Tuesday, 19th November 2024

‌Vishweshwar Bhat Column: ರ್ಪೋರ್ಚುಗೀಸರಿಂದ ಬಂದ ಪದಗಳು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಪೇರಲೆ, ಅನಾನಸ್, ಪಾವು (ಬ್ರೆಡ್), ಕೌವೆ (ಹೂಕೋಸು), ಪಪಾಯ ಅಥವಾ ಪಪ್ಪಾಯಿ, ನಿಂಬೆ, ತಂಬಾಕು, ಬಟಾಟೆ (ಆಲೂಗಡ್ಡೆ), ಟೊಮ್ಯಾಟೋ, ಪಾದ್ರಿ, ಅಂಜಿ (ಐದು), ಪೀಪಾಯಿ, ಇಗರ್ಜಿ, ಸಾಬೂನು, ಲಾಂದ್ರ, ಕಂದಿಲು, ಮೇಸಿ, ಮೇಜು, ಕಾಜ(ಅಂಗಿಯ ಗುಂಡಿ ಹಾಕುವ ತೂತು), ಮೆಣಸು, ಮಿರ್ಚಿ, ಆಯಾ (ಪರಿಚಾರಕಿ), ಅಲ್ಮೇರಾ, ಚಾವಿ, ಇಸಿ, ಜೂಜು, ಬಾಳೆಜೋವ (Balejoa) ಅರ್ಥಾತ್ ತೆಂಗಿನಕಾಯಿ… ಈ ಪದಗಳನ್ನು ನಾವು ದಿನನಿತ್ಯ ಬಳಸುತ್ತೇವೆ. ಅನೇಕರು ಇವುಗಳನ್ನು ಕನ್ನಡ ಪದಗಳೆಂದೇ ಭಾವಿಸಿರಬಹುದು.

ಅಸಲಿಗೆ ಇವು ಪೋರ್ಚುಗೀಸ್ ಪದಗಳು. ಇವಲ್ಲದೇ ಕನ್ನಡಕ್ಕೆ ಬಂದ ಕೆಲವು ಪದಗಳು ಪೋರ್ಚುಗೀಸ್ ಮತ್ತು ಇಂಗ್ಲಿಷ್ ಅಥವಾ ಯಾವು ದಾದರೊಂದು ಭಾಷೆಯಿಂದ ಬಂದಿರಬಹುದು. ಉದಾಹರಣೆಗೆ, ಪೆನ್ನು, ಟವೆಲ್ಲು, ತೂಫಾನು, ಮಚ್ಚು, ವರಾಂಡ, ಪಿಸ್ತೂಲು, ಬಿಸ್ಕೆಟ್ಟು…
16ನೇ ಶತಮಾನದಲ್ಲಿ ಪೋರ್ಚುಗೀಸರು ಸಮುದ್ರ ಮಾರ್ಗದ ಮೂಲಕ ಭಾರತವನ್ನು ತಲುಪಿ, ಇಲ್ಲಿನ ಪಶ್ಚಿಮ ಕರಾವಳಿಯ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಗೋವಾ, ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದರು. ನಂತರ ನಿಧಾನವಾಗಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಿದರು.

ಅವರು ಬಹಳ ವರ್ಷಗಳಿಂದ ಈ ಪ್ರದೇಶಗಳಲ್ಲಿ ವಾಸವಿದ್ದು, ವ್ಯಾಪಾರ, ಧರ್ಮ ಮತ್ತು ಕೌಟುಂಬಿಕ ಜೀವನದಲ್ಲಿ ಜನರೊಂದಿಗೆ ಬೆರೆತು, ಸಂವಹನ ನಡೆಸಲಾರಂಭಿಸಿದರು. ಹೀಗಾಗಿ, ಪೋರ್ಚುಗೀಸ್ ಭಾಷೆಯ ಕೆಲವು ಪದಗಳು ಕನ್ನಡದಲ್ಲಿ ಸೇರಿಕೊಂಡವು. ಹೀಗಾಗಿ ಸ್ವಾಭಾವಿಕ ವಾಗಿ, ಕನ್ನಡ ಭಾಷೆಯ ಮೇಲೆ ಪೋರ್ಚುಗೀಸ್ ಪ್ರಭಾವವು ಉಂಟಾಯಿತು. ವಾಣಿಜ್ಯಕೇಂದ್ರಗಳು ಮತ್ತು ಬಂದರು ಪಟ್ಟಣಗಳು ಇರುವ ಪ್ರದೇಶಗಳಲ್ಲಿ ಪದಗಳ ವಿನಿಮಯವು ಹೆಚ್ಚಾಗಿ ನಡೆಯಿತು. ಇವು ಅಡುಗೆ, ಗೃಹೋಪಯೋಗಿ ಮತ್ತು ಕೆಲವು ಧಾರ್ಮಿಕ ಅಥವಾ ಆಡಳಿತ ಸಂಬಂಽತ ಪದಗಳಲ್ಲಿ ಗಾಢವಾಗಿ ಕಾಣಿಸಿಕೊಂಡವು. ಪೋರ್ಚುಗೀಸರು ತಾವು ಬರುವಾಗ ಶೇಂಗಾವನ್ನು ಮಾರಾಟಕ್ಕೆ ತಂದರು. ಈ ರೀತಿಯ ಆಹಾರ ಪದಗಳು ಕನ್ನಡದಲ್ಲೂ ಕ್ರಮೇಣ ಬಳಕೆಗೆ ಬಂದವು. ಪೋರ್ಚುಗೀಸ್ ವ್ಯಾಪಾರಿಗಳು ಹೊಸ ವಸ್ತುಗಳು, ಆಹಾರ ಪದಾರ್ಥಗಳು ಮತ್ತು ವಸ್ತುಗಳನ್ನು ಪರಿಚಯಿಸಿದಾಗ, ಅವುಗಳನ್ನು ವಿವರಿಸಲು ಹೊಸ ಪದಗಳ ಅವಶ್ಯಕತೆ ಉಂಟಾಯಿತು.

