Thursday, 14th November 2024

Karnataka Bypoll: ಉಪ ಚುನಾವಣೆ; ರಾಜ್ಯದ 3 ಕ್ಷೇತ್ರಗಳಲ್ಲಿ ಶೇ. 81.84 ಮತದಾನ ದಾಖಲು, ಚನ್ನಪಟ್ಟಣದಲ್ಲೇ ಅತಿ ಹೆಚ್ಚು!

Karnataka Bypoll

ಬೆಂಗಳೂರು: ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಸಂಜೆ 6 ಗಂಟೆ ವೇಳೆಗೆ ಮೂರು ಕ್ಷೇತ್ರಗಳಲ್ಲಿ ಒಟ್ಟು ಶೇ. ಶೇ. 81.84 ಮತದಾನ ಆಗಿದ್ದು, ಈ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7.30ರ ವೇಳೆಗೆ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನದ ವೇಳೆ ಮತದಾನದ ಪ್ರಮಾಣ ಮಂದಗತಿಯಲ್ಲಿತ್ತು. ಸಂಜೆಯಾಗುತ್ತಿದ್ದಂತೆ ಮತದಾನ ಪ್ರಮಾಣ ಹೆಚ್ಚಾಯಿತು. ಪಟ್ಟಣ, ನಗರ ಪ್ರದೇಶದ ಮತದಾರರು ಬೆಳಗ್ಗೆ 10 ಗಂಟೆ ನಂತರ ಮತಗಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವುದು ಕಂಡು ಬಂತು.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಚನ್ನಪಟ್ಟಣ: ಶೇ. 88.80
ಶಿಗ್ಗಾಂವಿ: ಶೇ. 80.48
ಸಂಡೂರು: ಶೇ. 76.24
ಒಟ್ಟು ಮತದಾನ: ಶೇ. 81.84

ಇಡೀ ದೇಶದ ಗಮನಸೆಳೆದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದ್ದು, ಈ ಬಾರಿ ದಾಖಲೆಯ ಪ್ರಮಾಣದ ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು ಶೇ. 88.80 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,06,866 ಮತದಾರರು ಹಕ್ಕು ಚಲಾಯಿಸಿದ್ದು, ಇದರಲ್ಲಿ 1,00,501 ಪುರುಷರು ಹಾಗೂ 1,06,362 ಮಹಿಳೆಯರು ಮತ ಚಲಾಯಿಸಿದ್ದಾರೆ. ಇವರ ಜತೆಗೆ 3 ಇತರೆ ಮತದಾರರು ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಅಮೆರಿಕದಿಂದ ಬಂದು ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದ ಯುವತಿ

ಉಪ ಚುನಾವಣೆಯಲ್ಲಿ 96ರ ವಯೋವೃದ್ದೆ ದುರ್ಗಮ್ಮ ಆಲದಕಟ್ಟಿ ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 106ಕ್ಕೆ ಆಗಮಿಸಿ ಮತಹಕ್ಕನ್ನು ಚಲಾಯಿಸಿ ಗಮನ ಸೆಳೆದರು. ಮತಗಟ್ಟೆ ಸಂಖ್ಯೆ 135ರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸವಣೂರದ ಸಖಿ ಮತಗಟ್ಟೆಯಲ್ಲಿ ಅಂಜಲಿ ತೆಲಗಿ ಅವರು ಮೊದಲನೇ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು. ಅಮೆರಿಕದ ಆಸ್ಟನ್ ಟೆಕ್ಸಿಸ್ ವಾಸಿಯಾಗಿರುವ ಅನುಷಾ ಸೊಬಾನಿ ಅವರು ಶಿಗ್ಗಾಂವಿ ಪಟ್ಟಣದ ಮತಗಟ್ಟೆ ಸಂಖ್ಯೆ 108ಕ್ಕೆ ಆಗಮಿಸಿ ಹಕ್ಕು ಚಲಾಯಿಸಿದರು.

ಇನ್ನು ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಇವಿಎಂ ಅದಲು ಬದಲು ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಮರು ಮತದಾನ ನಡೆಸುವಂತೆ ಆಗ್ರಹಿಸಿ ಮತಗಟ್ಟೆ 76ರ ಬಳಿ ಮತದಾರರು ಪ್ರತಿಭಟನೆ ನಡೆಸಿದರು.

ಈ ಸುದ್ದಿಯನ್ನೂ ಓದಿ | SC Internal Reservation: ಎಸ್‌ಸಿ ಒಳ ಮೀಸಲಾತಿ ಜಾರಿಗೆ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದ ಸರ್ಕಾರ

ಚುನಾವಣಾ ಬಹಿಷ್ಕಾರ

ಶಿಗ್ಗಾಂವಿಯ ದಂಡಿನಪೇಟೆಯಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಇಲ್ಲಿನ ಸುಮಾರು 45 ಮನೆಗಳಿಗೆ ಹಕ್ಕುಪತ್ರ ನೀಡದ ಹಿನ್ನೆಲೆ ಜನರು ಮತದಾನದಿಂದ ದೂರ ಉಳಿದರು. ಉಳುವವನೇ ಭೂ ಒಡೆಯ ಕಾಯ್ದೆಯ ಅಡಿ ಜಮೀನು ಹಂಚಿಕೆ ಮಾಡಬೇಕಾಗಿತ್ತು. ಬೇರೆಯವರ ಹೆಸರಿನಲ್ಲಿ ದಲಿತರ ಜಮೀನು ಆರ್‌ಟಿಸಿ ಮಾಡಲಾಗಿತ್ತು. 6 ವರ್ಷಗಳ ಹಿಂದೆ ಇದ್ದಂತಹ 4 ಎಕರೆ ಜಮೀನು ಇದೀಗ ವಕ್ಫ್‌ ಹೆಸರಿಗೆ ಬದಲಾಗಿದೆ ಎನ್ನಲಾಗಿದೆ. ಈ ಜಾಗದಲ್ಲಿ 60 ವರ್ಷಗಳಿಂದ ಜನರು ವಾಸ ಮಾಡುತ್ತಿದ್ದಾರೆ. ನ್ಯಾಯ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ಜನರು ಮತದಾನ ಬಹಿಷ್ಕರಿಸಿದ್ದಾರೆ. ಮನೆಗಳ ಮುಂದೆ ಬಹಿಷ್ಕಾರದ ಪೋಸ್ಟರ್ ಹಾಕಿ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.