Friday, 22nd November 2024

Dr Renuka Ramappa: ಸಾಗರದಾಚೆ ಕನ್ನಡದ ಕಂಪು ಪಸರಿಸಿದ್ದ ಡಾ. ರೇಣುಕಾ ರಾಮಪ್ಪ ಇನ್ನು ನೆನಪು…

Dr Renuka Ramappa

ಸದ್ದಿಲ್ಲದೆ, ಸುದ್ದಿಯಾಗದೆ ಹಲವರು ಕನ್ನಡಕ್ಕಾಗಿ ತುಡಿದು, ಮಿಡಿದು ದುಡಿದಿದ್ದಾರೆ. ಅಂಥವರ ಪಾಲಿಗೆ ಕನ್ನಡ ತಿಂಗಳ ಸಂಭ್ರಮವಲ್ಲ. ಕನ್ನಡ ಅವರಿಗೆ ಕ್ಷಣ ಕ್ಷಣದ ಹಬ್ಬ. ಅವರ ಭಾವ, ಬದುಕು ಮತ್ತು ಅಸ್ತಿತ್ವವೂ ಕನ್ನಡವಾಗಿರುತ್ತದೆ. ತೋರಿಕೆಗಾಗಿ ಕನ್ನಡ ಭಾಷಾ ಪ್ರೀತಿಯನ್ನು ತೋರದೆ ಅಕ್ಷರಶಃ ಕನ್ನಡಕ್ಕಾಗಿಯೇ ತಮ್ಮ ಬದುಕನ್ನು ಅರ್ಪಿಸಿಕೊಂಡವರಿದ್ದಾರೆ. ಆ ಸಾಲಿಗೆ ಅಪ್ಪಟ ಕನ್ನಡತಿ, ಕನ್ನಡ ಪ್ರೇಮಿ ಡಾ. ರೇಣುಕಾ ರಾಮಪ್ಪ (Dr Renuka Ramappa) ಸೇರುತ್ತಾರೆ.

ಸಾಗರದಾಚೆಗೂ ಕನ್ನಡ ಪ್ರೀತಿಯನ್ನು ಬಿತ್ತಿ ಉತ್ತರ ಅಮೆರಿಕಾದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸಲು ಅವಿರತ ಶ್ರಮಿಸಿದ ರೇಣುಕಾ ರಾಮಪ್ಪ ಅವರು ತಮ್ಮ ಎಂಬತ್ತನೇ ವಯಸ್ಸಿನಲ್ಲಿ ವಿಧಿವಶರಾದರು. ನವೆಂಬರ್‌ 8ರಂದು ಕೊನೆಯುಸಿರೆಳೆದ ರೇಣುಕಾ ರಾಮಪ್ಪ ಅವರು ತಮ್ಮ ಪತಿ ಡಾ. ಜಿ.ಎಂ ರಾಮಪ್ಪ, ಮಗ, ಮಗಳು, ಸೊಸೆ ಮತ್ತು ಪ್ರೀತಿಯ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಹಿಳಾ ಆರೋಗ್ಯ ತಜ್ಞೆ