ಹೀಗಾಗಿ, ಕನ್ನಡಕ್ಕೆ ಆ ಪದಗಳು ನೇರವಾಗಿ ಅಥವಾ ಸ್ವಲ್ಪ ಬದಲಾವಣೆಗಳೊಂದಿಗೆ ಬಂದವು. ವಾಣಿಜ್ಯ ಮತ್ತು ಧಾರ್ಮಿಕ ಉತ್ಸವಗಳಿಂದಾಗಿ,
ಇತರ ಸಂಸ್ಕೃತಿಯ ಕೆಲವು ಪದಗಳು ಕನ್ನಡಿಗರ ಜೀವನಶೈಲಿಗೆ ಸೇರಿಕೊಂಡವು. ಹೀಗೆ ಕನ್ನಡ ಭಾಷೆಯ ಪದಸಂಚಯದಲ್ಲಿ ಹೊಸ
ಪದಗಳು ಬೆರೆತುಹೋದವು. ಕರಾವಳಿ ಕರ್ನಾಟಕದ ಪ್ರದೇಶಗಳಲ್ಲಿ ಕನ್ನಡ ಭಾಷಿಗರು ಮತ್ತು ಪೋರ್ಚುಗೀಸ್ ವ್ಯಾಪಾರಸ್ಥರು ನಿತ್ಯ ಸಂಪರ್ಕದಲ್ಲಿ ಇದ್ದುದರಿಂದ ಸಾಮಾನ್ಯವಾಗಿ ಬಳಕೆಯ ಪದಗಳು ತಾವಾಗಿ ಭಾಷೆಯ ಭಾಗವಾದವು. ಪೋರ್ಚುಗೀಸ್ ಪ್ರಭಾವವು ಕನ್ನಡದ ಮೇಲೆ ದೊಡ್ಡದಾಗಿಲ್ಲದಿರಬಹುದು, ಆದರೆ ಗಮನಾರ್ಹವಾಗಿರುವುದಂತೂ ನಿಜ.

ಈ ಪ್ರಭಾವದಿಂದ ಬಂದ ಪದಗಳು ಹೆಚ್ಚಿನದಾಗಿ ಅಡುಗೆ, ಗೃಹೋಪಯೋಗಿ ಮತ್ತು ಮೂಲಭೂತ ಪದಗಳು. ಇವು ಕನ್ನಡಿಗರ ಪ್ರಾಚೀನ ಮತ್ತು
ವಸ್ತುನಿಷ್ಠ ಪದಸಂಚಯದ ಜತೆಗೆ ಬೆರೆತು, ಭಾಷೆಯನ್ನು ಸ್ವಲ್ಪ ವಿಶಿಷ್ಟ ಮತ್ತು ಬಾಹ್ಯ ಸಂಸ್ಕೃತಿಗೆ ತೆರಳುವಂತೆ ಮಾಡಿವೆ. ಈ ಪದಗಳು ಕನ್ನಡದಲ್ಲಿ ಸುಮಾರು 500 ವರ್ಷಗಳಿಂದ ಬಳಕೆಯಾಗುತ್ತಿರುವುದರಿಂದ, ಕನ್ನಡ ಭಾಷೆ ಯೊಂದಿಗೆ ಮಿಳಿತವಾಗಿಬಿಟ್ಟಿವೆ. ನಾವು ಈ ಪದಗಳನ್ನು ಆಧುನಿಕ ಕನ್ನಡದಲ್ಲಿ ಸಹ ಬಳಸುತ್ತಿದ್ದೇವೆ. ಈ ಹಿನ್ನೆಲೆ ನೋಡಿದರೆ, ಇತರ ಭಾಷೆಗಳಂತೆ ಕನ್ನಡ ಭಾಷೆಯು ಹಿಂದಿನಿಂದಲೂ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿತ್ತಲ್ಲದೇ, ಪ್ರಸ್ತುತದಲ್ಲೂ ಈ ಪದಗಳನ್ನು ತನ್ನದೇ ಆದ ಶೈಲಿಯಲ್ಲಿ ಸ್ವೀಕರಿಸಿದೆ.

ಇದನ್ನೂ ಓದಿ: