ನವದೆಹಲಿ: ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿ( Border- Gavaskar Test series)ಯಲ್ಲಿ ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲೇ 4-0 ಅಂತರದಿಂದ ಸೋಲಿಸುತ್ತೇವೆ ಎಂಬ ಟೀಮ್ ಇಂಡಿಯಾ ಆಟಗಾರರು ಕನಸಿನಲ್ಲೂ ಲೆಕ್ಕಾಚಾರ ಹಾಕಬಾರದು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂರ್ಜೇಕರ್ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 22 ರಂದು ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ತಂಡವನ್ನು ರೋಹಿತ್ ಶರ್ಮಾ ಪಡೆ 4-0 ಅಂತರದಲ್ಲಿ ಮಣಿಸಿದರೆ ನೇರವಾಗಿ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬಹುದು, ಆದರೆ ಇದು ಕಠಿಣ ಸಂಗತಿಯಾಗಿದೆ.
ಈ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂರ್ಜೇಕರ್, ಟೀಮ್ ಇಂಡಿಯಾ ಆಟಗಾರರಿಗೆ ಟೆಸ್ಟ್ ಸರಣಿಯಲ್ಲಿ ಒಂದು ಬಾರಿ ಒಂದು ಪಂದ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ಪರ್ತ್ ಹಾಗೂ ಅಡಿಲೇಡ್ನಲ್ಲಿ ನಡೆಯುವ ಆರಂಭಿಕ ಪಂದ್ಯಗಳು ಭಾರತದ ಆಟಗಾರರಿಗೆ ತುಂಬಾ ಸವಾಲುದಾಯಕವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಹಿಂದಿನ ಪಂದ್ಯಗಳ ವೈಫಲ್ಯ ಮರೆತು ದೊಡ್ಡ ಮೊತ್ತ ಕಲೆಹಾಕುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
IND vs AUS: ಮೊಹಮ್ಮದ್ ಶಮಿ ಅಲಭ್ಯತೆ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದ ಪಾಲ್ ಆಡಮ್ಸ್!
4-0 ಅಂತರದಲ್ಲಿ ಮಣಿಸುವುದು ಕನಸಿನ ಮಾತು: ಮಾಂರ್ಜೇಕರ್
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಕುರಿತು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಾಂರ್ಜೇಕರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
“ಆಸ್ಟ್ರೇಲಿಯಾವನ್ನು ಅದರ ತವರು ನೆಲದಲ್ಲಿ 4-0 ಅಂತರದಲ್ಲಿ ಮಣಿಸುವುದು ನಿಜಕ್ಕೂ ಕನಸಿನ ಮಾತು. ಆದ್ದರಿಂದ ಟೀಮ್ ಇಂಡಿಯಾ ಆಟಗಾರರು ಒಂದು ಬಾರಿಗೆ ಒಂದೊಂದು ಹೆಜ್ಜೆಯನ್ನು ಇಡುತ್ತಾ ಸಾಗಬೇಕು. ಆರಂಭಿಕ ಎರಡು ಪಂದ್ಯಗಳು ಆಯೋಜನೆಗೊಂಡಿರುವ ಪರ್ತ್ ಹಾಗೂ ಅಡಿಲೇಡ್ ಪಿಚ್ಗಳು ಹೆಚ್ಚು ಬೌನ್ಸ್ ಹಾಗೂ ತಿರುವು ಪಡೆಯಲಿದ್ದು, ಭಾರತದ ಆಟಗಾರರಿಗೆ ಕಠಿಣ ಸವಾಲಾಗಿದೆ. ಹಾಗಾಗಿ ಈ ಸರಣಿಯಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಪೈಕಿ ಒಬ್ಬರು ದೊಡ್ಡ ಮೊತ್ತ ಕಲೆಹಾಕುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಏಕೆಂದರೆ ಭಾರತ ಕಳೆದ ಟೆಸ್ಟ್ ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
IND vs AUS: ಪರ್ತ್ ಟೆಸ್ಟ್ಗೆ ಬೌನ್ಸಿ ಪಿಚ್; ಎಚ್ಚರಿಕೆ ನೀಡಿದ ಕ್ಯುರೇಟರ್
ಬೌಲಿಂಗ್ ಪಡೆ ಬಲಿಷ್ಠವಾಗಿದೆ
“ಕಳೆದ ಕೆಲವು ವರ್ಷಗಳಿಂದಲೂ ಟೀಮ್ ಇಂಡಿಯಾ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆ. ಹಿರಿಯ ಸೀಮ್ ಬೌಲರ್ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲೂ ಇತರ ಬೌಲರ್ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ,” ಎಂದು ಸಂಜಯ್ ಮಂರ್ಜೇಕರ್ ಹೇಳಿದ್ದಾರೆ.