ಫ್ಲೋರಿಡಾ ರಾಜ್ಯದ ಟ್ಯಾಂಪಾ ಬೇ ಪ್ರದೇಶದ ನ್ಯೂಪೋರ್ಟ್‌ ರಿಚಿ ಎಂಬ ಪಟ್ಟಣದಲ್ಲಿ ವಾಸವಿದ್ದ ಇವರು ನಾಲ್ಕು ದಶಕಗಳ ಕಾಲ ಮಹಿಳಾ ಆರೋಗ್ಯ ತಜ್ಞೆಯಾಗಿ ಸೇವೆ ಸಲ್ಲಿಸಿದ್ದರು. ವೃತ್ತಿಯ ಜತೆಗೆ ಕನ್ನಡ ಭಾಷಾ ಪ್ರೀತಿಯ ಕಾರಣಕ್ಕೆ ತಮ್ಮ ಅಪಾರವಾದ ಸಂಘಟನಾ ಶಕ್ತಿಯಿಂದಾಗಿ ಫ್ಲೋರಿಡಾ ಮತ್ತು ಅಮೆರಿಕಾದಲ್ಲಿ ಅನೇಕ ಕನ್ನಡ ಸಂಘ-ಸಂಸ್ಥೆಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದಾರೆ. ರೇಣುಕಾ ರಾಮಪ್ಪ ಅವರು ತೊಂಬತ್ತರ ದಶಕದಲ್ಲಿಯೇ ಟ್ಯಾಂಪಾ ಬೇ ಪ್ರದೇಶದ ಕನ್ನಡ ಕುಟುಂಬಗಳನ್ನು ಒಂದೆಡೆ ಸೇರಿಸಿ ಸಮಾರಂಭಗಳನ್ನು ಏರ್ಪಡಿಸಿದವರು. ಮುಂದೆ ಶ್ರೀಗಂಧ ಕನ್ನಡ ಕೂಟವನ್ನು ಸ್ಥಾಪಿಸಿ ವಿದೇಶದಲ್ಲೂ ಕನ್ನಡತನವನ್ನು ಸಂಭ್ರಮಿಸಿದರು. ಕನ್ನಡ ಪರಿಚಾರಿಕೆಯನ್ನೇ ತಮ್ಮ ಕಾಯಕವಾಗಿಸಿಕೊಂಡಿದ್ದ ಇವರು ಆಗ್ನೇಯ ಅಮೆರಿಕಾದ ಕನ್ನಡ ಸಂಘಗಳನ್ನು ಒಟ್ಟುಗೂಡಿಸಿ ಪ್ರಾದೇಶಿಕ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿ ಸೈ ಎನಿಸಿಕೊಂಡರು.

ʼಅಕ್ಕʼ ಹಿಂದಿನ ಶಕ್ತಿ

ಡಾ. ರೇಣುಕಾ ರಾಮಪ್ಪ ಅವರು 1998 ರಲ್ಲಿ ಪ್ರತಿಷ್ಠಿತ ‘ಅಕ್ಕ’ ಸಂಸ್ಥೆಯ ಸಹ ಸಂಸ್ಥಾಪಕರಾಗಿ ಮತ್ತು ಅದರ ಪ್ರಥಮ ಕಾರ್ಯದರ್ಶಿಯಾಗಿ ಪ್ರಾಮಾಣಿಕತೆಯಿಂದ ಕೆಲಸಗಳನ್ನು ನಿರ್ವಹಿಸಿದ್ದಾರೆ. ನಂತರದಲ್ಲಿ 2000 ಇಸವಿಯಿಂದ 2006 ರವರೆಗೆ ‘ಅಕ್ಕ’ ಸಂಸ್ಥೆಯ ಉಪಾಧ್ಯಕ್ಷೆಯಾಗಿ ಸೇವೆಗೈದರು. ಅದೇ ಸಮಯದಲ್ಲಿ ಭಯಾನಕ ಚಂಡಮಾರುತವು ಸುತ್ತ ಬೀಸಿ ಹಾದು ಹೋಗುತ್ತಿದ್ದರೂ ಧೃತಿಗೆಡದ ಕೆಚ್ಚಿನ ಈ ಕನ್ನಡತಿ ಸಂಚಾಲಕಿಯಾಗಿ ಸಮಾರಂಭವು ಅಡೆತಡೆಗಳಿಲ್ಲದೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.

