಮ್ಮದ್‌ ಶಮಿ ಇದೀಗ ಸಂಪೂರ್ಣ ಫಿಟ್‌ ಇದ್ದು, ಬುಧವಾರ ರಣಜಿ ಟ್ರೋಫಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಮಧ್ಯ ಪ್ರದೇಶ ವಿರುದ್ಧ ಪಶ್ಚಿಮ ಬಂಗಾಳ ಪರ ಅವರು ಕಣಕ್ಕೆ ಇಳಿದಿದ್ದಾರೆ. ಅಂದ ಹಾಗೆ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಶಮಿಗೆ ಅವಕಾಶ ನೀಡಲಾಗುವುದೆ? ಅಥವಾ ಇಲ್ಲವೆ? ಎಂದು ಇನ್ನೂ ಯಾವುದೇ ಖಚಿತತೆ ಇಲ್ಲ.

ಮಾಧ್ಯಮ ಸಂವಾದಲ್ಲಿ ಮಾತನಾಡಿದ ಪಾಲ್‌ ಆಡಮ್ಸ್‌, “ಆಸ್ಟ್ರೇಲಿಯಾದಲ್ಲಿನ ಕಂಡೀಷನ್ಸ್‌ಗೆ ಅನುಗುಣವಾಗಿ ಟೆಸ್ಟ್‌ ಸರಣಿಗೆ ಮೊಹಮ್ಮದ್‌ ಶಮಿ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಆಸ್ಟ್ರೇಲಿಯಾದ ಪಿಚ್‌ಗಳು ಬೌನ್ಸ್‌ ಹಾಗೂ ವೇಗದಿಂದ ಕೂಡಿದೆ ಹಾಗಾಗಿ ಮೊಹಮ್ಮದ್‌ ಶಮಿ ತಂಡದಲ್ಲಿ ಆಡಿದ್ದರೆ, ಇದು ಭಾರತಕ್ಕೆ ತುಂಬಾ ನೆರವಾಗುತ್ತಿತ್ತು ಹಾಗೂ ಮೇಲುಗೈ ಸಾಧಿಸುತ್ತಿತ್ತು. ಆದರೆ, ಸಂಪೂರ್ಣ ಫಿಟ್‌ ಇಲ್ಲದ ಕಾರಣ ಅವರನ್ನು ಆಯ್ಕೆದಾರರು ಕೈ ಬಿಟ್ಟಿದ್ದಾರೆ,” ಎಂದು ಪಾಲ್‌ ಆಡಮ್ಸ್‌ ತಿಳಿಸಿದ್ದಾರೆ.

IND vs AUS: ಪರ್ತ್‌ ಟೆಸ್ಟ್‌ಗೆ ಬೌನ್ಸಿ ಪಿಚ್‌; ಎಚ್ಚರಿಕೆ ನೀಡಿದ ಕ್ಯುರೇಟರ್‌

ಬಾರ್ಡರ್-ಗವಾಸ್ಕರ್‌ ಟ್ರೋಫಿ ಶಮಿ ಮರಳುತ್ತಾರಾ?

2023ರ ಐಸಿಸಿ ಟಿ20ಐ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದ ಬಳಿಕ ಮೊಹಮ್ಮದ್‌ ಶಮಿ ಪಾದದ ಗಾಯದಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಗಾಯದಿಂದ ಗುಣಮುಖರಾಗಲು ಅಂದಿನಿಂದ ಇಲ್ಲಿಯವರೆಗೂ ಬರೋಬ್ಬರಿ ಒಂದು ವರ್ಷವನ್ನು ತೆಗೆದುಕೊಂಡಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಶಮಿ ಲಭ್ಯರಾಗಬಹುದೆಂದು ಹೇಳಲಾಗಿತ್ತು. ಆದರೆ, ಅವರು ಸಂಪೂರ್ಣ ಗುಣಮುಖರಾಗದ ಕಾರಣ ಕಿವೀಸ್‌ ಸರಣಿಗೆ ಅಲಭ್ಯರಾಗಿದ್ದರು.

ಏಕದಿನ ವಿಶ್ವಕಪ್‌ನಲ್ಲಿನ ಮೊಹಮ್ಮದ್‌ ಶಮಿ ಅವರ ಬೌಲಿಂಗ್‌ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಪಾಲ್‌ ಆಡಮ್ಸ್‌, ಶಮಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಹಾಗೂ ರವೀಂದ್ರ ಜಡೇಜಾ ಕೀ ಬೌಲರ್‌ಗಳಾಗಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs AUS: ʻಆಸೀಸ್‌ ವೇಗಿಗಳ ಎದುರು ಭಾರತದ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲ್ಲʼ-ಬ್ರಾಡ್‌ ಹೆಡ್ಡಿನ್‌ ವಾರ್ನಿಂಗ್‌

ಜಸ್‌ಪ್ರೀತ್‌ ಬುಮ್ರಾ ಮೇಲೆ ಒತ್ತಡ

“2023ರ ಏಕದಿನ ವಿಶ್ವಕಪ್‌ನಲ್ಲಿ ಶಮಿ ಏನು ಮಾಡಿದ್ದರು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಶಮಿ ಒಬ್ಬರೇ ತೆಗೆದುಕೊಂಡು ಹೋಗಿದ್ದರು. ವಿಶ್ವದ ಯಾವುದೇ ಕಂಡೀಷನ್ಸ್‌ನಲ್ಲಿ ಬೌಲ್‌ ಮಾಡಬಲ್ಲ ಸಾಮರ್ಥ್ಯ ಶಮಿಗಿದೆ. ಅವರ ಸೀಮ್‌ ಪಸಿಷನ್‌ ಮತ್ತು ಲೆನ್ತ್‌ ಅಸಾಧಾರಣವಾಗಿದೆ. ಇದೀಗ ಶಮಿ ಅನುಪಸ್ಥಿತಿಯಲ್ಲಿ ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ಹಾಗೂ ಇತರೆ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಈ ಸರಣಿಯಲ್ಲಿ ಆಲ್‌ರೌಂಡರ್‌ಗಳು ಹಾಗೂ ವಿಶೇಷವಾಗಿ ರವೀಂದ್ರ ಜಡೇಜಾ ಪ್ರಮುಖ ಪಾತ್ರವಹಿಸಲಿದ್ದಾರೆಂದು ನಾನು ನಂಬುತ್ತೇನೆ,” ಎಂದು ಪಾಲ್‌ ಆಡಮ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.