ಕಳಪೆ ಫಾರ್ಮ್ನಲ್ಲಿರುವ ರೋಹಿತ್-ಕೊಹ್ಲಿ
2024ರಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಹಲವು ಮಾಜಿ ಕ್ರಿಕೆಟಿಗರ ಟೀಕೆಗೆ ಒಳಗಾಗಿದ್ದಾರೆ. ಹಿಟ್ಮ್ಯಾನ್ ತಾನು ಆಡಿರುವ 21 ಇನಿಂಗ್ಸ್ಗಳಿಂದ ಎರಡು ಶತಕ ಹಾಗೂ ಎರಡು ಅರ್ಧಶತಕಗಳ ನೆರವಿನಿಂದ 29.40ರ ಸರಾಸರಿಯಲ್ಲಿ 588 ರನ್ ಗಳಿಸಿದ್ದಾರೆ. ಆದರೆ ತವರು ಅಂಗಳದಲ್ಲಿ ಐದು ಪಂದ್ಯಗಳಿಂದ 13.30ರ ಸರಾಸರಿಯಲ್ಲಿ 133 ರನ್ ಗಳಿಸಿದ್ದು, ಕೇವಲ ಒಂದು ಅರ್ಧಶತಕ ಸಿಡಿಸಿದ್ದಾರೆ. ಇನ್ನು ಕಿಂಗ್ ಕೊಹ್ಲಿ ಈ ವರ್ಷ ಆಡಿರುವ ಆರು ಪಂದ್ಯಗಳಿಂದ 22.72ರ ಸರಾಸರಿಯಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ 250 ರನ್ ಗಳಿಸಿದ್ದಾರೆ.
IND vs AUS: ʻಆಸೀಸ್ ವೇಗಿಗಳ ಎದುರು ಭಾರತದ ಬ್ಯಾಟ್ಸ್ಮನ್ಗಳ ಆಟ ನಡೆಯಲ್ಲʼ-ಬ್ರಾಡ್ ಹೆಡ್ಡಿನ್ ವಾರ್ನಿಂಗ್
ಆಸ್ಟ್ರೇಲಿಯಾದಲ್ಲಿ ಕಿಂಗ್ ಕೊಹ್ಲಿ ವೈಭವ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದು, ಆಡಿರುವ 13 ಪಂದ್ಯಗಳಿಂದ 54.08ರ ಸರಾಸರಿಯಲ್ಲಿ 1,352 ರನ್ ಗಳಿಸಿದ್ದಾರೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ತಲುಪಬೇಕಾದರೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ಗಳ ಸುರಿಮಳೆಯೇ ಸುರಿಯಬೇಕು. ಇದೇ ವೇಳೆ ಆಸ್ಟ್ರೇಲಿಯಾ ನೆಲದಲ್ಲಿ ಕಳೆದೆರಡು ಟೆಸ್ಟ್ ಸರಣಿಗಳಲ್ಲಿ ಜಯಭೇರಿ ಬಾರಿಸಿರುವ ಭಾರತ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದರೆ, ತಿರುಗೇಟು ನೀಡಲು ಆಸ್ಟ್ರೇಲಿಯಾ ಎದುರು ನೋಡುತ್ತಿದೆ.