ʼನಾವಿಕʼ ಸಂಸ್ಥೆಯ ರೂವಾರಿ

ಇಳಿ ವಯಸ್ಸಿನಲ್ಲೂ ಸುಮ್ಮನೆ ಕೂರದ ಈ ಗಟ್ಟಿಗಿತ್ತಿ 2009 ರಲ್ಲಿ ಕನ್ನಡಾಭಿಮಾನಿಗಳ ಜತೆ ಸೇರಿಕೊಂಡು ʼನಾವಿಕʼ ಸಂಸ್ಥೆಯನ್ನು ಶುರು ಮಾಡುವುದರೊಂದಿಗೆ ತಮ್ಮ ಕನ್ನಡ ಸೇವೆಯನ್ನು ಮುಂದುವರಿಸಿದರು. ಆರಂಭದಿಂದಲೂ ಈ ಸಂಸ್ಥೆಯ ಸಹಸಂಸ್ಥಾಪಕರಾಗಿ ಪೋಷಿಸಿ ಬೆಳೆಸಿದ್ದಾರೆ. 2005 ರಿಂದ 2017 ರವರೆಗೆ ಇದರ ಅಧ್ಯಕ್ಷೆಯಾಗಿ 2016 ರಲ್ಲಿ ಬೆಂಗಳೂರಿನಲ್ಲಿ ಪ್ರಥಮ “ನಾವಿಕೋತ್ಸವ” ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. 2017 ರಲ್ಲಿ ಟೆಕ್ಸಾಸ್‌ ನ ಡಲ್ಲಾಸ್‌ ನಗರದಲ್ಲಿ ʼನಾವಿಕʼ ವಿಶ್ವ ಕನ್ನಡ ಸಮಾವೇಶದ ಆಯೋಜನೆಯಲ್ಲಿಯೂ ಇವರು ಪ್ರಧಾನ ಪಾತ್ರವನ್ನು ವಹಿಸಿದ್ದರು. ಮುಂದೆ ಆಯೋಜನೆಗೊಂಡ ನಾವಿಕ ಸಮಾವೇಶಗಳಿಗೂ ತಮ್ಮ ಪತಿಯ ಜತೆಗೆ ಸೇರಿಕೊಂಡು ಪ್ರೋತ್ಸಾಹ ನೀಡುತ್ತಾ ಬಂದರು. ಮರಣದ ಸಮಯದಲ್ಲಿ ಅಂದರೆ ತಮ್ಮ ಎಂಬತ್ತನೆ ವಯಸ್ಸಿನಲ್ಲೂ ರೇಣುಕಾ ರಾಮಪ್ಪ ಅವರು ನಾವಿಕದ ವಿಶ್ವಸ್ಥ ಮಂಡಳಿಯಲ್ಲಿ ಅಪಾರ ಜೀವನೋತ್ಸಾಹದೊಂದಿಗೆ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು.

ಕನ್ನಡೇತರ ಚಟುವಟಿಕೆಗಳಲ್ಲೂ ಮುಂದೆ

ಕನ್ನಡದ ಕೆಲಸಗಳೊಂದಿಗೆ ಕನ್ನಡೇತರ ಚಟುವಟಿಕೆಗಳಲ್ಲೂ ರೇಣುಕಾ ರಾಮಪ್ಪ ಅವರು ಮುಂದಿದ್ದರು. ಟ್ಯಾಂಪಾ ನಗರದ ಹಿಂದೂ ದೇವಸ್ಥಾನದಲ್ಲಿ ಸ್ವಯಂ ಸೇವಕಿಯಾಗಿ ದುಡಿಯುತ್ತಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯೆಯಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದರು. ತಾಯಿ ಹೃದಯ ಮತ್ತು ವಿಶಾಲ ಮನೋಭಾವದ ಅವರು ಅಸಂಖ್ಯಾತರ ಪ್ರೀತಿ-ಅಭಿಮಾನವನ್ನು ಸಂಪಾದಿಸಿದ್ದರು. ತಮ್ಮ ಆತಿಥ್ಯ ಗುಣದಿಂದಲೂ ಹೆಸರುವಾಸಿಯಾಗಿದ್ದರು. ಅಮೆರಿಕಾದ ಕನ್ನಡಿಗರು ಇವರ ಕೈ ರುಚಿಯ ಊಟವನ್ನು ಸವಿದಿದ್ದಾರೆ. ಕರ್ನಾಟಕ ರಾಜ್ಯದ ಅನೇಕ ಗಣ್ಯರು ಅಮೆರಿಕಾ ಪ್ರವಾಸ ಕೈಗೊಂಡಾಗ ತಪ್ಪದೇ ರೇಣುಕಾ ರಾಮಪ್ಪ ಅವರ ಮನೆಗೆ ಭೇಟಿಕೊಟ್ಟು ವಿಶ್ರಾಂತಿ ಪಡೆದು ಸ್ವರ್ಗಕ್ಕೂ ಕಿಚ್ಚು ಹಚ್ಚುವ ರಸಗವಳವನ್ನು ಸವಿದಿದ್ದಾರೆ. ವರನಟ ಡಾ. ರಾಜಕುಮಾರ್‌ ಕೂಡ ಇವರ ಕೈ ರುಚಿಯ ಊಟ ತಿಂದು ಬಹುವಾಗಿ ಮೆಚ್ಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಶಿವಮೊಗ್ಗ, ಮೈಸೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಕನ್ನಡ ಲೋಕಕ್ಕೆ ನಷ್ಟ

