ಮುಂಬೈ: ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ(Baba Siddique) ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್ ವಿಚಾರಣೆ ವೇಳೆ ದಿನಕ್ಕೊಂದು ಆಘಾತಕಾರಿ ವಿಚಾರಗಳನ್ನು ಬಾಯ್ಬಿಡುತ್ತಿದ್ದಾನೆ. ಸಿದ್ದಿಕಿ ಮೇಲೆ ಗುಂಡು ಹಾರಿಸಿದ ನಂತರ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು ಅರ್ಧ ಗಂಟೆ ಆಸ್ಪತ್ರೆಯ ಹೊರಗೆ ಕಾಯುತ್ತಿದೆ ಎಂದು ಗೌತಮ್ ವಿಚಾರಣೆ ವೇಳೆ ಹೇಳಿದ್ದಾನೆ.
ಗುಂಡಿನ ದಾಳಿಯ ನಂತರ ತಕ್ಷಣ ತನ್ನ ಅಂಗಿಯನ್ನು ಬದಲಾಯಿಸಿಕೊಂಡ ಶೂಟರ್, ತಾನು ಆಸ್ಪತ್ರೆಯ ಹೊರಗೆ 30 ನಿಮಿಷಗಳ ಕಾಲ ಗುಂಪಿನ ನಡುವೆ ನಿಂತಿದ್ದ. ಸಿದ್ದಿಕಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದ ಕೂಡಲೇ ಅಲ್ಲಿಂದ ಜಾಗ ಖಾಲಿಮಾಡಿರುವುದಾಗಿ ಹೇಳಿದ್ದಾನೆ.
ಪ್ರಕರಣದ ಹಿನ್ನೆಲೆ
66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅ. 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ವೇಳೆ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದೇ ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಹಲವರನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಸೇರಿದಂತೆ ಮೂವರು ಎಸ್ಕೇಪ್ ಆಗಿದ್ದರು.
ಕಳೆದ ವಾರ ಉತ್ತರ ಪ್ರದೇಶದಲ್ಲಿ ಗೌತಮ್ ಮತ್ತು ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು. ಮುಂಬೈ ಪೊಲೀಸ್ ಅಪರಾಧ ವಿಭಾಗ ಮತ್ತು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (Special Task Force) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಮುಂಬೈಗೆ ಕರೆ ತಂದು ವಿಚಾರಣೆಗೊಳಪಡಿಸಲಾಗುತ್ತಿದೆ.
ಸಲ್ಮಾನ್ ಮೇಲಿನ ದ್ವೇಷಕ್ಕೆ ಕೊಲೆ?
ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್‌ಗೆ ಪದೇ ಪದೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿರುವ ಕಾರಣ ಅದೇ ಕೋಪದಲ್ಲಿ ಹತ್ಯೆ ಮಾಡಿದ್ದಾನೆ ಎಂಬುವ ವಾದವಿದೆ.
ಈ ಸುದ್ದಿಯನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡ; ಇಬ್ಬರು ದುಷ್ಕರ್ಮಿಗಳು ಅರೆಸ್ಟ್