Thursday, 14th November 2024

IND vs SA: ಹರಿಣ ಪಡೆಯನ್ನು ಬೇಟೆಯಾಡಿದ ತಿಲಕ್‌, ರನ್‌ ಹೊಳೆಯಲ್ಲಿ ಈಜಿ ಗೆದ್ದ ಭಾರತ!

India to win against South Africa by 12 Runs in 3rd T20I at Centurion

ಸೆಂಚುರಿಯನ್‌: ಕೊನೆಯ ಓವರ್‌ವರೆಗೂ ತೀವ್ರ ಕುತೂಹಲದಿಂದ ಕೂಡಿದ್ದ ರನ್‌ ಹೊಳೆಯ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ 11 ರನ್‌ಗಳಿಂದ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಟೀಮ್‌ ಇಂಡಿಯಾ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs SA) 2-1 ಮುನ್ನಡೆಯನ್ನು ಪಡೆಯಿತು. ಭಾರತದ ಪರ ಸ್ಪೋಟಕ ಬ್ಯಾಟಿಂಗ್‌ ನಡೆಸಿ ಚೊಚ್ಚಲ ಶತಕ ಸಿಡಿಸಿದ್ದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬುಧವಾರ ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 220 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 208 ರನ್‌ಗಳಿಗೆ ಸೀಮಿತವಾಯಿತು.

IND vs SA: ಚೊಚ್ಚಲ ಟಿ20ಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ತಿಲಕ್‌ ವರ್ಮಾ!

ಮಾರ್ಕೊ ಯೆನ್ಸನ್‌ ಆಟ ವ್ಯರ್ಥ

ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ರಯಾನ್‌ ರಿಕಲ್ಟನ್‌ (20ರನ್‌), ರೀಜಾ ಹೆಂಡ್ರಿಕ್ಸ್‌ (21) ಹಾಗೂ ಏಡೆನ್‌ ಮಾರ್ಕ್ರಮ್‌ (29) ಅವರು ಉತ್ತಮ ಆರಂಭ ಪಡೆದ ಹೊರತಾಗಿಯೂ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಟೀಮ್‌ ಇಂಡಿಯಾ ಬೌಲರ್‌ಗಳು ಅವಕಾಶ ನೀಡಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್‌ ಕ್ಲಾಸೆನ್‌ 22 ಎಸೆತಗಳಲ್ಲಿ 41 ರನ್‌ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಔಟ್‌ ಆದರು. ಆದರೆ, ಕೊನೆಯ ಓವರ್‌ವರೆಗೂ ಹೋರಾಟ ನಡಸಿದ ಮಾರ್ಕೊ ಯೆನ್ಸನ್‌, ಕೇವಲ 17 ಎಸೆತಗಳಲ್ಲಿ 54 ರನ್‌ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಹರಿಣ ಪಡೆ ಸೋಲು ಒಪ್ಪಿಕೊಂಡಿತು.

ಭಾರತದ ಪರ ಅರ್ಷದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ, ವರುಣ್‌ ಚಕ್ರವರ್ತಿ ಎರಡು ನಿರ್ಣಾಯಕ ವಿಕೆಟ್‌ ಕಿತ್ತರು.

219 ರನ್‌ ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಅವಕಾಶ ಪಡೆದಿದ್ದ ಭಾರತ ತಂಡ, ತಿಲಕ್‌ ವರ್ಮಾ ಶತಕ ಹಾಗೂ ಅಭಿಷೇಕ್‌ ಶರ್ಮಾ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 220 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ತಿಲಕ್‌-ಅಭಿಷೇಕ್‌ ಜುಗಲ್‌ಬಂದಿ

ಭಾರತ ತಂಡದ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಎರಡನೇ ಎಸೆತದಲ್ಲಿಯೇ ಮಾರ್ಕೊ ಯೆನ್ಸನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ, ಮತ್ತೊರ್ವ ಆರಂಭಿಕ ಅಭಿಷೇಕ್‌ ಶರ್ಮಾ ಜತೆಗೂಡಿ ಕೇವಲ 50 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟವನ್ನು ಆಡಿದರು. ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭಾರತಕ್ಕೆ ಭರ್ಜರಿ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದರು.

ಚೊಚ್ಚಲ ಶತಕ ಸಿಡಿಸಿದ ತಿಲಕ್‌ ವರ್ಮಾ

ತಾವು ಎದುರಿಸಿದ ಮೊದಲನೇ ಎಸೆತದಿಂದಲೇ ತಿಲಕ್‌ ವರ್ಮಾ ಅವರು ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಹರಿಣ ಪಡೆಯ ಬೌಲರ್‌ಗಳಿಗೆ ಬೆವರಿಳಿಸಿದ ತಿಲಕ್‌ ವರ್ಮಾ, 56 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 107 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಅಲ್ಲದೆ ದಕ್ಷಿಣ ಆಫ್ರಿಕಾ ಎದುರು ಚುಟುಕು ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಂದ ಹಾಗೆ ಕೊನೆಯ ಹಂತದಲ್ಲಿ ತಿಲಕ್‌ಗೆ ಸಾಥ್‌ ನೀಡಿದ್ದ ರಮಣ್‌ದೀಪ್‌ ಸಿಂಗ್‌ 6 ಎಸೆತಗಳಲ್ಲಿ 15 ರನ್‌ ಸಿಡಿಸಿದರು.

ದಕ್ಷಿಣ ಆಫ್ರಿಕಾ ಪರ ಆಂಡಿಲೆ ಸಿಮೆಲಾನಿ ಹಾಗೂ ಕೇಶವ್‌ ಮಹಾರಾಜ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 219-6 (ತಿಲಕ್‌ ವರ್ಮಾ 107*, ಅಭಿಷೇಕ್‌ ಶರ್ಮಾ 50; ಆಂಡಿಲೆ ಸಿಮೆಲಾನೆ 34ಕ್ಕೆ 2, ಕೇಶವ್‌ ಮಹಾರಾಜ್‌ 36ಕ್ಕೆ
2, ಮಾರ್ಕೊ ಯೆನ್ಸನ್‌ 28ಕ್ಕೆ 1)

ದಕ್ಷಿಣ ಆಫ್ರಿಕಾ: 20ಓವರ್‌ಗಳಿಗೆ 208-7 (ಮಾರ್ಕೊ ಯೆನ್ಸನ್‌ 54, ಹೆನ್ರಿಚ್‌ ಕ್ಲಾಸೆನ್‌ 41; ಅರ್ಷದೀಪ್‌ ಸಿಂಗ್‌ 37ಕ್ಕೆ 3, ವರುಣ್‌ ಚಕ್ರವರ್ತಿ 54ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ತಿಲಕ್‌ ವರ್ಮಾ