Sunday, 24th November 2024

Parthiv Patel: ಗುಜರಾತ್ ಟೈಟಾನ್ಸ್‌ಗೆ ಪಾರ್ಥಿವ್ ಪಟೇಲ್ ಬ್ಯಾಟಿಂಗ್‌ & ಸಹಾಯಕ ಕೋಚ್‌

ಗುಜರಾತ್‌: ಭಾರತ ತಂಡದ ಮಾಜಿ ವಿಕೆಟ್‌ಕೀಪರ್ ಕಮ್‌ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್(Parthiv Patel) ಮುಂಬರುವ ಐಪಿಎಲ್‌(IPL 2025) ಟೂರ್ನಿಯಲ್ಲಿ ಗುಜರಾತ್‌ ಟೈಟಾನ್ಸ್‌(Gujarat Titans) ತಂಡದ ಸಹಾಯಕ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಗುಜರಾತ್‌ನವರೇ ಆಗಿರುವ ಪಾರ್ಥಿವ್ ಇದೀಗ ತವರಿನ ತಂಡಕ್ಕೆ ಕೋಚಿಂಗ್‌ ಮಾಡಲು ಸಜ್ಜಾಗಿದ್ದಾರೆ.

ʼಗುಜರಾತ್ ಟೈಟಾನ್ಸ್ ತಂಡವು ಪಾರ್ಥಿವ್ ಪಟೇಲ್ ಅವರನ್ನು ಸಹಾಯಕ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿರುವುದನ್ನು ಘೋಷಿಸಲು ಸಂತೋಷವಾಗಿದೆ. ತೀಕ್ಷ್ಣವಾದ ಕ್ರಿಕೆಟ್ ಚಾತುರ್ಯ ಮತ್ತು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಪಾರ್ಥಿವ್, ಗುಜರಾತ್‌ ತಂಡದ ಕೋಚಿಂಗ್ ಬಳಗಕ್ಕೆ ಸೇರಿದ್ದು ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಅವರು ತಂಡವನ್ನು ಬಲಪಡಿಸುತ್ತಾರೆ ಮತ್ತು ಆಟಗಾರರ ಅಭಿವೃದ್ಧಿ ಮತ್ತು ಪ್ರದರ್ಶನಕ್ಕೆ ಕೊಡುಗೆ ನೀಡುತ್ತಾರೆʼ ಎಂದು ಗುಜರಾತ್ ಟೈಟಾನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

39 ವರ್ಷದ ಪಾರ್ಥಿವ್ 2020 ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪಾರ್ಥಿವ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 194 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾರ್ಥಿವ್ ಪಟೇಲ್ 11 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 67 ಅರ್ಧಶತಕಗಳು ಸೇರಿವೆ. ಹಾಗೆಯೇ 486 ಕ್ಯಾಚ್ ಹಾಗೂ 77 ಸ್ಟಂಪಿಂಗ್ ಸಾಧನೆ ಮಾಡಿದ್ದಾರೆ. 2016-17ನೇ ಸಾಲಿನಲ್ಲಿ ಗುಜರಾತ್‌ಗೆ ಚೊಚ್ಚಲ ರಣಜಿ ಟ್ರೋಫಿ ಜಯದ ಕಾಣಿಕೆ ನೀಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು.

ಇದನ್ನೂ ಓದಿ IPL 2025: ಕೆಕೆಆರ್‌ಗೆ ರಿಂಕು ಸಿಂಗ್‌ ನಾಯಕ?

2002ರಲ್ಲಿಯೇ ಟೆಸ್ಟ್ ಪದಾರ್ಪಣೆ ಮಾಡಿದ್ದ ಪಾರ್ಥಿವ್ ಪಟೇಲ್ ವಿಕೆಟ್‌ಕೀಪಿಂಗ್ ಮತ್ತು ಎಡಗೈ ಬ್ಯಾಟಿಂಗ್‌ನೊಂದಿಗೆ ಗಮನ ಸೆಳೆದಿದ್ದರು. ಆದರೆ, ಮಹೇಂದ್ರಸಿಂಗ್ ಧೋನಿಯ ಭಾರತ ತಂಡದ ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚತೊಡಗಿದ ನಂತರ ಪಾರ್ಥಿವ್ ಸೇರಿದಂತೆ ಕೆಲವು ವಿಕೆಟ್‌ಕೀಪರ್‌ಗಳು ಅವಕಾಶ ಪಡೆಯುವಲ್ಲಿ ಹಿಂದೆ ಬಿದ್ದರು.

ಎರಡನೇ ವಿಕೆಟ್‌ಕೀಪರ್ ಆಗಿ ಹಲವು ಸರಣಿಗಳಲ್ಲಿ ಪಾರ್ಥಿವ್ ಆಡಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಮಿಂಚಿದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಆರ್‌ಸಿಬಿ ತಂಡಗಳಲ್ಲಿ ಆಡಿದ್ದರು. ನಿವೃತ್ತಿ ಬಳಿಕ ಕಾಮೆಂಟರಿ ಕ್ಷೇತ್ರದಲ್ಲಿ ಪಾರ್ಥಿವ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.