ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಯೋಜನೆಗಳಿರುವುದೇ ಜನರ ಕಲ್ಯಾಣಕ್ಕಾಗಿ ಎಂದು ನಾವೆಲ್ಲ ಭಾವಿಸಿರುತ್ತೇವೆ. ಇದು ಭಾಗಶಃ ನಿಜವೆಂದು ಗೊತ್ತಾಗುವುದೇ ಅವನ್ನು ಜಾರಿಗೆ ತರುವಾಗ ಮತ್ತು ಅರ್ಹರಿಗೆ ಸಮರ್ಪಕವಾಗಿ ಹಂಚಿಕೆ ಮಾಡುವಾಗ ಎಂಬುದು ನಂತರದಲ್ಲಿ ಅರಿವಾಗುತ್ತದೆ. ಸಾಮಾಜಿಕ ಜವಾಬ್ದಾರಿಯ ದೃಷ್ಟಿಕೋನ ದೊಂದಿಗೆ ಮತ್ತು ಹಿಂದುಳಿದವರನ್ನು ಮುನ್ನೆಲೆಗೆ ತರುವ ಉದ್ದೇಶದಿಂದ 1983ರಲ್ಲಿ ಆರಂಭಿಸಲಾದ ‘ಗಂಗಾಕಲ್ಯಾಣ’ ಯೋಜನೆಯು ಪ್ರಸ್ತುತ ಬೆಸ್ಕಾಂ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ನಡೆಯುತ್ತಿದೆ.
ಆರಂಭದಲ್ಲಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ನೀಡಲಾಗುತ್ತಿತ್ತು. ಇಂಥ ಹಲವು ಯೋಜನೆಗಳು ಆಯಾ ಕ್ಷೇತ್ರಗಳಿಗೆ ತಲುಪುವಂತೆ ನೋಡಿಕೊಳ್ಳಲು ‘ಶಾಸಕರ ಸಮಿತಿ’ ರಚನೆಯಾಗಿರುತ್ತದೆ. ಅವನ್ನು, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಹಾಕಿದ ಅರ್ಹರಿಗೆ ತಲುಪಿಸುವುದನ್ನು ಆಯಾ ಕ್ಷೇತ್ರದ ಶಾಸಕರ ಮಾಡಿಯೇ ಮಾಡುತ್ತಾರೆ. ಕೆಲವೊಮ್ಮೆ ೧-೨ ಸಾವಿರ ಅರ್ಜಿಗಳು ಬಂದಿರುತ್ತವೆ. ಆದರೆ ಜಿಲ್ಲಾವಾರು ಹಂಚಿಕೆಯಾಗಿರುವ ಯೋಜನೆಗಳು ಬೆರಳೆಣಿಕೆಯಷ್ಟಿರುತ್ತವೆ.
ಇಂಥ ವೇಳೆ ಫಲಾನುಭವಿಗಳನ್ನು ಆರಿಸುವುದು ಕಷ್ಟದ ಕೆಲಸ. ಆದಾಗ್ಯೂ ಅರ್ಹರಾದವರನ್ನು ಗುರುತಿಸಿ, ಗಂಗಾಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳನ್ನುಅವರಿಗೆ ತಲುಪಿಸುವುದು ನಡೆದೇ ಇದೆ. ಈಗ ರಾಜ್ಯದಲ್ಲಿ ಮೇಲಿನ ಮೂರು ನಿಗಮಗಳನ್ನು ಹೊರತುಪಡಿಸಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ೧೨ಕ್ಕೂ ಹೆ ಚ್ಚು ಹೊಸ ನಿಗಮ- ಮಂಡಳಿಗಳನ್ನು ರಚಿಸಲಾಗಿದೆ. ಇವು ಬಹುತೇಕವಾಗಿ
ದೇವರಾಜ ಅರಸು ನಿಗಮದಿಂದ ಪ್ರತ್ಯೇಕಿಸಿ ರಚಿಸಿದಂಥವಾಗಿದ್ದು, ಈ ಮೂಲಕ ವಿವಿಧ ಯೋಜನೆಗಳು ಆಯಾ ನಿಗಮಗಳ ಮೂಲಕ ಅದೇ ವರ್ಗಗಳಿಗೆ ತಲುಪಲು ಸಹಕಾರಿಯಾಗಬಹುದು ಎನ್ನುತ್ತದೆ ಸರಕಾರ. ಸದ್ಯಕ್ಕೆ ೨೦ಕ್ಕೂ ಹೆಚ್ಚು ನಿಗಮ-ಮಂಡಳಿಗಳಿದ್ದರೂ, ಕರಾವಳಿ
ಭಾಗದ ಜನರು ಯೋಜನೆಗಳನ್ನು ದೇವರಾಜ ಅರಸು ನಿಗಮದಿಂದ ಮಾತ್ರ ಪಡೆಯಲು ಸಾಧ್ಯ.
