ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನವನ್ನು (Pandit Jawaharlal Nehru Birth Anniversary) ಮಕ್ಕಳ ದಿನಾಚರಣೆಯಾಗಿ (Childrens Day 2024) ದೇಶಾದ್ಯಂತ ನವೆಂಬರ್ 14 ರಂದು ಗುರುವಾರ ಆಚರಿಸಲಾಗುತ್ತಿದೆ. ಮಕ್ಕಳ ಪ್ರೀತಿಯ ಚಾಚಾ ನೆಹರೂ (Chacha neharu) ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಆಸಕ್ತಿದಾಯಕ ಕೆಲವು ಸಂಗತಿಗಳು ಇಲ್ಲಿವೆ.
ಪ್ರೀತಿಯಿಂದ ಚಾಚಾ ಎಂದೇ ಕರೆಯಲ್ಪಡುವ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಮಕ್ಕಳ ಮೇಲಿನ ಅವರ ಆಳವಾದ ಪ್ರೀತಿ ಮತ್ತು ವಾತ್ಸಲ್ಯದ ಕಾರಣಕ್ಕೆ ಅವರ ಜನ್ಮ ದಿನವನ್ನು ಬಾಲ ದಿವಸ್ ಎಂದು ಆಚರಿಸಲು ಕಾರಣವಾಯಿತು.
ಮಕ್ಕಳು ಭವಿಷ್ಯದ ಶಿಲ್ಪಿಗಳು ಎಂದು ಜವಾಹರ್ ಲಾಲ್ ನೆಹರು ನಂಬಿದ್ದರು. ಮಕ್ಕಳ ದಿನಾಚರಣೆಯು ಮಕ್ಕಳ ಕುತೂಹಲ ಮತ್ತು ಸಂತೋಷವನ್ನು ಆಚರಿಸುವ ಹಬ್ಬವಾಗಿದೆ. ಈ ದಿನ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳು, ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಜೊತೆಗೆ ಅವರಿಗೆ ಉಡುಗೊರೆಯನ್ನು ನೀಡಲಾಗುತ್ತದೆ.
ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಸಂತೋಷವನ್ನು ಗೌರವಿಸಲು ಮತ್ತು ಯುವ ಪೀಳಿಗೆಯನ್ನು ಸಬಲೀಕರಣಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜವಾಹರ ಲಾಲ್ ನೆಹರೂ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
Childrens Day 2024: ಮಕ್ಕಳ ದಿನವನ್ನು ನವೆಂಬರ್ 14ರಂದೇ ಆಚರಿಸುವುದೇಕೆ?
- ನೆಹರು ಅವರನ್ನು 11 ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲಾಯಿತು. ವಿಶ್ವ ಶಾಂತಿಗಾಗಿ ಅವರು ನಡೆಸಿದ ಜಾಗತಿಕ ಪ್ರಚಾರ ಮತ್ತು ಅವರ ಅವಿರತ ಪ್ರಯತ್ನಗಳಿಗಾಗಿ ಅವರು ಈ ಗೌರವಾನ್ವಿತ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡರೂ ಆಯ್ಕೆಯಾಗಲಿಲ್ಲ.
- ಜವಾಹರಲಾಲ್ ನೆಹರು ಅವರ ಆರಂಭಿಕ ಶಿಕ್ಷಣವು ಮನೆಯಲ್ಲಿಯೇ ನಡೆಯಿತು. 16 ವರ್ಷ ವಯಸ್ಸಿನವರೆಗೂ ಅವರ ಕಲಿಕೆಯನ್ನು ಖಾಸಗಿ, ಸರ್ಕಾರಿ ಬೋಧಕರು ನೋಡಿಕೊಳ್ಳುತ್ತಿದ್ದರು.
- ದಿ ಡಿಸ್ಕವರಿ ಆಫ್ ಇಂಡಿಯಾ ಮತ್ತು ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ನೆಹರೂ ಬರೆದಿರುವ ಎರಡು ಪ್ರಮುಖ ಪುಸ್ತಕಗಳು. ಇದರಲ್ಲಿ ಅವರು ತಮ್ಮ ಭಾರತ ಮತ್ತು ಪ್ರಪಂಚದ ಬಗ್ಗೆ ಅಪಾರ ಜ್ಞಾನವನ್ನು ಹಂಚಿಕೊಂಡಿದ್ದಾರೆ.
- ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ಎಂಬುದು ಅವರು ತಮ್ಮ ಮಗಳು ಇಂದಿರಾ ಅವರಿಗೆ ಬರೆದ 146 ಪತ್ರಗಳ ಸಂಕಲನವಾಗಿದೆ.
- ಹ್ಯಾರೋ ಸ್ಕೂಲ್, ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆದ ಅವರು ನ್ಯಾಚುರಲ್ ಸೈನ್ಸ್ ನಲ್ಲಿ ಪದವಿ ಮತ್ತು ಲಂಡನ್ ನ ಇನ್ನರ್ ಟೆಂಪಲ್ ನಲ್ಲಿ ಕಾನೂನು ಪದವಿಯನ್ನು ಪಡೆದರು.
- ಜವಾಹರಲಾಲ್ ನೆಹರೂ ಅವರು ಟುವರ್ಡ್ ಫ್ರೀಡಂ ಎಂಬ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ. ಇದು ಅವರು ಸೆರೆಮನೆಯಲ್ಲಿ ಇದ್ದಾಗ 1936ರಲ್ಲಿ ಲಂಡನ್ನಲ್ಲಿ ಪ್ರಕಟಿಸಲಾಯಿತು.
- ನೆಹರೂ ಅವರ ಹಿರಿಯ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ವಿಶ್ವಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.
- ನೆಹರೂ ಅವರ ಕಿರಿಯ ಸಹೋದರಿ ಕೃಷ್ಣ ಹುತೀಸಿಂಗ್ ಅವರು ಹೆಸರಾಂತ ಸಂಪಾದಿತ ಬರಹಗಾರರಾಗಿದ್ದರು.
- ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಜವಾಹರ್ಲಾಲ್ ನೆಹರೂ ಅವರು ಪಾಶ್ಚಾತ್ಯ ಶೈಲಿಯ ವೇಷಭೂಷಣವನ್ನು ತೊಡೆದುಹಾಕುವ ನಿರ್ಧಾರವನ್ನು ಪ್ರಕಟಿಸಿದ್ದು ವಸಾಹತುಶಾಹಿ ವಿರುದ್ಧ ಅವರ ದಿಟ್ಟ ಹೇಳಿಕೆಯಾಗಿದೆ. ಪಾಶ್ಚಾತ್ಯ ಶೈಲಿಯ ಉಡುಗೆಯ ಬದಲಿಗೆ ಅವರು ಜಾಕೆಟ್ ಆರಿಸಿಕೊಂಡರು.
- ನೆಹರೂ ಅವರು ಭಾರತೀಯ ಸ್ವಾತಂತ್ರ್ಯದ ಸಂಕೇತವಾಗಿ ತಮ್ಮ ಜಾಕೆಟ್ನಲ್ಲಿ ಗುಲಾಬಿಗಳನ್ನು ಇಟ್ಟುಕೊಳ್ಳುತ್ತಿದ್ದರು.
- ಪಂಡಿತ್ ನೆಹರೂ ಎಂದು ಕರೆಯಲ್ಪಡುವ ಜವಾಹರ್ ಲಾಲ್ ನೆಹರೂ ಅವರು ಕಾಶ್ಮೀರಿ ಪಂಡಿತ್ ಸಮುದಾಯದ ಬೇರುಗಳನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನು ಪಂಡಿತ್ ನೆಹರು ಎಂದು ಕರೆಯಲಾಗುತ್ತದೆ.
- ಪಂಡಿತ್ ಜವಾಹರಲಾಲ್ ನೆಹರೂ ಅವರು ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರಾವಧಿಯಲ್ಲಿದ್ದಾಗ ಅವರ ಮೇಲೆ ನಾಲ್ಕು ಬಾರಿ ಹತ್ಯೆ ಪ್ರಯತ್ನ ನಡೆದಿತ್ತು.