ತಮ್ಮ ಪೀಳಿಗೆಯ ಜನರನ್ನು ಕನ್ನಡ ಭಾಷೆ ಮತ್ತು ಕನ್ನಡ ಕಟ್ಟುವ ಕೆಲಸಕ್ಕಾಗಿ ಹುರಿದುಂಬಿಸುತ್ತಿದ್ದ ಡಾ. ರೇಣುಕಾ ರಾಮಪ್ಪ ಅವರ ಮರಣ ಕನ್ನಡ ಲೋಕಕ್ಕೆ ತುಂಬಲಾರದ ನಷ್ಟ. ಬದುಕಿನುದ್ದಕ್ಕೂ ಕನ್ನಡಕ್ಕಾಗಿ ಕಾಯಾ ವಾಚಾ ಮನಸಾ ದುಡಿದ ಅವರು ಕನ್ನಡಿಗರ ಮನಗಳಲ್ಲಿ ಚಿರಸ್ಥಾಯಿ. ʼಪರೋಪಕಾರಂ ಇದಂ ಶರೀರಂʼ ಎಂಬ ಅವರ ಗುಣವೂ ಎಲ್ಲರಿಗೆ ಮಾದರಿ ಮತ್ತು ಸ್ಫೂರ್ತಿ. ಕನ್ನಡದ ಮಗಳು ಈಗ ಕನ್ನಡಾಂಬೆಯ ಮಡಿಲು ಸೇರಿದ್ದಾರೆ. ಅವರದ್ದು ಕನ್ನಡಕ್ಕಾಗಿ ಜನನ ಮತ್ತು ಕನ್ನಡಕ್ಕಾಗಿ ಮರಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕನ್ನಡ ನಾಡು, ನುಡಿಯ ಮಾತುಗಳು ಕೇಳಿ ಬಂದಾಗೆಲ್ಲ ರೇಣುಕಾ ರಾಮಪ್ಪ ಅಂಥವರು ನೆನಪಾದರೆ ಅದು ಅವರಿಗೆ ಸಲ್ಲುವ ನಿಜವಾದ ಗೌರವ. ಕನ್ನಡಕ್ಕಾಗಿ ಕೈ ಮತ್ತು ಕೊರಳೆತ್ತಿ ಕಾಯವನ್ನು ಬಗ್ಗಿಸಿ ದುಡಿದ ರೇಣುಕಾ ರಾಮಪ್ಪ ಅವರು ಮತ್ತೊಮ್ಮೆ ಹುಟ್ಟಿ ಬರಲಿ. ಹಾಂ. ಕನ್ನಡಿಗರಾಗಿಯೇ ಹುಟ್ಟಲಿ!