ಇನ್ನುಳಿದಂತೆ ಇತರೆ ಜನಾಂಗದವರ ಸಂಖ್ಯೆ ಕಡಿಮೆ ಅಥವಾ ಇಲ್ಲವೇ ಇಲ್ಲವೆನ್ನಬಹುದು. ಹೀಗಾಗಿ, ಯೋಜನೆ ಮತ್ತು ಅನುದಾನಗಳನ್ನು ವಿಭಜಿಸಿ ವಿತರಿಸುವಾಗ ಸಹಜವಾಗಿಯೇ ತಾರತಮ್ಯ ಮಾಡಿದಂತೆ ಅಥವಾ ಕಡಿಮೆ ಅನುಪಾತದಲ್ಲಿ ನೀಡಿದಂತೆ ಭಾಸವಾಗಬಹುದು.
ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕರಾವಳಿ ವಿಭಾಗಕ್ಕೆ ಒಂದು ನಿಶ್ಚಿತ ಸಮಿತಿ, ಸಂಸ್ಥೆ ರಚಿಸಿ, ಏಕಗವಾಕ್ಷಿ ವ್ಯವಸ್ಥೆಯಲ್ಲಿ ಇಘ ಇರಬಹುದು, ಪಶ್ಚಿಮಘಟ್ಟ ಸಂರಕ್ಷಣೆ ಮತ್ತು ಯೋಜನೆ ಜಾರಿಯಲ್ಲಿನ ಸಮನ್ವಯತೆ ಯನ್ನು ನೋಡಿಕೊಳ್ಳುವುದು ಸೇರಿದಂತೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದು ಮತ್ತು ಕರಾವಳಿ ಪ್ರದೇಶದಲ್ಲಿ ಯಾವ ಭಾಗಕ್ಕೆ ಏನು, ಎಷ್ಟು ಅಗತ್ಯವಿದೆ ಎಂಬುದನ್ನು ಸ್ಥಳೀಯವಾಗಿಯೇ ಗುರುತಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಈ ನಿಟ್ಟಿನಲ್ಲಿ ಕರಾವಳಿಗೆ ಒಂದು ಸ್ವತಂತ್ರ ನಿಗಮ/ಮಂಡಳಿಯ ಅಗತ್ಯವಿದೆ ಎಂಬುದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ. ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಶಾಲೆ ಸಹಿತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಗಮನ ನೀಡುತ್ತಿರುವುದರಿಂದ, ಕರಾವಳಿಯ ಸಮಗ್ರ
ಅಭಿವೃದ್ಧಿಯ ವಿಚಾರವಾಗಿ ಇದರ ಬಲವನ್ನೇ ಇನ್ನಷ್ಟು ವರ್ಧಿಸುವ ಅಥವಾ ಇದಕ್ಕೆ ಹೆಚ್ಚು ಅನುದಾನ ಮೀಸಲಿಡುವ ಕಾರ್ಯವಾದರೂ ಆಗಬೇಕು. ಆದರೆ, ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ನಿಗಮಗಳ ಮೂಲಕ ತಲುಪಿಸುವುದಾದರೆ ಕರಾವಳಿಗೆ ಪ್ರತ್ಯೇಕ
ನಿಗಮವೊಂದನ್ನು ರಚಿಸುವ ತುರ್ತು ಅಗತ್ಯವೂ ಇದೆ.
ಈ ಬಗ್ಗೆಯೂ ಸರಕಾರ ವಿಶೇಷ ಆಸಕ್ತಿ ವಹಿಸಬೇಕಿದೆ. ಈ ಹಿಂದೆ ಕೈಯಲ್ಲಿ ಬರೆದ ಅರ್ಜಿಗಳನ್ನು (ಆಫ್ ಲೈನ್) ಹಾಕುತ್ತಿದ್ದ ಕಾರಣಕ್ಕೋ ಅಥವಾ ಅಷ್ಟೊಂದು ಬೇಡಿಕೆ ಇರದ ಕಾರಣಕ್ಕೋ ಅಥವಾ ಯೋಜನೆ ಕುರಿತು ಜಾಗೃತಿ ಇಲ್ಲದ್ದಕ್ಕೋ ಒಟ್ಟಾರೆ ಬರುತ್ತಿದ್ದ ಅರ್ಜಿಗಳ ಸಂಖ್ಯೆ ಒಂದು ಹಂತದಲ್ಲಿ ಕಡಿಮೆಯಾಗಿರುತ್ತಿತ್ತು. ಇಂದಿನ ಆಧುನಿಕ ಆನ್‌ಲೈನ್ ವ್ಯವಸ್ಥೆಯಲ್ಲಿ, ‘ಗ್ರಾಮ ಒನ್’, ‘ಕರ್ನಾಟಕ ಒನ್’ನಂಥ ಸೈಬರ್ ಕೇಂದ್ರಗಳ ಸಹಾಯದಿಂದ ಎಂಥದೇ ಮಾಹಿತಿಯು ರಾಜ್ಯದ ಮೂಲೆಮೂಲೆಯನ್ನೂ ತಲುಪಿಬಿಡುತ್ತದೆ. ಹೀಗಾಗಿ ಸದ್ಯ ಬರುತ್ತಿರುವ ಅರ್ಜಿಗಳ ಸಂಖ್ಯೆ ಜಾಸ್ತಿ. ಜತೆಗೆ, ಈ ಹಿಂದೆ ಯೋಜನೆಯ ಪ್ರಯೋಜನ ಪಡೆಯದವರು ಪುನಃ ಅರ್ಜಿ ಸಲ್ಲಿಸುವುದರಿಂದ, ಸಹಜವಾಗಿಯೇ ಅರ್ಜಿದಾರರ ಸಂಖ್ಯೆಯು ಆಯಾ ಕ್ಷೇತ್ರಕ್ಕೆ ಬರುವ ಯೋಜನೆಗೆ ಸಂಬಂಧಿಸಿ 3-4 ಪಟ್ಟು ಜಾಸ್ತಿಯಾಗಿರುತ್ತವೆ.ಇಂಥ ಸಂದರ್ಭದಲ್ಲಿ ಟಾರ್ಗೆಟ್ ಕಮ್ಮಿಯಿರು ವುದು ಜನರಿಗೆ ಹೇಗೆ ಅರ್ಥವಾದೀತು? ಸಲ್ಲಿಕೆಯಾದ ನೂರಾರು ಅರ್ಜಿಗಳಲ್ಲಿ 10-15 ಅರ್ಜಿಗಳನ್ನು ಅಂತಿಮ ಗೊಳಿಸುವುದು ಶಾಸಕರ ಸಮಿತಿಯ ಕೆಲಸವಾಗಿರುತ್ತದೆ.
ಇನ್ನು ಕೆಲವೊಮ್ಮೆ ಅರ್ಜಿ ಸಲ್ಲಿಸಲೆಂದು ಕಚೇರಿಗೆ ಹೋದಾಗ, “ನೀವು ಎಂಎಲ್‌ಎ ಹತ್ರ ಒಂದು ಶಿಫಾರಸು ಪತ್ರ ತಗೊಂಡು ಬನ್ನಿ, ನಿಮ್ಮ ಕೆಲಸ ಸರಳವಾಗುತ್ತದೆ” ಎಂಬ ಸಲಹೆಗೆ ಕಟ್ಟುಬಿದ್ದು ಶಾಸಕರ ಪತ್ರಕ್ಕೆ ಯತ್ನಿಸುತ್ತಾರೆ. ಇತ್ತ ಶಾಸಕರೋ ತಮ್ಮ ಕಾರ್ಯಕರ್ತ, ಪರಿಚಿತ ಸ್ಥಳೀಯರು, ಯೋಜನೆಗೆ ಅರ್ಹರು, ಇವರಿಗೆ ಅಗತ್ಯವಿದೆ ಎಂದು ತಿಳಿದು ಶಿಫಾರಸು ಪತ್ರ ಕೊಟ್ಟಿರುತ್ತಾರೆ. ಇಂಥ 40-50 ಶಿಫಾರಸು ಪತ್ರಗಳನ್ನೊಳ ಗೊಂಡ ಅರ್ಜಿಗಳು ಮತ್ತದೇ ಶಾಸಕರ ಸಮಿತಿಯ ಮುಂದೆ ಬಂದಾಗ ಅರಿವಾಗುತ್ತದೆ- ಅಲ್ಲಿ ಆಯ್ಕೆ ಮಾಡಬೇಕಿರುವುದು ೧೦-೧೨ ಫಲಾನುಭವಿಗಳನ್ನು ಮಾತ್ರ ಎಂಬುದು. ಜತೆಗೆ, ಜಿಲ್ಲಾವಾರು ಅನುದಾನದಲ್ಲೂ ವ್ಯತ್ಯಾಸ-ತಾರತಮ್ಯಗಳಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ವಿಧಾನಸಭಾ ಕ್ಷೇತ್ರ ಅಥವಾ ಜಿಲ್ಲಾವಾರು ಹಂಚಿಕೆಯನ್ನು ಗಮನಿಸಿದಾಗ, ಹಿಂದುಳಿದ ವರ್ಗಗಳ ಅಭಿವೃದ್ಧಿ
ನಿಗಮದಿಂದ ೨೦೨೪ರ ಸ್ವಯಂ ಉದ್ಯೋಗ ಯೋಜನೆಗೆ ಬೆಂಗಳೂರು ಉತ್ತರಕ್ಕೆ 16 ಲಕ್ಷ, ದಕ್ಷಿಣಕ್ಕೆ 20 ಲಕ್ಷ, ಮೈಸೂರಿಗೆ 15 ಲಕ್ಷ, ಮಂಡ್ಯಕ್ಕೆ ೯ ಲಕ್ಷ ರು.ಗಳನ್ನು ಖರ್ಚುಮಾಡಿದ್ದರೆ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಸೇರಿದಂತೆ ಒಟ್ಟಾರೆ ಉಡುಪಿ
ಜಿಲ್ಲೆಗೆ ಒದಗಿಸಿರುವುದು ೬ ಲಕ್ಷ ರು.ಗಳನ್ನಷ್ಟೇ. ಇದು ಅನುದಾನ ಮತ್ತು ಯೋಜನೆಗಳ ಜಾರಿಯಲ್ಲಿನ ಸಮಾನತೆಯ ರೀತಿ! ಕರಾವಳಿ ಭಾಗಕ್ಕೂ ಗಂಗಾಕಲ್ಯಾಣ ಯೋಜನೆಯ ಅವಶ್ಯಕತೆಯಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವಷ್ಟೇ ಬೇಡಿಕೆ/ಅವಶ್ಯಕತೆ ಕರಾವಳಿಗೂ
ಇದೆ. ಹೀಗಾಗಿ ಯೋಜನೆಯ ಸಮಗ್ರ ಹಂಚಿಕೆಯ ಬದಲು, ಆಯಾ ಜಿಲ್ಲಾವಾರು/ವಿಧಾನಸಭಾ ಕ್ಷೇತ್ರ ವಾರು ಹಂಚಿಕೆಯಾಗುವಂತೆ ಮಾಡಬೇಕು. ಯೋಜನೆ ಯೊಂದಕ್ಕೆ ರಾಜ್ಯವನ್ನೇ ಸಮಗ್ರವಾಗಿ ಪರಿಗಣಿಸಿದರೂ, ಆಯಾ ವಿಭಾಗ, ಜಿಲ್ಲೆ, ವಿಧಾನಸಭಾ ಕ್ಷೇತ್ರವಾರು ವಿಂಗಡಣೆಯೂ ಮುಖ್ಯ. ಇಲ್ಲವಾದರೆ, ಅದು ಒಂದೆರಡು ಜಿಲ್ಲೆಗೇ ಸೀಮಿತವಾಗಿಬಿಡುತ್ತದೆ.
ಶಾಸಕರ ನೇತೃತ್ವದ ಮೇಲುಸ್ತುವಾರಿ ಸಮಿತಿಯ ರಚನೆಗೆ ಅರ್ಥವೇ ಇಲ್ಲದಂತಾಗುತ್ತದೆ. ಗಂಗಾಕಲ್ಯಾಣ ಯೋಜನೆ ಯಡಿ ವಾರ್ಷಿಕ ಗರಿಷ್ಠ ಪ್ರಮಾಣದಲ್ಲಿನ ಫಲಾನುಭವಿಗಳ ಆಯ್ಕೆಯು ತಾಲೂಕು ಮಟ್ಟದಲ್ಲಾಗಬೇಕು.
ಯಾವುದೇ ಯೋಜನೆಗಾದರೂ ಶಾಸಕರ ಶಿಫಾರಸು ಪತ್ರಕ್ಕೆ ಸಮಿತಿಯಿಂದ ಕೆಲಸ ಮಾಡಿಕೊಡಲಾಗದ ಪರಿಸ್ಥಿತಿಯನ್ನು ಆಯ್ಕೆಯಾಗದ ಜನರಿಗೆ ತಿಳಿಸುವುದು ಕಷ್ಟದ ಕೆಲಸ. ಮತ್ತೊಂದೆಡೆ, ಸರಕಾರದ, ನಿಗಮಗಳ ಆಂತರಿಕ ಸ್ಥಿತಿಗಳೇ ಬೇರೆಯಾಗಿದೆ. ಮೊದಲಿದ್ದ ೩ ನಿಗಮ ಗಳ ಮೂಲಕ ಇಡೀ ರಾಜ್ಯದ ಅಗತ್ಯವಿರುವವರಿಗೆ ಹಲವು ಯೋಜನೆಗಳು ತಲುಪುತ್ತಿದ್ದವು (?) ಅಂದುಕೊಳ್ಳೋಣ. ಆದರೀಗ ಹತ್ತಾರು ನಿಗಮಗಳನ್ನು ಹುಟ್ಟುಹಾಕಿರುವುದರಿಂದ ಯೋಜನೆಗಳನ್ನು ಅಗತ್ಯವಿರುವವರಿಗೆ ಸಮರ್ಪಕವಾಗಿ ತಲುಪಿಸಬೇಕು. ಪ್ರಧಾನಿ ಮೋದಿಯವರು ಭ್ರಷ್ಟಾಚಾರ-ರಹಿತ ‘ಡಿಬಿಟಿ ಸ್ಕೀಮ್’ ಜಾರಿಗೆ ತಂದ ಮೇಲೆ, ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗಬೇಕಿತ್ತು. ಆದರೆ ಸದ್ಯ
ಕರ್ನಾಟಕವು ನಿಗಮ-ಮಂಡಳಿಗಳ ವಿಚಾರದಲ್ಲಿ ದೇಶಾದ್ಯಂತ ಬೇರೆಯದ್ದೇ ರೀತಿಯಲ್ಲಿ ಸುದ್ದಿಯಲ್ಲಿದೆ.
ಸ್ವ-ಉದ್ಯೋಗ ಸಾಲ, ವೃತ್ತಿಪರ ಸಾಲ, ಪ್ರೇರಣಾ ಮತ್ತು ಗಂಗಾ ಕಲ್ಯಾಣ- ಇವು ಅಗತ್ಯವಿರುವ ಹಿಂದುಳಿದ ಜನರಿಗೆ ನಿಗಮಗಳ ಮೂಲಕ ತಲುಪಿಸಲು ತಂದಿರುವ ಪ್ರಮುಖ ಯೋಜನೆಗಳಾಗಿವೆ. ಹಿಂದಿನ ನಿದರ್ಶನವನ್ನೇ ಗಮನಿಸುವುದಾದರೆ, ೨೦೨೦ರಲ್ಲಿ ೨೮೦ ಕೋಟಿ ರು.ನಷ್ಟು
ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಇದರಲ್ಲಿ ೫-೬ ಕೋಟಿ ವೆಚ್ಚದ ಚೈತನ್ಯ ಸಹಾಯಧನ ಯೋಜನೆಯನ್ನು ಪ್ರಸ್ತುತ ನಿಲ್ಲಿಸಲಾಗಿದೆ. ಅರಿವು ಶಿಕ್ಷಣ ಸಾಲ ಇತ್ಯಾದಿಗಳು ಕರಾವಳಿ ಭಾಗಕ್ಕೆ ಬರುವುದೇ ಕಡಿಮೆ, ಇನ್ನು ಕೆಲವು ಯೋಜನೆಗಳ ಹೆಸರೇ ಗೊತ್ತಿರು ವುದಿಲ್ಲ. ಬಹುತೇಕ ಯೋಜನೆಗಳು ರಾಜಧಾನಿಯ ಸುತ್ತಮುತ್ತಲಿನ ಫಲಾನುಭವಿಗಳ ಪಾಲಾಗಿರುತ್ತವೆ. ಅರ್ಹರಿಗೆ ತಲುಪಿದರೆ ಸಂತಸವೇ.
ಆದರೆ ಉಡುಪಿ, ಬೈಂದೂರು, ಕುಂದಾಪುರ ಸೇರಿದಂತೆ ಬಹುತೇಕ ಕಡೆಯ ಜನರು ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವವರು ಎಂಬುದನ್ನು ಸಂಬಂಽತ ಇಲಾಖೆಯವರು ಅರಿಯಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೨೦೧೯ರಲ್ಲಿ ೧೨ರಷ್ಟಿದ್ದ ಗಂಗಾ ಕಲ್ಯಾಣದ ಫಲಾನುಭವಿಗಳ ಸಂಖ್ಯೆ ೨೦೨೩ರಲ್ಲಿ ೬೦ಕ್ಕೇರಿದ್ದರೆ, ಬೈಂದೂರು ವ್ಯಾಪ್ತಿಯಲ್ಲಿ ೨೦ರಷ್ಟಿದ್ದುದು ೨೫ಕ್ಕೇರಿದೆಯಷ್ಟೇ. ಇಂಥ ಅಸಮಂಜಸ
ಅನುಪಾತಗಳು ಜನರಿಗೆ ಬೇಸರವುಂಟುಮಾಡುತ್ತವೆ. ಈ ಸ್ವಯಂ ಉದ್ಯೋಗ ಯೋಜನೆಗಳಲ್ಲಿ ಟಾರ್ಗೆಟ್ ಜಾಸ್ತಿಯಿರುವುದರಿಂದ, ಸಹಜವಾಗಿ ಅರ್ಜಿದಾರರಿಗೆ ಸುಲಭದಲ್ಲಿ ದೊರಕುತ್ತವೆ. ೨೦೨೪-೨೫ನೇ ಸಾಲಿನಲ್ಲಿ ಇದಕ್ಕಾಗಿ ೧೨ ಕೋಟಿ ರು.ಎತ್ತಿಡಲಾಗಿದೆ.
ಗಂಗಾಕಲ್ಯಾಣಕ್ಕಾಗಿ ೩೫.೬ ಕೋಟಿ, ಅರಿವು ಶಿಕ್ಷಣ ಸಾಲ ಯೋಜನೆಗೆ ೧೭ ಕೋಟಿ, ಸ್ವಾವಲಂಬಿ ಸಾರಥಿ ಯೋಜನೆಗೆ ೭.೫ ಕೋಟಿ, ಹೊಲಿಗೆಯಂತ್ರ ವಿತರಣೆ ಯೋಜನೆಗೆ ೮ ಕೋಟಿಯಷ್ಟು ಹಣವನ್ನು ಮೀಸಲಿಡಲಾಗಿದೆ, ಒಟ್ಟು ೧೨೩ ಕೋಟಿ ನಿಗದಿಪಡಿಸಲಾಗಿದೆ ಎಂದಿದೆ ಇಲಾಖೆ. ಕಳೆದ ವರ್ಷ ೧೮೪ ಕೋಟಿ ರು. ಆರ್ಥಿಕ ಗುರಿಯಿದ್ದರೂ ಸಾಧಿಸಿದ್ದು ೫೩ ಕೋಟಿ ಮಾತ್ರ ಎಂದು ಇಲಾಖೆಯ ವರದಿಯೇ ತಿಳಿಸಿದೆ. ಇದು ಅನುಷ್ಠಾನದ ವೈಫಲ್ಯವಲ್ಲದೆ ಮತ್ತೇನು? ಜಿಲ್ಲಾವಾರು ಹಂಚಿಕೆ ಮಾಡುವಾಗಲೂ ಬೇಡಿಕೆಗೆ ತಕ್ಕಂತೆ ಗುರಿನಿಗದಿ ಮಾಡುವುದಿಲ್ಲ. ಈ ವೃತ್ತಿಪರ ಯೋಜನೆಯಲ್ಲಿ ೧-೨ ಅಥವಾ ಅಪರೂಪಕ್ಕೊಮ್ಮೆ ೩-೪ ಯೋಜನೆಗಳನ್ನು ಕೊಟ್ಟರೂ ಕೊಡಬಹುದು. ಗಂಗಾಕಲ್ಯಾಣದ ವಿಚಾರದಲ್ಲಂತೂ ಕೇಳುವುದೇ ಬೇಡ! ಇನ್ನಾದರೂ ಫಲಾನುಭವಿಗಳ ಬೇಡಿಕೆಯ ಈಡೇರಿಕೆಗೆ, ಆಯಾ ಕ್ಷೇತ್ರಗಳ ಶಾಸಕರ ಸಲಹೆಗಳನ್ನೂ ಪರಿಗಣಿಸಿ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಜಾರಿಗೆ ತರಬೇಕು. ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆಯೂ ಸರಕಾರ ನೋಡಿಕೊಳ್ಳಬೇಕು. ಒಟ್ಟಾರೆ ಹೇಳುವುದಾದರೆ ಸರಕಾರದ ಯೋಜನೆ ಎಲ್ಲ ಜಿಲ್ಲೆಗೂ ಸಮಾನವಾಗಿ ಸಿಗುವಂತೆ ಆಗಬೇಕು.